‘ವಾರ್ 2’ ಸಿನಿಮಾದಿಂದ ಆದ ನಷ್ಟ ಎಷ್ಟು ಕೋಟಿ? ವಿವರಿಸಿದ ವಿತರಕ
War 2 movie losses: ಹೃತಿಕ್ ರೋಷನ್ ಮತ್ತು ಜೂ ಎನ್ಟಿಆರ್ ಒಟ್ಟಿಗೆ ನಟಿಸಿದ ‘ವಾರ್ 2’ ಸಿನಿಮಾ ಬಿಡುಗಡೆಗೆ ಮುಂಚೆ ಭಾರಿ ನಿರೀಕ್ಷೆ ಮೂಡಿಸಿತ್ತು ಆದರೆ ಬಾಕ್ಸ್ ಆಫೀಸ್ನಲ್ಲಿ ಫ್ಲಾಪ್ ಆಯ್ತು. ಸಿನಿಮಾದ ದಕ್ಷಿಣ ಭಾರತ ವಿತರಣೆ ಹಕ್ಕು ಖರೀದಿ ಮಾಡಿದ್ದ ನಾಗವಂಶಿ ‘ವಾರ್ 2’ ಇಂದ ಸಾಕಷ್ಟು ನಷ್ಟ ಅನುಭವಿಸಿದರು. ಇದೀಗ ‘ವಾರ್ 2’ ಸಿನಿಮಾದಿಂದ ತಮಗಾದ ನಷ್ಟ ಎಷ್ಟು ಕೋಟಿ ಎಂದು ಅವರೇ ಹೇಳಿಕೊಂಡಿದ್ದಾರೆ.

ಇಬ್ಬರು ದೊಡ್ಡ ನಟರು ಒಟ್ಟಿಗೆ ನಟಿಸುತ್ತಿದ್ದಾರೆಂದರೆ ಆ ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಮೂಡುವುದು ಸಹಜ. ಅದರಲ್ಲೂ ದಕ್ಷಿಣದ ಸೂಪರ್ ಸ್ಟಾರ್, ಬಾಲಿವುಡ್ನ ಸೂಪರ್ ಸ್ಟಾರ್ ಜೊತೆ ಆದರಂತೂ ಕೇಳಬೇಕೆ? ‘ವಾರ್ 2’ ಸಿನಿಮಾಕ್ಕೆ ಇದೇ ರೀತಿಯ ದೊಡ್ಡ ಹೈಪ್ ಸಿಕ್ಕಿತ್ತು. ಹೃತಿಕ್ ರೋಷನ್ ಮತ್ತು ಜೂ ಎನ್ಟಿಆರ್ ಅವರುಗಳು ಒಟ್ಟಿಗೆ ಈ ಸಿನಿಮಾನಲ್ಲಿ ನಟಿಸಿದ್ದರು. ಸಿನಿಮಾ ಚಿತ್ರೀಕರಣದ ಹಂತದಲ್ಲಿಯೇ ಸಖತ್ ನಿರೀಕ್ಷೆ ಮೂಡಿಸಿತ್ತು. ಆದರೆ ಸಿನಿಮಾ ಬಿಡುಗಡೆ ಬಳಿಕ ಫ್ಲಾಪ್ ಎನಿಸಿಕೊಂಡಿತು. ಅದರಲ್ಲೂ ದಕ್ಷಿಣ ಭಾರತದಲ್ಲಿ ಅಟ್ಟರ್ ಫ್ಲಾಪ್ ಆಯ್ತು. ದಕ್ಷಿಣದಲ್ಲಿ ಸಿನಿಮಾದ ವಿತರಣೆ ಹಕ್ಕು ಪಡೆದಿದ್ದ ಖ್ಯಾತ ನಿರ್ಮಾಪಕ, ವಿತರಕ ನಾಗವಂಶಿ ಅವರು ತಮಗಾದ ನಷ್ಟದ ಬಗ್ಗೆ ಮಾತನಾಡಿದ್ದಾರೆ.
ನಾಗವಂಶಿ, ತೆಲುಗು ಚಿತ್ರರಂಗದ ಖ್ಯಾತ ನಿರ್ಮಾಪಕ ಜೊತೆಗೆ ವಿತರಕ ಸಹ. ನಾಗವಂಶಿಯ ಸಂದರ್ಶನಗಳಂತೂ ಬಹಳ ವೈರಲ್ ಆಗುತ್ತವೆ. ಯಾವುದೇ ಫಿಲ್ಟರ್ ಇಲ್ಲದೆ ನಾಗವಂಶಿ ಮಾತನಾಡುತ್ತಾರೆ. ಮಾಧ್ಯಮಗಳೆದುರು ‘ಪೊಲಿಟಿಕಲಿ ಕರೆಕ್ಟ್’ ಆಗಿರುವ ಪ್ರಯತ್ನವನ್ನೇ ಮಾಡುವುದಿಲ್ಲ ಇದೇ ಕಾರಣಕ್ಕೆ ನಾಗವಂಶಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ವ್ಯಕ್ತಿ. ಕೆಲವು ವಿರೋಧಿಗಳನ್ನು ಸಹ ಇದೇ ಕಾರಣಕ್ಕೆ ಗಳಿಸಿಕೊಂಡಿದ್ದಾರೆ.
‘ವಾರ್ 2’ ಫ್ಲಾಪ್ ಆದಾಗ ನಾಗವಂಶಿ ಇಷ್ಟು ವರ್ಷ ಗಳಿಸಿದ್ದೆಲ್ಲ ಕಳೆದುಕೊಂಡಿದ್ದಾರೆ. ಇದೊಂದೆ ಸಿನಿಮಾದಿಂದ ನಾಗವಂಶಿಗೆ ಸುಮಾರು 50 ಕೋಟಿಗೂ ಹೆಚ್ಚು ಹಣ ನಷ್ಟವಾಗಿದೆ ಎಂದೆಲ್ಲ ಸುದ್ದಿಗಳು ಹರಿದಾಡಿದ್ದವು. ನಾಗವಂಶಿ ತಮ್ಮ ಆಸ್ತಿ ಮಾರಿಕೊಂಡಿದ್ದಾರೆ. ದೊಡ್ಡ ಮೊತ್ತದ ಸಾಲವನ್ನು ತಲೆ ಮೇಲೆ ಹೊತ್ತಿಕೊಂಡಿದ್ದಾರೆ ಎಂದೆಲ್ಲ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಗಳು ಹರಿದಾಡಲು ಆರಂಭವಾಗಿದ್ದವು. ಇದೀಗ ಇವಕ್ಕೆಲ್ಲ ನಾಗವಂಶಿಯೇ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ:‘ವಾರ್ 2’ ಸೋತರೂ ‘ಪಠಾಣ್ 2’ಗೆ ಕೈ ಹಾಕಿದ ವೈಆರ್ಎಫ್
ನಾಗವಂಶಿ ಹೇಳಿಕೊಂಡಿದ್ದಂತೆ ಅವರು ‘ವಾರ್ 2’ ಸಿನಿಮಾದ ಬಿಡುಗಡೆ ಹಕ್ಕನ್ನು 68 ಕೋಟಿ ರೂಪಾಯಿ ಹಣ ತೆತ್ತು ಖರೀದಿ ಮಾಡಿದ್ದರಂತೆ. ‘ವಾರ್ 2’ ಸಿನಿಮಾ ಬಿಡುಗಡೆ ಆದ ಬಳಿಕ ಬಾಕ್ಸ್ ಆಫೀಸ್ನಲ್ಲಿ ಸುಮಾರು 35 ರಿಂದ 40 ಕೋಟಿ ರೂಪಾಯಿ ಹಣ ಗಳಿಕೆ ಮಾಡಿತಂತೆ. ಸುಮಾರು ಜಿಎಸ್ಟಿ ಇನ್ನಿತರೆಗಳ ಬಳಿಕ ನಾಗವಂಶಿಗೆ ಬಂಡವಾಳದ ಸುಮಾರು 50% ಹಣ ಮರಳಿ ಬಂದಿದೆ. ಆದರೆ ಒಪ್ಪಂದದ ಪ್ರಕಾರ ಯಶ್ ರಾಜ್ ಫಿಲಮ್ಸ್ ಅವರು 18 ಕೋಟಿ ರೂಪಾಯಿ ಹಣವನ್ನು ನಷ್ಟ ಪರಿಹಾರವಾಗಿ ನಾಗವಂಶಿಗೆ ನೀಡಿದ್ದಾರೆ. ಇದರಿಂದ ಅವರ ನಷ್ಟದ ಮೊತ್ತ ಇನ್ನಷ್ಟು ಕಡಿಮೆ ಆಗಿದೆ.
ಒಟ್ಟಾರೆ ನಾಗವಂಶಿಯೇ ಹೇಳಿಕೊಂಡಿರುವಂತೆ ‘ವಾರ್ 2’ ಸಿನಿಮಾದಿಂದ ಅವರಿಗೆ ಸುಮಾರು 10-15 ಕೋಟಿ ರೂಪಾಯಿ ನಷ್ಟ ಉಂಟಾಗಿದೆಯಂತೆ. ಆದರೆ ಇದರಿಂದ ಜೂ ಎನ್ಟಿಆರ್ ಅವರೊಟ್ಟಿಗಾಗಲಿ, ಯಶ್ ರಾಜ್ ಫಿಲಮ್ಸ್ ಅವರೊಟ್ಟಿಗಾಗಲಿ ತಮ್ಮ ಸಂಬಂಧ ಹದಗೆಟ್ಟಿಲ್ಲ, ಬದಲಿಗೆ ಯಶ್ ರಾಜ್ ಅವರು ಒಪ್ಪಂದಗಳನ್ನು ಗೌರವಿಸುವ ರೀತಿ, ವಿತರಕರಿಗೆ ಬೆಂಬಲ ನೀಡುವ ರೀತಿ ಅವರಿಗೆ ಹೆಚ್ಚು ಇಷ್ಟವಾಯ್ತು, ಮುಂದಿನ ದಿನಗಳಲ್ಲಿ ಅವರೊಟ್ಟಿಗೆ ವ್ಯಾವಹಾರಿಕ ಸಂಬಂಧ ಚಾಲ್ತಿಯಲ್ಲಿಡಲು ಉತ್ಸುಕನಾಗಿದ್ದೇನೆ ಎಂದೇ ನಾಗವಂಶಿ ಹೇಳಿಕೊಂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




