Ram Charan: ‘ನಮ್ಮನ್ನು ಆಸ್ಕರ್ ವೇದಿಕೆಗೆ ಕರೆಯಲಿಲ್ಲ, ಆ ಬಗ್ಗೆ ಈಗ ಮಾತು ಬೇಡ’: ರಾಮ್ ಚರಣ್
Naatu Naatu Song | Oscars 2023: ಆಸ್ಕರ್ ಸಮಾರಂಭದಲ್ಲಿ ಏನೆಲ್ಲ ನಡೆಯಿತು ಅಂತ ಹತ್ತಿರದಿಂದ ಕಂಡವರು ‘ಆರ್ಆರ್ಆರ್’ ತಂಡದವರು. ಆ ದಿನದ ಬಗ್ಗೆ ರಾಮ್ ಚರಣ್ ಮಾತಾಡಿದ್ದಾರೆ.
ಎಂಎಂ ಕೀರವಾಣಿ ಅವರು ಸಂಗೀತ ಸಂಯೋಜನೆ ಮಾಡಿದ ‘ಆರ್ಆರ್ಆರ್’ ಸಿನಿಮಾದ ‘ನಾಟು ನಾಟು..’ ಹಾಡು (Naatu Naatu Song) ಆಸ್ಕರ್ ಗೆದ್ದಿದೆ ಎಂಬುದು ಸಂತಸದ ವಿಷಯ. ಆದರೆ ರಾಮ್ ಚರಣ್ ಮತ್ತು ಜೂನಿಯರ್ ಎನ್ಟಿಆರ್ ಅವರ ಅಭಿಮಾನಿಗಳಿಗೆ ಒಂದು ವಿಚಾರದಲ್ಲಿ ಬೇಸರ ಆಗಿದೆ. ಆಸ್ಕರ್ ಪ್ರಶಸ್ತಿ (Oscar Awards) ಪ್ರದಾನ ಸಮಾರಂಭದ ವೇದಿಕೆಯಲ್ಲಿ ಜೂನಿಯರ್ ಎನ್ಟಿಆರ್ ಮತ್ತು ರಾಮ್ ಚರಣ್ ಅವರು ‘ನಾಟು ನಾಟು..’ ಹಾಡಿಗೆ ಡ್ಯಾನ್ಸ್ ಮಾಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಕೊನೇ ಸಮಯದಲ್ಲಿ ಆ ಪ್ಲ್ಯಾನ್ ರದ್ದಾಯಿತು. ಅದಕ್ಕೆ ಕಾರಣ ಏನು ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ. ಈ ಬಗ್ಗೆ ರಾಮ್ ಚರಣ್ (Ram Charan) ಅವರು ಈಗ ಮಾತನಾಡಿದ್ದಾರೆ.
ಮಾರ್ಚ್ 12ರಂದು ಲಾಸ್ ಏಂಜಲಿಸ್ನ ಡಾಲ್ಬಿ ಥಿಯೇಟರ್ನಲ್ಲಿ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಅಂದು ವೇದಿಕೆಯಲ್ಲಿ ಹೆಜ್ಜೆ ಹಾಕಲು ರಾಮ್ ಚರಣ್ ಸಿದ್ಧವಾಗಿದ್ದರು. ಆದರೆ ಅಲ್ಲಿ ಆಗಿದ್ದೇ ಬೇರೆ. ‘ಅವರು ನಮ್ಮನ್ನು ಕರೆಯುತ್ತಾರೆ ಅಂತ ನಾನು ಶೇ.100ರಷ್ಟು ರೆಡಿಯಾಗಿದ್ದೆ. ಆದರೆ ನಿಜಕ್ಕೂ ಏನಾಯಿತೋ ನನಗೆ ತಿಳಿದಿಲ್ಲ. ಅವರು ನಮ್ಮನ್ನು ಕರೆಯಲಿಲ್ಲ. ಆ ಬಗ್ಗೆ ಈಗ ಮಾತನಾಡೋದು ಬೇಡ. ವೇದಿಕೆಯಲ್ಲಿ ಡ್ಯಾನ್ಸ್ ಮಾಡಿದ ತಂಡದವರು ತುಂಬ ಚೆನ್ನಾಗಿ ಮಾಡಿದರು. ನಮಗಿಂತಲೂ ಚೆನ್ನಾಗಿ ಡ್ಯಾನ್ಸ್ ಮಾಡಿದರು’ ಎಂದು ರಾಮ್ ಚರಣ್ ಹೇಳಿದ್ದಾರೆ.
ಇದನ್ನೂ ಓದಿ: ‘RRR’ ಚಿತ್ರತಂಡದಲ್ಲಿ ಒಳಜಗಳ; ಆಸ್ಕರ್ ಗೆದ್ದ ಬಳಿಕ ಬಯಲಾಯ್ತು ಅಸಮಾಧಾನ
‘ಹಲವು ವೇದಿಕೆಗಳಲ್ಲಿ, ಹಲವು ಸಂದರ್ಭಗಳಲ್ಲಿ ನಾನು ಆ ಹಾಡಿಗೆ ಡ್ಯಾನ್ಸ್ ಮಾಡಿದ್ದೇನೆ. ಈಗ ಭಾರತಕ್ಕಾಗಿ ಬೇರೆಯವರು ಡ್ಯಾನ್ಸ್ ಮಾಡುವುದನ್ನು ನಾವು ಪ್ರೇಕ್ಷಕರ ಸಾಲಿನಲ್ಲಿ ಕುಳಿತು ನೋಡುವ ಸಮಯ. ಇದು ನಮ್ಮ ಹಾಡು ಮಾತ್ರವಲ್ಲ. ಅದು ಇಡೀ ಭಾರತದ ಹಾಡು’ ಎಂದಿದ್ದಾರೆ ರಾಮ್ ಚರಣ್.
ಜ್ಯೂನಿಯರ್ ಎನ್ಟಿಆರ್ ಹೇಳಿದ್ದೇ ಬೇರೆ:
ಆಸ್ಕರ್ ಸಮಾರಂಭದಲ್ಲಿ ಏನೆಲ್ಲ ನಡೆಯಿತು ಅಂತ ಹತ್ತಿರದಿಂದ ಕಂಡವರು ‘ಆರ್ಆರ್ಆರ್’ ತಂಡದವರು. ಆ ವೇದಿಕೆಯಲ್ಲಿ ‘ನಾಟು ನಾಟು..’ ಹಾಡಿಗೆ ಯಾಕೆ ಡ್ಯಾನ್ಸ್ ಮಾಡಿಲ್ಲ ಎಂಬುದಕ್ಕೆ ಜ್ಯೂನಿಯರ್ ಎನ್ಟಿಆರ್ ಅವರು ಬೇರೆಯದೇ ಕಾರಣ ನೀಡಿದ್ದರು. ಸೂಕ್ತ ತಯಾರಿ ಮಾಡಿಕೊಳ್ಳದ ಕಾರಣ ತಾವು ಡ್ಯಾನ್ಸ್ ಮಾಡಿಲ್ಲ ಎಂದು ಅವರು ಹೇಳಿದ್ದರು.
ಇದನ್ನೂ ಓದಿ:‘RRR’ ಕಿರಿಕ್ ಬಗ್ಗೆ ಹೆಚ್ಚಿತು ಅನುಮಾನ; ಕ್ಷಮೆ ಕೇಳಿದ ‘ನಾಟು ನಾಟು..’ ಗಾಯಕ ಕಾಲ ಭೈರವ
‘ನಾನು ಡ್ಯಾನ್ಸ್ ಮಾಡಬೇಕು ಅಂತ ಅಂದುಕೊಂಡಿದ್ದೆ. ಆದರೆ ಅದು ಸಾಧ್ಯವಾಗುತ್ತಿಲ್ಲ. ಯಾಕೆಂದರೆ ರಿಹರ್ಸಲ್ ಮಾಡಲು ನಮಗೆ ಸಮಯ ಸಿಕ್ಕಿಲ್ಲ. ನಾವು ಸೂಕ್ತ ತಯಾರಿ ಮಾಡಿಕೊಳ್ಳದೇ ಜಗತ್ತಿನ ಅತಿ ದೊಡ್ಡ ವೇದಿಕೆ ಏರಲು ಆಗುವುದಿಲ್ಲ. ನಾನು ಬ್ಯುಸಿ ಆಗಿದ್ದೆ. ರಾಮ್ ಚರಣ್ ಕೂಡ ಮೊದಲೇ ಒಪ್ಪಿಕೊಂಡ ಕೆಲಸಗಳ ಕಾರಣದಿಂದ ಬ್ಯುಸಿ ಆಗಿದ್ದರು. ರಿಹರ್ಸಲ್ ಮಾಡಿಲ್ಲದ ಕಾರಣ ನಾವು ವೇದಿಕೆಯಲ್ಲಿ ನಾಟು ನಾಟು ಹಾಡಿಗೆ ಪರ್ಫಾರ್ಮ್ ಮಾಡುವುದಿಲ್ಲ’ ಎಂದು ಜೂನಿಯರ್ ಎನ್ಟಿಆರ್ ಹೇಳಿದ್ದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.