ಸಂಗೀತ ನಿರ್ದೇಶಕ ಎಂಎಂ ಕೀರವಾಣಿ (MM Keeravani) ಅವರು ಈಗ ಯಶಸ್ಸಿನ ಉತ್ತುಂಗಕ್ಕೆ ಏರಿದ್ದಾರೆ. ಅವರು ಸಂಗೀತ ಸಂಯೋಜಿಸಿದ ‘ನಾಟು ನಾಟು..’ ಹಾಡು (Naatu Naatu Song) ಸೂಪರ್ ಹಿಟ್ ಆಗಿದ್ದೂ ಅಲ್ಲದೇ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಪಡೆದು ಬೀಗಿದೆ. ಆ ಮೂಲಕ ಭಾರತಕ್ಕೆ ಮೊದಲ ಆಸ್ಕರ್ ಪ್ರಶಸ್ತಿ (Oscar Award) ತಂದುಕೊಡುವಲ್ಲಿ ಈ ಸಾಂಗ್ ಯಶಸ್ವಿ ಆಗಿದೆ. ಇಂಥ ಸಾಧನೆ ಮಾಡಿದ್ದಕ್ಕಾಗಿ ಕೀರವಾಣಿ ಅವರನ್ನು ಎಲ್ಲರೂ ಹೊಗಳುತ್ತಿದ್ದಾರೆ. ಎಲ್ಲ ಕಡೆಗಳಿಂದ ಅವರಿಗೆ ಅಭಿನಂದನೆ ಸಲ್ಲಿಸಲಾಗುತ್ತಿದೆ. ಅಚ್ಚರಿ ಏನೆಂದರೆ, ಎಂಎಂ ಕೀರವಾಣಿ ಅವರಿಗೆ ಆಸ್ಕರ್ ಸಿಕ್ಕಿರುವುದು ಇದೇ ಮೊದಲೇನೂ ಅಲ್ಲವಂತೆ. ‘ನನ್ನ ಪಾಲಿಗೆ ಇದು ಎರಡನೇ ಆಸ್ಕರ್ ಪ್ರಶಸ್ತಿ’ ಎಂದು ಅವರು ಹೇಳಿದ್ದಾರೆ. ಅವರ ಈ ಹೇಳಿಕೆ ಅಚ್ಚರಿ ಮೂಡಿಸಿದೆ.
ಅಕಾಡೆಮಿ ಅವಾರ್ಡ್ ಗೆದ್ದು ಬಂದಿರುವ ಎಂಎಂ ಕೀರವಾಣಿ ಅವರು ಕೆಲವು ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಈ ವೇಳೆ ಅವರು 30 ವರ್ಷಗಳ ಹಿಂದಿನ ವಿಷಯವನ್ನು ಬಹಿರಂಗಪಡಿಸಿದ್ದಾರೆ. ‘ಗಲಾಟಾ ಪ್ಲಸ್’ಗೆ ನೀಡಿದ ಸಂದರ್ಶನದಲ್ಲಿ ಅವರು ಹಳೇ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಈ ವೇಳೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾಗೆ ಕೀರವಾಣಿ ಧನ್ಯವಾದ ಅರ್ಪಿಸಿದ್ದಾರೆ.
‘ರಾಮ್ ಗೋಪಾಲ್ ವರ್ಮಾ ಅವರೇ ನನ್ನ ಪಾಲಿನ ಮೊದಲ ಆಸ್ಕರ್. 2023ರಲ್ಲಿ ಪಡೆದಿರುವುದು ನನ್ನ ಎರಡನೇ ಆಸ್ಕರ್ ಪ್ರಶಸ್ತಿ. ಯಾಕೆಂದರೆ, ಆರಂಭದ ದಿನಗಳಲ್ಲಿ ಸುಮಾರು 51 ಮಂದಿ ನನ್ನ ಆಡಿಯೋ ಕ್ಯಾಸೆಟ್ ಅನ್ನು ಕಸದ ಬುಟ್ಟಿಗೆ ಎಸೆದಿದ್ದರು. ನನ್ನ ಹಾಡುಗಳನ್ನು ಯಾರೂ ಕೇಳಲೇ ಇಲ್ಲ. ಒಬ್ಬ ಹೊಸಬ ಬಂದಾಗ ಯಾರು ಗಮನಿಸ್ತಾರೆ? ಕೆಲವರಿಗೆ ನನ್ನ ಟ್ಯೂನ್ ಇಷ್ಟ ಆಗಿದ್ದರೂ ಕೂಡ ನನ್ನ ಜೊತೆ ಕೆಲಸ ಮಾಡಲು ಆಸಕ್ತಿ ತೋರಿಸಲಿಲ್ಲ’ ಎಂದು ಎಂಎಂ ಕೀರವಾಣಿ ಹೇಳಿದ್ದಾರೆ. ಆ ಕಷ್ಟದ ಸಂದರ್ಭದಲ್ಲಿ ಕೀರವಾಣಿಗೆ ಅವಕಾಶ ನೀಡಿದ್ದೇ ರಾಮ್ ಗೋಪಾಲ್ ವರ್ಮಾ.
‘ನನಗೆ ‘ಕ್ಷಣ ಕ್ಷಣಂ’ ಸಿನಿಮಾದಲ್ಲಿ ಕೆಲಸ ಮಾಡಲು ರಾಮ್ ಗೋಪಾಲ್ ವರ್ಮಾ ಅವಕಾಶ ನೀಡಿದರು. ಆ ಸಮಯದಲ್ಲಿ ‘ಶಿವ’ ಚಿತ್ರದಿಂದ ಅವರಿಗೆ ದೊಡ್ಡ ಯಶಸ್ಸು ಸಿಕ್ಕಿತ್ತು. ಅವರ ಪಾಲಿಗೆ ‘ಶಿವ’ ಚಿತ್ರವೇ ಆಸ್ಕರ್. ನನ್ನ ಪಾಲಿಗೆ ರಾಮ್ ಗೋಪಾಲ್ ವರ್ಮಾ ಅವರೇ ಆಸ್ಕರ್. ಅವರು ನನಗೆ ಅವಕಾಶ ಕೊಟ್ಟ ನಂತರ ಬೇರೆ ಬೇರೆ ನಿರ್ಮಾಪಕರು ಕೂಡ ನನ್ನನ್ನು ಆಯ್ಕೆ ಮಾಡಿಕೊಳ್ಳಲು ಆರಂಭಿಸಿದರು’ ಎಂದು ಎಂಎಂ ಕೀರವಾಣಿ ಹೇಳಿದ್ದಾರೆ.
Hey @mmkeeravaani I am feeling dead because only dead people are praised like this ??? pic.twitter.com/u8c9X8kKQk
— Ram Gopal Varma (@RGVzoomin) March 25, 2023
ಈ ಸಂದರ್ಶನದ ವಿಡಿಯೋ ಕ್ಲಿಪ್ ವೈರಲ್ ಆಗಿದೆ. ಅದನ್ನು ಶೇರ್ ಮಾಡಿಕೊಂಡಿರುವ ರಾಮ್ ಗೋಪಾಲ್ ವರ್ಮಾ ಅವರು, ‘ಹೇ ಕೀರವಾಣಿ.. ನನಗೆ ಸತ್ತಂತೆ ಫೀಲ್ ಆಗುತ್ತಿದೆ. ಯಾಕೆಂದರೆ ಕೇವಲ ಸತ್ತವರನ್ನು ಮಾತ್ರ ಈ ರೀತಿ ಹೊಗಳಲಾಗುತ್ತದೆ’ ಎಂದು ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:30 pm, Sun, 26 March 23