‘ಭವಿಷ್ಯ ಇನ್ನೂ ಭಯಬೀಳಿಸುವಂತಿದೆ’: ರಶ್ಮಿಕಾ ಮಂದಣ್ಣ ಅವರ ನಕಲಿ ವಿಡಿಯೋಗೆ ನಾಗ ಚೈತನ್ಯ ಪ್ರತಿಕ್ರಿಯೆ

ತಮ್ಮ ನಕಲಿ ವಿಡಿಯೋ ವೈರಲ್​ ಆಗಿದ್ದರ ಬಗ್ಗೆ ರಶ್ಮಿಕಾ ಮಂದಣ್ಣ ಅವರು ಸೋಶಿಯಲ್​ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಅದನ್ನು ರಿ-ಪೋಸ್ಟ್​ ಮಾಡಿಕೊಂಡಿರುವ ತೆಲುಗು ನಟ ನಾಗ ಚೈತನ್ಯ ಅವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ಇಂಥ ಕೆಲಸ ಮಾಡುವ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

‘ಭವಿಷ್ಯ ಇನ್ನೂ ಭಯಬೀಳಿಸುವಂತಿದೆ’: ರಶ್ಮಿಕಾ ಮಂದಣ್ಣ ಅವರ ನಕಲಿ ವಿಡಿಯೋಗೆ ನಾಗ ಚೈತನ್ಯ ಪ್ರತಿಕ್ರಿಯೆ
ರಶ್ಮಿಕಾ ಮಂದಣ್ಣ, ನಾಗ ಚೈತನ್ಯ

Updated on: Nov 08, 2023 | 2:44 PM

ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಳ್ಳುವ ಕಿಡಿಗೇಡಿಗಳಿಂದ ಸೆಲೆಬ್ರಿಟಿಗಳಿಗೆ ಚಿಂತೆ ಶುರುವಾಗಿದೆ. ಬೇರೆಯವರ ಅಶ್ಲೀಲ ವಿಡಿಯೋಗೆ ನಟಿಯರ ಮುಖವನ್ನು ಎಡಿಟ್​ ಮಾಡಿ ಹರಿಬಿಡಲಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಕೆಲವೇ ದಿನಗಳ ಹಿಂದೆ ರಶ್ಮಿಕಾ ಮಂದಣ್ಣ ಅವರ ನಕಲಿ ವಿಡಿಯೋ (Rashmika Mandanna Viral Video) ವೈರಲ್ ಆಗಿತ್ತು. ಬೇರೆ ಯುವತಿಯ ಹಾಟ್​ ವಿಡಿಯೋಗೆ ರಶ್ಮಿಕಾ ಮಂದಣ್ಣ ಅವರ ಮುಖವನ್ನು ಎಡಿಟ್​ ಮಾಡಿ ವೈರಲ್​ ಮಾಡಲಾಗಿತ್ತು. ಆ ವಿಚಾರಕ್ಕೆ ಸಂಬಂಧಿಸಿದಂತೆ ಅನೇಕ ಸೆಲೆಬ್ರಿಟಿಗಳು ಪ್ರತಿಕ್ರಿಯೆ ನೀಡಿದ್ದಾರೆ. ಅಮಿತಾಭ್​ ಬಚ್ಚನ್​, ರಶ್ಮಿಕಾ ಮಂದಣ್ಣ ಬಳಿಕ ಈಗ ಟಾಲಿವುಡ್​ನ ಸ್ಟಾರ್​ ಹೀರೋ ಅಕ್ಕಿನೇನಿ ನಾಗ ಚೈತನ್ಯ (Naga Chaitanya) ಕೂಡ ತಮ್ಮ ಅನಿಸಿಕೆ ತಿಳಿಸಿದ್ದಾರೆ. ಭವಿಷ್ಯವನ್ನು ಯೋಚಿಸಿದರೆ ಭಯವಾಗುತ್ತದೆ ಎಂದು ಅವರು ಹೇಳಿದ್ದಾರೆ.

ತಮ್ಮ ನಕಲಿ ವಿಡಿಯೋ ವೈರಲ್​ ಆಗಿದ್ದರ ಬಗ್ಗೆ ರಶ್ಮಿಕಾ ಮಂದಣ್ಣ ಅವರು ಸೋಶಿಯಲ್​ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಅದನ್ನು ರಿ-ಪೋಸ್ಟ್​ ಮಾಡಿಕೊಂಡಿರುವ ನಾಗ ಚೈತನ್ಯ ಅವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ಇಂಥ ಕೆಲಸ ಮಾಡುವ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಅವರ ಮಾತಿಗೆ ನೆಟ್ಟಿಗರು ಸಹಮತ ಸೂಚಿಸಿದ್ದಾರೆ. ವಿವಿಧ ರೀತಿಯಲ್ಲಿ ಜನರು ಕಮೆಂಟ್​ ಮಾಡಿದ್ದಾರೆ.

‘ತಂತ್ರಜ್ಞಾನವು ಈ ರೀತಿಯಲ್ಲಿ ದುರ್ಬಳಕೆ ಆಗುತ್ತಿರುವುದು ನೋಡಿದರೆ ಬೇಸರ ಆಗುತ್ತದೆ. ಇದರಿಂದ ಭವಿಷ್ಯದಲ್ಲಿ ಏನಾಗಲಿದೆ ಎಂಬುದನ್ನು ಯೋಚಿಸಿದರೆ ಇನ್ನೂ ಹೆಚ್ಚು ಭಯ ಆಗುತ್ತದೆ. ಈ ರೀತಿ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಂಥ ಕೃತ್ಯದ ಪರಿಣಾಮವಾಗಿ ತೊಂದರೆ ಅನುಭವಿಸುವ ಜನರನ್ನು ಕಾಪಾಡಲು ಸರಿಯಾದ ಕಾನೂನು ಜಾರಿ ಆಗಬೇಕು’ ಎಂದು ನಾಗ ಚೈತನ್ಯ ಅವರು ಪೋಸ್ಟ್​ ಮಾಡಿದ್ದಾರೆ. ಆ ಮೂಲಕ ಅವರು ರಶ್ಮಿಕಾ ಮಂದಣ್ಣ ಅವರಿಗೆ ಬೆಂಬಲ ಸೂಚಿಸಿದ್ದಾರೆ.

ಯಾರ ವಿಡಿಯೋ ಇದು?

ವೈರಲ್ ವಿಡಿಯೋದಲ್ಲಿ ಇರುವುದು ನಿಜವಾಗಿಯೂ ರಶ್ಮಿಕಾ ಮಂದಣ್ಣ ಅಂತ ಅನೇಕರು ಭಾವಿಸಿದ್ದರು. ಆದರೆ ಫ್ಯಾಕ್ಟ್​ ಚೆಕ್​ ಮಾಡಿದಾಗ ಸತ್ಯ ಏನು ಎಂಬುದು ತಿಳಿಯಿತು. ಜರಾ ಪಟೇಲ್​ ಎಂಬ ಯುವತಿಯ ಒರಿಜಿನಲ್​ ವಿಡಿಯೋ ಇದು. ಆ ಬಗ್ಗೆ ಸ್ವತಃ ಜರಾ ಪಟೇಲ್​ ಆಕ್ಷೇಪ ವ್ಯಕ್ತಪಡಿಸಿದರು. ‘ನನ್ನ ದೇಹ ಮತ್ತು ಜನಪ್ರಿಯ ಬಾಲಿವುಡ್​ ನಟಿಯ ಮುಖವನ್ನು ಎಡಿಟ್​ ಮಾಡಿ ಡೀಪ್​ಫೇಕ್​ ವಿಡಿಯೋ ಮಾಡಿದ ಬಗ್ಗೆ ನನಗೆ ಈಗಷ್ಟೇ ಗೊತ್ತಾಯಿತು. ಆ ಡೀಪ್​ಫೇಕ್​ ವಿಡಿಯೋದಲ್ಲಿ ನನ್ನ ಕೈವಾಡ ಇಲ್ಲ. ಈ ಘಟನೆಯಿಂದ ನನಗೆ ಬೇಸರವಾಗಿದೆ. ಸೋಶಿಯಲ್​ ಮೀಡಿಯಾದಲ್ಲಿ ತಮ್ಮ ಫೋಟೋ ಅಪ್​ಲೋಡ್​ ಮಾಡಿಕೊಳ್ಳುವ ಮಹಿಳೆಯರು ಮತ್ತು ಹುಡುಗಿಯರ ಭವಿಷ್ಯದ ಬಗ್ಗೆ ಚಿಂತೆ ಆಗಿದೆ’ ಎಂದು ಜರಾ ಪಟೇಲ್​ ಪೋಸ್ಟ್​ ಮಾಡಿದರು.

ಇದನ್ನೂ ಓದಿ: Rashmika Mandanna: ಡೀಪ್‌ಫೇಕ್ ವಿಡಿಯೋ ಹೇಗೆ ಸೃಷ್ಟಿಯಾಗುತ್ತದೆ? ರಶ್ಮಿಕಾ ಮಂದಣ್ಣ ಅವರ ನಕಲಿ ವಿಡಿಯೋ ಹೇಗೆ ಮಾಡಿದ್ರು?

ರಶ್ಮಿಕಾ ಮಂದಣ್ಣ ಪ್ರತಿಕ್ರಿಯೆ?

‘ಆನ್​ಲೈನ್​ನಲ್ಲಿ ವೈರಲ್​ ಆದ ನನ್ನ ಡೀಪ್​ಫೇಕ್​ ವಿಡಿಯೋ ಬಗ್ಗೆ ಮಾತಾಡಲು ನೋವಾಗುತ್ತಿದೆ. ತಂತ್ರಜ್ಞಾನದ ದುರ್ಬಳಕೆಯಿಂದಾಗಿ ನನಗೆ ಮಾತ್ರವಲ್ಲದೇ ಎಲ್ಲರಿಗೂ ಭಯ ಆಗುತ್ತಿದೆ. ಈಗ ನನಗೆ ಬೆಂಬಲ ಹಾಗೂ ರಕ್ಷಣೆ ನೀಡಿರುವ ನನ್ನ ಫ್ಯಾಮಿಲಿ ಮತ್ತು ಫ್ರೆಂಡ್ಸ್​ಗೆ ಓರ್ವ ಮಹಿಳೆಯಾಗಿ, ಕಲಾವಿದೆಯಾಗಿ ನಾನು ಋಣಿ. ಆದರೆ ಶಾಲೆ, ಕಾಲೇಜಿನಲ್ಲಿ ಓದುತ್ತಿದ್ದಾಗ ಈ ರೀತಿ ಆಗಿದ್ದರೆ ಅದನ್ನು ನಾನು ಹೇಗೆ ಎದುರಿಸಬೇಕಿತ್ತೋ ಗೊತ್ತಿಲ್ಲ. ಈ ರೀತಿಯ ಘಟನೆಗಳಿಂದ ನಮ್ಮಂತಹ ಇನ್ನೂ ಹೆಚ್ಚಿನ ಜನರು ತೊಂದರೆಗೆ ಒಳಗಾಗುವುದಕ್ಕೂ ಮೊದಲೇ ಈ ಸಮಸ್ಯೆಯ ಬಗ್ಗೆ ನಾವು ಗಮನ ಹರಿಸಬೇಕಿದೆ’ ಎಂದಿದ್ದಾರೆ ರಶ್ಮಿಕಾ ಮಂದಣ್ಣ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us