ಟಾಲಿವುಡ್ಗೆ ನವಾಜುದ್ದೀನ್ ಸಿದ್ದಿಕಿ ಎಂಟ್ರಿ: ಲುಕ್ ಬಿಡುಗಡೆ ಮಾಡಿದ ಚಿತ್ರತಂಡ
Nawazuddin Siddiqui: ಬಾಲಿವುಡ್ನ ಪ್ರತಿಭಾವಂತ ನಟ ನವಾಜುದ್ದೀನ್ ಸಿದ್ಧಿಕಿ ಮೊದಲ ಬಾರಿಗೆ ತೆಲುಗು ಸಿನಿಮಾದಲ್ಲಿ ನಟಿಸುತ್ತಿದ್ದು, ಅವರ ಲುಕ್ ಬಿಡುಗಡೆ ಮಾಡಲಾಗಿದೆ.
ಪ್ಯಾನ್ ಇಂಡಿಯಾ (Pan India) ಸಿನಿಮಾ ಜಮಾನ ಬಂದ ಬಳಿಕವಂತೂ ಬಾಲಿವುಡ್ (Bollywood) ನಟರು ದಕ್ಷಿಣದ ಸಿನಿಮಾಗಳಿಗೆ ಬರುವುದು ಮೊದಲಿಗಿಂತಲೂ ಬಹಳ ಹೆಚ್ಚಾಗಿದೆ. ಮೊದಲೆಲ್ಲ ಆಗೊಮ್ಮೆ ಈಗೊಮ್ಮೆ ಕೆಲವು ನಟಿಯರಷ್ಟೆ ಇಲ್ಲಿ ಬಂದು ಮುಖ ತೋರಿಸುತ್ತಿದ್ದರು, ಈಗ ಬಾಲಿವುಡ್ನ ಸ್ಟಾರ್ ನಟರು ಸಹ ದಕ್ಷಿಣದ ಸಿನಿಮಾಗಳಲ್ಲಿ ನಟಿಸಲು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಬಾಲಿವುಡ್ ನ ಪ್ರಸ್ತುತ ಅದ್ಭುತ ನಟರಲ್ಲಿ ನವಾಜುದ್ದೀನ್ ಸಿದ್ದಿಕಿ (Nawazuddin Siddiqui) ಸಹ ಒಬ್ಬರು. ಯಾವುದೇ ಪಾತ್ರ ಕೊಟ್ಟರು ಲೀಲಾಜಾಲವಾಗಿ ಅಭಿನಯಿಸುವ, ವಿಭಿನ್ನ ಪಾತ್ರಗಳ ಮೂಲಕ ಗಮನಸೆಳೆದಿರುವ ಸಿದ್ದಿಕಿ ಈಗ ತಮ್ಮ ಎರಡನೇ ದಕ್ಷಿಣ ಭಾರತದ ಸಿನಿಮಾದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ.
ಈಗಾಗಲೇ ತಮಿಳು ಸಿನಿಮಾ ಒಂದರಲ್ಲಿ ನಟಿಸಿರುವ ನವಾಜುದ್ದೀನ್ ಸಿದ್ಧಿಕಿ ಈಗ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ನಟ ವಿಕ್ಟರಿ ವೆಂಕಟೇಶ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ‘ಸೈಂಧವ್’ನಲ್ಲಿ ನವಾಜುದ್ದೀನ್ ನಟಿಸುತ್ತಿದ್ದಾರೆ. ಶೈಲೇಶ್ ಕೋಲನು ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ನವಾಜುದ್ದೀನ್ ಸಿದ್ದಿಕಿ ವಿಲನ್ ಆಗಿ ಬಣ್ಣ ಹಚ್ಚಿದ್ದಾರೆ. ಅವರ ಹುಟ್ಟುಹಬ್ಬದ ಪ್ರಯುಕ್ತ ಚಿತ್ರತಂಡ ಕ್ಯಾರೆಕ್ಟರ್ ಪೋಸ್ಟರ್ ರಿಲೀಸ್ ಮಾಡಿದೆ. ವಿಕಾಸ್ ಮಲಿಕ್ ಎಂಬ ಪಾತ್ರದಲ್ಲಿ ನವಾಜುದ್ದೀನ್ ಸಿದ್ದಿಕಿ, ದುಬಾರಿ ಕಾರಿನ ಬಾನೆಟ್ ಮೇಲೆ ಕುಳಿತು ಬೀಡಿ ಸೇದುತ್ತಾ ಸಖತ್ ಕ್ಲಾಸ್ ಆಗಿ ಕಾಣಿಸಿಕೊಂಡಿದ್ದಾರೆ.
ಕನ್ನಡತಿ ಶ್ರದ್ಧಾ ಶ್ರೀನಾಥ್ ಮನೋಜ್ಞ ಎಂಬ ಪಾತ್ರದಲ್ಲಿ ಇದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಡಾ ರೇಣು ಪಾತ್ರದಲ್ಲಿ ರುಹಾನಿ ಶರ್ಮಾ ಮತ್ತು ಜಾಸ್ಮಿನ್ ಪಾತ್ರದಲ್ಲಿ ಆಂಡ್ರಿಯಾ ಜೆರೆಮಿಯಾ ಕಾಣಿಸಿಕೊಂಡಿದ್ದಾರೆ. ಸಂತೋಷ್ ನಾರಾಯಣನ್ ಸಂಗೀತ ನಿರ್ದೇಶನ, ಎಸ್ ಮಣಿಕಂದನ್ ಛಾಯಾಗ್ರಹಣ, ಗ್ಯಾರಿ ಬಿಎಚ್ ಸಂಕಲನ ಮತ್ತು ಅವಿನಾಶ್ ಕೊಲ್ಲಾ ನಿರ್ಮಾಣ ವಿನ್ಯಾಸ ಚಿತ್ರಕ್ಕಿದೆ. ನಿಹಾರಿಕಾ ಎಂಟರ್ಟೈನ್ಮೆಂಟ್ ಅಡಿ ವೆಂಕಟ್ ಬೋಯನಪಲ್ಲಿ ನಿರ್ಮಿಸುತ್ತಿರುವ ಸೈಂಧವ್ ಚಿತ್ರಕ್ಕೆ ಕಿಶೋರ್ ತಲ್ಲೂರ್ ಸಹ ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ. ಸೈಂಧವ ಪ್ಯಾನ್ ಇಂಡಿಯಾ ಚಲನಚಿತ್ರವಾಗಿದ್ದು, ಡಿಸೆಂಬರ್ 22 ರಂದು ಕ್ರಿಸ್ಮಸ್ ವಿಶ್ವಾದ್ಯಂತ ರಿಲೀಸ್ ಆಗಲಿದೆ.
ಇದನ್ನೂ ಓದಿ: Nawazuddin Siddiqui Birthday: ನವಾಜುದ್ದೀನ್ ಸಿದ್ದಿಕಿ ನಟನೆಯ ಈ ಕಿರುಚಿತ್ರಗಳನ್ನು ವೀಕ್ಷಿಸಿದ್ದೀರಾ? ಮಿಸ್ ಮಾಡಲೇಬೇಡಿ
ನವಾಜುದ್ದೀನ್ ಈ ಹಿಂದೆ ತಮಿಳಿನಲ್ಲಿ ರಜನೀಕಾಂತ್ ಜೊತೆಗೆ ಪೆಟ್ಟಾನಲ್ಲಿ ನಟಿಸಿದ್ದರು. ಒಂದು ಬಾಂಗ್ಲಾದೇಶಿ ಸಿನಿಮಾದಲ್ಲಿಯೂ ನಟಿಸಿರುವ ನವಾಜುದ್ದೀನ್ ಸಿದ್ಧಿಕಿ ಬಾಲಿವುಡ್ನ ಅತ್ಯಂತ ಬ್ಯುಸಿ ನಟರಲ್ಲಿ ಒಬ್ಬರು. ಪ್ರಸ್ತುತ ಅವರ ಕೈಯಲ್ಲಿ ಏಳು ಸಿನಿಮಾಗಳಿವೆ. ಕಂಗನಾ ಜೊತೆಗೆ ನಟಿಸಿರುವ ಟೀಕು ವೆಡ್ಸ್ ಶೇರು ಸಿನಿಮಾ ಬಿಡುಗಡೆ ಆಗಲು ರೆಡಿಯಾಗಿದೆ. ಇದರ ಜೊತೆಗೆ ಅದ್ಭುತ್, ನೂರಾನಿ ಚೆಹ್ರಾ, ಭೋಲೆ ಚೂಡಿಯಾ, ಹಡ್ಡಿ, ಸಂಗೀನ್ ಸಿನಿಮಾಗಳಲ್ಲಿ ನವಾಜುದ್ದೀನ್ ಸಿದ್ಧಿಕಿ ನಟಿಸುತ್ತಿದ್ದಾರೆ. ನವಾಜ್ ಮಾತ್ರವೇ ಅಲ್ಲದೆ ಬಾಲಿವುಡ್ನ ಸ್ಟಾರ್ಗಳಾದ ಸಂಜಯ್ ದತ್ ಹಾಗೂ ಸೈಫ್ ಅಲಿ ಖಾನ್ ಸಹ ದಕ್ಷಿಣದ ಸಿನಿಮಾಗಳಲ್ಲಿ ನಟಿಸಲು ಶುರುವಿಟ್ಟಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:00 am, Sat, 20 May 23