ತೆರೆಗೆ ಬರುತ್ತಿದೆ ತೆನಾಲಿ ರಾಮಕೃಷ್ಣನ ಕತೆ, ಹೀರೋ ಯಾರು ಗೊತ್ತೆ?

Tenali Ramakrishna: ಶ್ರೀ ಕೃಷ್ಣ ದೇವರಾಯನ ಆಸ್ಥಾನದಲ್ಲಿದ್ದ ವಿಕಟ ಕವಿ ಎಂದೇ ಖ್ಯಾತರಾಗಿದ್ದ ತೆನಾಲಿ ರಾಮಕೃಷ್ಣರ ಹಲವಾರು ಕತೆಗಳು ಜನಮಾನಸದಲ್ಲಿವೆ. ಇದೀಗ ತೆನಾಲಿ ರಾಮಕೃಷ್ಣರ ಜೀವನದ ಬಗ್ಗೆ ಸಿನಿಮಾ ಮಾಡಲಾಗುತ್ತಿದೆ. ಜನಪ್ರಿಯ ನಿರ್ದೇಶಕರೊಬ್ಬರು ಈ ಸಾಹಸಕ್ಕೆ ಕೈ ಹಾಕಿದ್ದು, ಸ್ಟಾರ್ ನಟರೊಬ್ಬರು ಸಿನಿಮಾದಲ್ಲಿ ತೆನಾಲಿ ರಾಮಕೃಷ್ಣನ ಪಾತ್ರದಲ್ಲಿ ನಟಿಸಲಿದ್ದಾರೆ.

ತೆರೆಗೆ ಬರುತ್ತಿದೆ ತೆನಾಲಿ ರಾಮಕೃಷ್ಣನ ಕತೆ, ಹೀರೋ ಯಾರು ಗೊತ್ತೆ?
Tenali Ramakrishna

Updated on: Feb 13, 2025 | 1:34 PM

ಪೌರಾಣಿಕ, ಐತಿಹಾಸಿಕ ಸಿನಿಮಾಗಳನ್ನು ಮಾಡುವವರು ಸಾಮಾನ್ಯವಾಗಿ ಮಹಾರಾಜರು, ಪ್ರಮುಖ ದೇವರುಗಳನ್ನು ಪ್ರಧಾನವಾಗಿರಿಸಿಕೊಂಡು ಅವರ ಕತೆಯನ್ನು ತೆರೆಗೆ ತರುತ್ತಾರೆ. ತೆನಾಲಿ ರಾಮ, ಬೀರಬಲ್ಲ ಇನ್ನಿತರೆ ಅದ್ಭುತ ವ್ಯಕ್ತಿ ಅಥವಾ ಪಾತ್ರಗಳ ಬಗ್ಗೆ ಸಿನಿಮಾಗಳನ್ನು ಮಾಡುವುದು ಅಪರೂಪದಲ್ಲೇ ಅಪರೂಪ. ಇದೀಗ ಅಂಥಹಾ ಸಾಹಸಕ್ಕೆ ನಿರ್ದೇಶಕರೊಬ್ಬರು ಕೈ ಹಾಕಿದ್ದಾರೆ. ಅದ್ಭುತ ಪಾತ್ರವಾಗಿ ಗುರುತಿಸಿಕೊಂಡಿರುವ ವಿಕಟ ಕವಿ ತೆನಾಲಿ ರಾಮನ ಪಾತ್ರದ ಬಗ್ಗೆ ಸಿನಿಮಾ ಒಂದು ತೆರೆಗೆ ಬರುತ್ತಿದೆ.

ಶ್ರೀ ಕೃಷ್ಣದೇವರಾಯನ ಆಸ್ಥಾನದಲ್ಲಿದ್ದ ವಿಕಟ ಕವಿ ತೆನಾಲಿ ರಾಮಕೃಷ್ಣನ ಕತೆಯನ್ನು ತೆರೆಗೆ ತರುವ ಸಾಹಸವನ್ನು ತೆಲುಗು ಚಿತ್ರರಂಗ ಮಾಡುತ್ತಿದೆ. ಇತ್ತೀಚೆಗಷ್ಟೆ ಬಿಡುಗಡೆ ಆಗಿ ಸೂಪರ್ ಹಿಟ್ ಆಗಿರುವ ‘ತಂಡೇಲ್’ ಸಿನಿಮಾ ನಿರ್ದೇಶನ ಮಾಡಿರುವ ಚಂದೂ ಮೊಂಡೋಟಿ, ತೆನಾಲಿ ರಾಮಕೃಷ್ಣನ ಕತೆಯನ್ನು ಸಿನಿಮಾ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ತೆನಾಲಿ ರಾಮಕೃಷ್ಣನ ಪಾತ್ರದಲ್ಲಿ ನಟಿಸಲಿರುವವರು ನಾಗ ಚೈತನ್ಯ.

ಮಾಸ್ ಮತ್ತು ರೊಮ್ಯಾಂಟಿಕ್ ಹೀರೋ ಆಗಿ ಗುರುತಿಸಿಕೊಂಡಿರುವ ನಾಗ ಚೈತನ್ಯ ಹಾಸ್ಯ ಕವಿಯ ಪಾತ್ರದಲ್ಲಿ ನಟಿಸಲಿದ್ದು, ಇದು ಅವರ ಪಾಲಿಗೆ ಅತ್ಯಂತ ಸವಾಲಿನ ಪಾತ್ರ ಆಗಿರಲಿದೆ. ನಾಗ ಚೈತನ್ಯ ಪಾಲಿಗೆ ಇದು ಅವರ ಮೊದಲ ಐತಿಹಾಸಿಕ ಕತೆಯುಳ್ಳ ಸಿನಿಮಾ ಆಗಿರಲಿದೆ. ಸಿನಿಮಾದ ಚರ್ಚೆಗಳು ಈಗಾಗಲೇ ಪೂರ್ಣಗೊಂಡಿದ್ದು, ಈ ಸಿನಿಮಾಕ್ಕಾಗಿ ನಾಗ ಚೈತನ್ಯ ಭಿನ್ನ ಲುಕ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾಕ್ಕಾಗಿ ಸಾಕಷ್ಟು ತಯಾರಿಯನ್ನು ಸಹ ಅವರು ಮಾಡಿಕೊಳ್ಳಲಿದ್ದಾರಂತೆ.

ಇದನ್ನೂ ಓದಿ:ಒಂದು ಬಿಡಿಗಾಸು ಪಡೆಯದೆ ಸಿನಿಮಾದಲ್ಲಿ ನಟಿಸಿದ ಪ್ರಭಾಸ್

ಕೃಷ್ಣದೇವರಾಯನ ಆಸ್ಥಾನದಲ್ಲಿದ್ದ ತೆನಾಲಿ ರಾಮನ ಕತೆಗಳು ಇಂದಿಗೂ ಬಹಳ ಜನಜನಿತ. ತೆನಾಲಿ ರಾಮಕೃಷ್ಣ ತನ್ನ ಬುದ್ಧಿವಂತಿಕೆ, ಆತನ ಹಾಸ್ಯಪ್ರಜ್ಞೆಯಿಂದ ಜನಪ್ರಿಯರು. ತೆನಾಲಿ ರಾಮನ ಬಗ್ಗೆ ಹಲವಾರು ಕತೆಗಳು ಈಗಲೂ ಚಾಲ್ತಿಯಲ್ಲಿವೆ. ಅವುಗಳನ್ನೇ ಆಧರಿಸಿ ಚಂದೂ ಮೊಂಡೇಟಿ ಇದೀಗ ಚಿತ್ರಕತೆ ತಯಾರಿ ಮಾಡಿಕೊಂಡಿದ್ದು, ಸಿನಿಮಾದ ಚಿತ್ರೀಕರಣ ಇದೇ ವರ್ಷ ಆರಂಭಿಸಲಿದ್ದಾರೆ.

ನಾಗ ಚೈತನ್ಯ ಹಾಗೂ ಚಂದೂ ಮೊಂಡೇಟಿ ಈ ವರೆಗೆ ಮೂರು ಸಿನಿಮಾಗಳನ್ನು ಒಟ್ಟಿಗೆ ಮಾಡಿದ್ದಾರೆ. ಮೊದಲಿಗೆ ‘ಪ್ರೇಮಂ’, ‘ಸವ್ಯಸಾಚಿ’ ಇತ್ತೀಚೆಗೆ ಬಿಡುಗಡೆ ಆದ ‘ತಂಡೇಲ್’ ಬಳಿಕ ಇದೀಗ ತೆನಾಲಿ ರಾಮಕೃಷ್ಣನ ಸಿನಿಮಾ ಮಾಡುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ