‘ಮಫ್ತಿ’ ಹಿಟ್ ಆದ ನಂತರದಲ್ಲಿ ನಿರ್ದೇಶಕ ನರ್ತನ್ (Nartan) ಅವರು ಸೈಲೆಂಟ್ ಆದರು. ಯಾರ ಜತೆಗೂ ಸಿನಿಮಾ ಮಾಡಿಲ್ಲ. ಶಿವಣ್ಣ ಹಾಗೂ ನರ್ತನ್ ಮತ್ತೊಮ್ಮೆ ಕೈ ಜೋಡಿಸಬೇಕಿತ್ತು. ಆದರೆ, ಅದು ಮುಂದಕ್ಕೆ ಹೋಗಿದೆ. ಈಗ ನರ್ತನ್ ಹಾಗೂ ಯಶ್ (Yash) ಸಿನಿಮಾ ಮಾಡುತ್ತಾರೆ ಎಂಬ ಸುದ್ದಿ ಇದೆ. ಯಶ್ ಹಾಗೂ ರಾಮ್ ಚರಣ್ ಈ ಚಿತ್ರದಲ್ಲಿ ಮುಖ್ಯಭೂಮಿಕೆ ನಿರ್ವಹಿಸಲಿದ್ದಾರೆ ಎನ್ನಲಾಗಿದೆ. ಈ ಚಿತ್ರದ ಕಥೆ ಕೇಳಿದ್ದ ರಾಮ್ ಚರಣ್ ಅವರು ಹೋಲ್ಡ್ನಲ್ಲಿ ಇಟ್ಟಿದ್ದರು ಎನ್ನಲಾಗಿದೆ. ಈಗ ಈ ಬಗ್ಗೆ ಹೊಸ ಸುದ್ದಿ ಹೊರ ಬಿದ್ದಿದೆ. ರಾಮ್ ಚರಣ್ ಅವರು ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ಟಾಲಿವುಡ್ ಅಂಗಳದಲ್ಲಿ ಸುದ್ದಿ ಹರಿದಾಡಿದೆ.
ರಾಮ್ ಚರಣ್ ಅವರು ‘ಆರ್ಆರ್ಆರ್’ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಈ ಚಿತ್ರದಲ್ಲಿ ಇಬ್ಬರು ಹೀರೋಗಳು. ಆದಾಗ್ಯೂ ಯಾವ ಪಾತ್ರವು ಕಡಿಮೆ ಎಂದು ಕಾಣಿಸಿಲ್ಲ. ಈಗ ನರ್ತನ್ ಮಾಡುತ್ತಿರುವ ಸಿನಿಮಾದಲ್ಲೂ ಇಬ್ಬರು ಹೀರೋಗಳು ಇರಲಿದ್ದಾರೆ ಎನ್ನುತ್ತಿವೆ ಮೂಲಗಳು. ಯಶ್ ಹಾಗೂ ರಾಮ್ ಚರಣ್ ಕಾಂಬಿನೇಷನ್ ಯಾವ ರೀತಿಯಲ್ಲಿ ಮೂಡಿ ಬರಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಇಬ್ಬರು ಸ್ಟಾರ್ಗಳ ಜತೆ ಸಿನಿಮಾ ಮಾಡೋದು ನರ್ತನ್ಗೆ ಹೊಸದಲ್ಲ. ‘ಮಫ್ತಿ’ ಚಿತ್ರದಲ್ಲಿ ಈ ಪ್ರಯೋಗ ಮಾಡಿ ಯಶಸ್ಸು ಕಂಡಿದ್ದರು. ಈಗ ಅವರು ಮತ್ತದೇ ಪ್ರಯೋಗ ಮಾಡಲು ಮುಂದೆ ಬಂದಿದ್ದಾರೆ ಎನ್ನಲಾಗಿದೆ. ಈ ಸಿನಿಮಾ ಬಗ್ಗೆ ಶೀಘ್ರವೇ ಅಪ್ಡೇಟ್ ಸಿಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.
ರಾಮ್ ಚರಣ್ ಟಾಲಿವುಡ್ನಲ್ಲಿ ಸೂಪರ್ ಸ್ಟಾರ್. ಅನೇಕ ನಿರ್ದೇಶಕರು ಹಾಗೂ ನಿರ್ಮಾಪಕರು ಅವರ ಕಾಲ್ಶೀಟ್ ಪಡೆಯಲು ಕಾದು ಕೂತಿದ್ದಾರೆ. ಆದರೆ, ಅದು ಅಷ್ಟು ಸುಲಭಕ್ಕೆ ಸಿಗೋದಲ್ಲ. ನರ್ತನ್ ಕೂಡ ಅಷ್ಟೇ, ಮೊದಲ ಸಿನಿಮಾ ತೆರೆಕಂಡ ಬಳಿಕ ಸಾಕಷ್ಟು ಗ್ಯಾಪ್ ತೆಗೆದುಕೊಂಡಿದ್ದಾರೆ. ಈಗ ಇಬ್ಬರೂ ಒಂದಾಗುತ್ತಿರುವ ವಿಚಾರ ಸಹಜವಾಗಿಯೇ ಕುತೂಹಲ ಮೂಡಿಸಿದೆ. ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಲಿದೆ.
ಇದನ್ನೂ ಓದಿ: ನಿಂತೇ ಹೋಯ್ತು ರಾಮ್ ಚರಣ್ ಹೊಸ ಸಿನಿಮಾ?; ರಾಜಮೌಳಿ ಎಫೆಕ್ಟ್ ಎಂದು ದೂಷಿಸಿದ ಫ್ಯಾನ್ಸ್
‘ಕೆಜಿಎಫ್ 2’ ತೆರೆಗೆ ಬಂದ ಬಳಿಕ ಯಶ್ ಅವರು ಯಾವುದೇ ಹೊಸ ಸಿನಿಮಾ ಘೋಷಿಸಿಲ್ಲ. ಈ ಬಗ್ಗೆ ಅಭಿಮಾನಿಗಳಿಗೆ ಕುತೂಹಲ ಇದೆ. ಅವರ ಮುಂದಿನ ಚಿತ್ರ ಯಾವುದು ಎಂದು ತಿಳಿದುಕೊಳ್ಳಲು ಫ್ಯಾನ್ಸ್ ಕಾದಿದ್ದಾರೆ. ಶೀಘ್ರವೇ ಈ ಬಗ್ಗೆ ಘೋಷಣೆ ಆಗುವ ಸಾಧ್ಯತೆ ಇದೆ.