ಒಂದು ಬಿಡಿಗಾಸು ಪಡೆಯದೆ ಸಿನಿಮಾದಲ್ಲಿ ನಟಿಸಿದ ಪ್ರಭಾಸ್
Prabhas: ಭಾರತದ ಅತ್ಯಂತ ದುಬಾರಿ ನಟರಲ್ಲಿ ಪ್ರಭಾಸ್ ಸಹ ಒಬ್ಬರು. ಪ್ರತಿ ಸಿನಿಮಾಕ್ಕೆ ನೂರಾರು ಕೋಟಿ ಸಂಭಾವನೆ ಪಡೆಯುತ್ತಾರೆ. ಪ್ರಭಾಸ್ ಎಷ್ಟೇ ಸಂಭಾವನೆ ಕೇಳಿದರೂ ಕೊಡಲು ಸಿದ್ಧವಾಗಿ ನಿಂತಿದ್ದಾರೆ ಹಲವು ನಿರ್ಮಾಪಕರು. ಪರಿಸ್ಥಿತಿ ಹೀಗಿರುವಾಗ ಪ್ರಭಾಸ್, ಇತ್ತೀಚೆಗೆ ಸಿನಿಮಾ ಒಂದರಲ್ಲಿ ನಟಿಸಿದ್ದು, ಸಿನಿಮಾದಲ್ಲಿ ನಟಿಸಲು ಒಂದು ರೂಪಾಯಿ ಸಂಭಾವನೆಯನ್ನೂ ಅವರು ಪಡೆದಿಲ್ಲ.

ಪ್ರಭಾಸ್, ಪ್ರಸ್ತುತ ಭಾರತೀಯ ಚಿತ್ರರಂಗದ ಅತ್ಯಂತ ದುಬಾರಿ ನಟರಲ್ಲಿ ಪ್ರಮುಖರು. ಸಿನಿಮಾದಲ್ಲಿ ನಟಿಸಲು 100-200 ಕೋಟಿ ಹಣ ಸಂಭಾವನೆಯಾಗಿ ಪಡೆದುಕೊಳ್ಳುತ್ತಾರೆ. ಪ್ರಭಾಸ್ ಎಷ್ಟೇ ದುಬಾರಿ ಸಂಭಾವನೆ ಕೇಳಿದರೂ ಕೊಡಲು ಹಲವು ನಿರ್ಮಾಪಕರು ಸರತಿ ಸಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಹೀಗಿದ್ದಾಗಲೂ ಸಹ ಪ್ರಭಾಸ್ ಇತ್ತೀಚೆಗಿನ ಸಿನಿಮಾ ಒಂದರಲ್ಲಿ ಒಂದು ರೂಪಾಯಿ ಹಣವನ್ನೂ ಪಡೆಯದೆ ಉಚಿತವಾಗಿ ನಟಿಸಿದ್ದಾರೆ. ಆದರೆ ಅದಕ್ಕೆ ಕಾರಣವೂ ಇದೆ.
ಪ್ರಭಾಸ್, ಬೇರೆಯವರ ಸಿನಿಮಾಗಳಲ್ಲಿ ಕ್ಯಾಮಿಯೋ ಅಥವಾ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದು ಬಹಳ ವಿರಳ. ಪ್ರಭಾಸ್ ಈ ವರೆಗೆ ಅತಿಥಿ ಪಾತ್ರದಲ್ಲಿ ನಟಿಸಿರುವುದು ಕೇವಲ ಒಂದೇ ಸಿನಿಮಾದಲ್ಲಿ ಅದೂ ಹಿಂದಿ ಸಿನಿಮಾ ‘ಆಕ್ಷನ್ ಜಾಕ್ಸನ್’. ಅದರ ಹೊರತಾಗಿ ಇನ್ಯಾವುದೇ ಸಿನಿಮಾದಲ್ಲಿ ಪ್ರಭಾಸ್ ಅತಿಥಿ ಪಾತ್ರದಲ್ಲಿ ನಟಿಸಿಲ್ಲ. ಆದರೆ ಇತ್ತೀಚೆಗೆ ಸಿನಿಮಾ ಒಂದರಲ್ಲಿ ಪ್ರಭಾಸ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಅದೂ ತಾವೇ ಸ್ವತಃ ಬಯಸಿ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ನಟಿಸಲು ಹಣವನ್ನು ಸಹ ಪ್ರಭಾಸ್ ಪಡೆದುಕೊಂಡಿಲ್ಲ.
ಡಾ ರಾಜ್ಕುಮಾರ್ ನಾಯಕನಾಗಿ ನಟಿಸಿದ ಮೊದಲ ಸಿನಿಮಾ ‘ಬೇಡರ ಕಣ್ಣಪ್ಪ’ ಸಿನಿಮಾ ಇದೀಗ ತೆಲುಗಿನಲ್ಲಿ ‘ಕಣ್ಣಪ್ಪ’ ಹೆಸರಿನಲ್ಲಿ ತೆರೆಗೆ ಬರಲಿದ್ದು ಈ ಸಿನಿಮಾದಲ್ಲಿ ಪ್ರಭಾಸ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶಿವನ ಭಕ್ತನ ಪಾತ್ರದಲ್ಲಿ ಪ್ರಭಾಸ್ ಈ ಸಿನಿಮಾದಲ್ಲಿ ನಟಿಸಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಸಿನಿಮಾದಲ್ಲಿ ನಟಿಸಲು ಯಾವುದೇ ಸಂಭಾವನೆಯನ್ನು ಪ್ರಭಾಸ್ ಪಡೆದುಕೊಂಡಿಲ್ಲ. ಸಿನಿಮಾದ ನಾಯಕ ಮಂಚು ವಿಷ್ಣು ಈ ವಿಷಯವನ್ನು ಮಾಧ್ಯಮಗಳ ಮುಂದೆ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ:ಪ್ರಭಾಸ್ ಜೊತೆ ನಟಿಸೋ ಆಸೆ ಇದೆಯಾ? ಇಲ್ಲಿದೆ ‘ಸ್ಪಿರಿಟ್’ ತಂಡದ ಅವಕಾಶ
‘ಪ್ರಭಾಸ್ ಬಹಳ ದೊಡ್ಡ ನಟ, ಈ ಪಾತ್ರವನ್ನು ಅವರು ಸುಲಭವಾಗಿ ರಿಜೆಕ್ಟ್ ಮಾಡಬಹುದಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ, ಪಾತ್ರದ ವಿವರ ಹೇಳಿದ ಕೂಡಲೇ ತಾವೇ ಈ ಪಾತ್ರ ಮಾಡುವುದಾಗಿ ಒಪ್ಪಿಕೊಂಡಿದ್ದಲ್ಲದೆ ಸಮಯಕ್ಕೆ ಸರಿಯಾಗಿ ನಟಿಸಿದ್ದಾರೆ. ಅವರು ನನ್ನೊಂದಿಗೆ, ನನ್ನ ತಂದೆಯೊಂದಿಗೆ ಹೊಂದಿರುವ ಗೆಳೆತನಕ್ಕೆ ಗೌರವ ನೀಡಿ ಈ ಸಿನಿಮಾದಲ್ಲಿ ನಟಿಸಿದ್ದಾರೆ’ ಎಂದಿದ್ದಾರೆ ಮಂಚು ವಿಷ್ಣು. ಅಸಲಿಗೆ ಪ್ರಭಾಸ್ ಈ ಸಿನಿಮಾದಲ್ಲಿ ನಟಿಸಬೇಕು ಎಂಬುದು ಅವರ ದೊಡ್ಡಪ್ಪನ ಆಸೆಯಾಗಿತ್ತು ಆದರೆ ಪ್ರಭಾಸ್ಗೆ ನಟಿಸಲಾಗಿರಲಿಲ್ಲ, ಹಾಗಾಗಿ ಈಗ ‘ಕಣ್ಣಪ್ಪ’ ಸಿನಿಮಾದ ಅತಿಥಿ ಪಾತ್ರದಲ್ಲಿ ಪ್ರಭಾಸ್ ನಟಿಸಿ, ದೊಡ್ಡಪ್ಪನ ಆಸೆಯನ್ನು ತಕ್ಕ ಮಟ್ಟಿಗೆ ಈಡೇರಿಸಿದ್ದಾರೆ.
ಪ್ರಭಾಸ್ ಮಾತ್ರವೇ ಅಲ್ಲದೆ ಈ ಸಿನಿಮಾ ಮೋಹನ್ಲಾಲ್ ಸಹ ನಟಿಸಿದ್ದು, ಅವರೂ ಸಹ ಯಾವುದೇ ಸಂಭಾವನೆ ಇಲ್ಲದೆ ಸಿನಿಮಾದಲ್ಲಿ ನಟಿಸಿದ್ದಾರಂತೆ. ಈ ವಿಷಯವನ್ನೂ ಸಹ ಮಂಚು ವಿಷ್ಣು ತಿಳಿಸಿದ್ದು, ‘ನನ್ನೊಂದಿಗೆ ಸಂಭಾವನೆ ಬಗ್ಗೆ ಮಾತನಾಡುವಷ್ಟು ದೊಡ್ಡವನಾಗಿಬಿಟ್ಟೆಯಾ ನೀನು’ ಎಂದು ತಮಾಷೆಯಾಗಿ ನನ್ನನ್ನು ಮೋಹನ್ಲಾಲ್ ಅಂಕಲ್ ಛೇಡಿಸಿದರು’ ಎಂದು ವಿಷ್ಣು ಹೇಳಿದ್ದಾರೆ.
ಇದೇ ಸಿನಿಮಾದಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಸಹ ನಟಿಸಿದ್ದಾರೆ. ಆದರೆ ಅವರು ಸಂಭಾವನೆ ಪಡೆದಂತಿದೆ. ಹಾಗಾಗಿ ಮಂಚು ವಿಷ್ಣು ಅಕ್ಷಯ್ ಕುಮಾರ್ ಹೆಸರು ಹೇಳಿಲ್ಲ. ಸ್ವತಃ ಅಕ್ಷಯ್ ಕುಮಾರ್ ಈ ಹಿಂದೆ ಹೇಳಿಕೊಂಡಿದ್ದಂತೆ ಅವರು ಉಚಿತವಾಗಿ ಯಾವ ಸಿನಿಮಾದಲ್ಲಿಯೂ ನಟಿಸುವುದಿಲ್ಲವಂತೆ. ಇನ್ನು ‘ಕಣ್ಣಪ್ಪ’ ಸಿನಿಮಾ ಏಪ್ರಿಲ್ 25ಕ್ಕೆ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




