ನಟ ನಾನಿ (Nani) ತೆಲುಗಿನ ಎರಡನೇ ದರ್ಜೆ ಸ್ಟಾರ್ ನಟ. ಪ್ರಭಾಸ್ (Prabhas), ಅಲ್ಲು ಅರ್ಜುನ್, ಜೂ ಎನ್ಟಿಆರ್, ರಾಮ್ ಚರಣ್, ಮಹೇಶ್ ಬಾಬು ಅಂಥಹಾ ಸ್ಟಾರ್ ನಟರ ಎತ್ತರಕ್ಕೆ ಏರಲು ನಾನಿಗೆ ಈವರೆಗೆ ಸಾಧ್ಯವಾಗಿಲ್ಲವಾದರೂ ಹಿಟ್ ಸಿನಿಮಾ ನೀಡುವುದರಲ್ಲಿ ಹಿಂದೆ ಉಳಿದಿಲ್ಲ. ಮಾಸ್ ಸಿನಿಮಾಗಳಿಗೆ ಅಂಟಿಕೊಳ್ಳದೆ ಹಾಗೆಂದು ಪೂರ್ತಿಯಾಗಿ ಮಾಸ್ ಸಿನಿಮಾದಿಂದ ವಿಮುಖರೂ ಆಗದೆ, ಕಂಟೆಂಟ್ ಹಾಗೂ ಮಾಸ್ ಎರಡನ್ನೂ ಬ್ಯಾಲೆನ್ಸ್ ಮಾಡುತ್ತಾ ಬರುತ್ತಿದ್ದಾರೆ ನಾನಿ. ಆದರೆ ಇತ್ತೀಚೆಗೆ ಅವರಿಗೆ ಭಾರಿ ದೊಡ್ಡ ಅವಕಾಶವೊಂದು ಬಂದಿತ್ತು, ಆದರೆ ಅವಕಾಶವನ್ನು ನಾನಿ ನಿರಾಕರಿಸಿದ್ದಾರೆ ಎನ್ನಲಾಗುತ್ತಿದೆ.
ಭಾರತದ ಇಬ್ಬರು ಸೂಪರ್ ಸ್ಟಾರ್ಗಳೊಟ್ಟಿಗೆ ನಟಿಸುವ ಅವಕಾಶ ನಾನಿಗೆ ಒದಗಿ ಬಂದಿತ್ತು ಆದರೆ ಅದನ್ನು ಅವರು ನಿರಾಕರಿಸಿದ್ದಾರೆ ಎನ್ನಲಾಗುತ್ತಿದೆ. ರಜನೀಕಾಂತ್ ಹಾಗೂ ಅಮಿತಾಬ್ ಬಚ್ಚನ್ ಒಟ್ಟಿಗೆ ಒಂದೇ ಸಿನಿಮಾದಲ್ಲಿ ನಟಿಸುತ್ತಿರುವುದು ಗುಟ್ಟೇನು ಅಲ್ಲ. ಇದೇ ಸಿನಿಮಾದಲ್ಲಿ ಒಂದು ಪ್ರಮುಖ ಪಾತ್ರವನ್ನು ನಟ ನಾನಿಗೆ ನೀಡಲಾಗಿತ್ತು ಆದರೆ ನಾನಿ ಅದಕ್ಕೆ ಒಲ್ಲೆ ಎಂದಿದ್ದಾರೆ.
ರಜನೀಕಾಂತ್ರ 179ನೇ ಸಿನಿಮಾವನ್ನು ನಿರ್ದೇಶಕ ಟಿಜೆ ಜ್ಞಾನವೇಲು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ರಜನೀಕಾಂತ್ ಜೊತೆಗೆ ಅಮಿತಾಬ್ ಬಚ್ಚನ್ ಸಹ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಸಿನಿಮಾದಲ್ಲಿ ನಟಿ ಮಂಜು ವಾರಿಯರ್ ಅವರಿಗೂ ಪ್ರಮುಖ ಪಾತ್ರವಿದೆ. ಇದೇ ಸಿನಿಮಾದ ಮತ್ತೊಂದು ಪ್ರಮುಖ ಪಾತ್ರಕ್ಕೆ ನಟ ನಾನಿಯನ್ನು ನಿರ್ದೇಶಕ ಟಿಜೆ ಜ್ಞಾನವೇಲು ಕೇಳಿದ್ದರು ಆದರೆ ಅವರು ಅದನ್ನು ನಿರಾಕರಿಸಿದ್ದಾರೆ. ಇದು ಸ್ವತಃ ನಾನಿ ಅಭಿಮಾನಿಗಳಿಗೆ ಆಶ್ಚರ್ಯ ತಂದಿದೆ.
ಇದನ್ನೂ ಓದಿ:Hi Nanna: ‘ಹಾಯ್ ನಾನ್ನ’ ಎನ್ನುತ್ತಿದ್ದಾರೆ ನಾನಿ-ಮೃಣಾಲ್ ಠಾಕೂರ್; ತಂದೆ-ಮಗಳ ಬಾಂಧವ್ಯವೇ ಈ ಚಿತ್ರದ ಹೈಲೈಟ್
ನಾನಿಗೆ ಕೇಳಲಾಗಿದ್ದ ಪಾತ್ರ ನೆಗೆಟಿವ್ ಶೇಡ್ನದ್ದಾದ್ದರಿಂದ ನಾನಿ ಪಾತ್ರವನ್ನು ರಿಜೆಕ್ಟ್ ಮಾಡಿದ್ದಾರಂತೆ. ನಾನಿ ಈ ವರೆಗೆ ನೆಗೆಟಿವ್ ಶೇಡ್ನ ಪಾತ್ರದಲ್ಲಿ ನಟಿಸಿಲ್ಲ. ‘ವಿ’ ಸಿನಿಮಾದಲ್ಲಿ ತುಸು ನೆಗೆಟಿವ್ ಶೇಡ್ನ ಪಾತ್ರವಾದರೂ ಆ ಸಿನಿಮಾಕ್ಕೆ ಅವರೇ ಹೀರೋ. ನಾಯಕನಾಗಿ ಚಾಲ್ತಿಯಲ್ಲಿರುವಾಗಲೇ ಋಣಾತ್ಮಕ ಪಾತ್ರದಲ್ಲಿ ನಟಿಸುವುದು ಬೇಡವೆಂದು ನಿಶ್ಚಯಿಸಿ ಈ ನಿರ್ಣಯ ಕೈಗೊಂಡಿದ್ದಾರೆ ನಾನಿ. ಇದೀಗ ಆ ಪಾತ್ರಕ್ಕೆ ನಟ ಶರ್ವಾನಂದ ಅನ್ನು ನಿರ್ದೇಶಕ ಜ್ಞಾನವೇಲು ಆಯ್ಕೆ ಮಾಡಿದ್ದಾರೆ.
ಟಿಜೆ ಜ್ಞಾನವೇಲು, ಸೂರ್ಯಾ ನಟನೆಯ ಸೂಪರ್ ಡೂಪರ್ ಹಿಟ್ ಸಿನಿಮಾ ‘ಜೈ ಭೀಮ್’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಭಾರಿ ಸದ್ದು ಮಾಡಿತ್ತು, ಚರ್ಚೆಗೂ ಕಾರಣವಾಗಿತ್ತು, ನಿರ್ದಿಷ್ಟ ಸಮುದಾಯದವರು ಸಿನಿಮಾದ ವಿರುದ್ಧ ಪ್ರತಿಭಟನೆಯನ್ನೂ ಮಾಡಿದರು. ಕೊನೆಗೆ ಇದೇ ಸಿನಿಮಾ ಭಾರತದಿಂದ ಅಧಿಕೃತವಾಗಿ ಆಸ್ಕರ್ ರೇಸ್ಗೆ ಆಯ್ಕೆ ಆಗಿತ್ತು. ಆದರೆ ಅಲ್ಲಿ ನಿರಾಸೆ ಅನುಭವಿಸಿತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ