ನಯನತಾರಾ ಬೆದರಿಕೆ ಹಾಕಿ ಅವಕಾಶ ಕಸಿದುಕೊಂಡಿದ್ದರು: ‘ಗೂಳಿ’ ನಟಿ ಮಮತಾ ಮೋಹನ್​ದಾಸ್

|

Updated on: Apr 20, 2023 | 6:19 PM

Mamta Mohandas: 2008 ರಲ್ಲಿ ನಯನತಾರಾ ಬೆದರಿಕೆ ತಂತ್ರ ಬಳಸಿ ಹೇಗೆ ತಮ್ಮ ಅವಕಾಶ ಕಸಿದುಕೊಂಡರು ಎಂಬುದನ್ನು ನಟಿ ಮಮತಾ ಮೋಹನ್​ದಾಸ್ ಹೇಳಿದ್ದಾರೆ.

ನಯನತಾರಾ ಬೆದರಿಕೆ ಹಾಕಿ ಅವಕಾಶ ಕಸಿದುಕೊಂಡಿದ್ದರು: ಗೂಳಿ ನಟಿ ಮಮತಾ ಮೋಹನ್​ದಾಸ್
ನಯನತಾರಾ-ಮಮತಾ ಮೋಹನ್​ದಾಸ್
Follow us on

ಸ್ಟಾರ್ ನಟರುಗಳು ಬೇಕಾದ ನಟ-ನಟಿಯರನ್ನು ಸಿನಿಮಾಕ್ಕೆ ಹಾಕಿಕೊಳ್ಳುವಂತೆ ನಿರ್ದೇಶಕ, ನಿರ್ಮಾಪಕರ ಮೇಲೆ ಒತ್ತಡ ಹೇರುವುದು ಗುಟ್ಟೇನೂ ಅಲ್ಲ. ಅಂತೆಯೇ ನಟಿಯರು ಸಹ ತಮ್ಮ ಹೊರತಾಗಿ ಬೇರೊಬ್ಬ ನಟಿಯರು ಸಿನಿಮಾಗಳಲ್ಲಿ ನಟಿಸದಂತೆ ತಡೆದ ಉದಾಹರಣೆಗಳೂ ಇವೆ. ಗುಂಪುಗಾರಿಕೆ ಕೇವಲ ನಟರಿಗಷ್ಟೆ ಸೀಮಿತವಲ್ಲ, ನಟಿಯರೂ ಇಂಥಹುದ್ದನ್ನು ಮಾಡಿದ್ದಾರೆ. ಇದಕ್ಕೆ ಉದಾಹರಣೆಯಾಗಿ ನಟಿ ಮಮತಾ ಮೋಹನ್​ದಾಸ್ (Mamta Mohandas) ಹಿಂದೊಮ್ಮೆ ತಾವು ನಯನತಾರಾ (Nayanthara) ಇಂದಾಗಿ ಅವಕಾಶ ವಂಚಿತರಾದ ಬಗ್ಗೆ ಈಗ ಬಾಯ್ಬಿಟ್ಟಿದ್ದಾರೆ.

ಕನ್ನಡದ ಗೂಳಿ (Gooli) ಸೇರಿದಂತೆ ತೆಲುಗು, ತಮಿಳು, ಮಲಯಾಳಂನ ಹಲವು ಸಿನಿಮಾಗಳಲ್ಲಿ ನಟಿಸಿರುವ ಮಮತಾ ಮೋಹನ್​ದಾಸ್ ಅವರಿಗೆ 2008 ರಲ್ಲಿ ರಜನೀಕಾಂತ್ ಜೊತೆಗೆ ಸಿನಿಮಾ ಹಾಡೊಂದರಲ್ಲಿ ಡ್ಯಾನ್ಸ್ ಮಾಡುವ ಅವಕಾಶ ಲಭಿಸಿತಂತೆ. ಅಂತೆಯೇ ಮಮತಾ ಮೋಹನ್​ದಾಸ್ ಒಪ್ಪಿಕೊಂಡು ಕೆಲವು ದಿನಗಳ ಶೂಟಿಂಗ್ ಸಹ ಮಾಡಿದ್ದಾರೆ. ಆದರೆ ಆ ಬಳಿಕ ಅವರಿಗೆ ಹೇಳದೆ ಕೇಳದೆ ಅವರ ದೃಶ್ಯಗಳನ್ನು ಹಾಡಿನಿಂದ ಕಿತ್ತೊಗೆಯಲಾಯ್ತಂತೆ.

ಈ ಬಗ್ಗೆ ಯೂಟ್ಯೂಬ್ ಚಾನೆಲ್​ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಮಮತಾ ಮೋಹನ್​ದಾಸ್, ರಜನೀಕಾಂತ್​ರ ‘ಕುಸೇಲನ್’ ಸಿನಿಮಾದ ಹಾಡೊಂದರಲ್ಲಿ ನಾನು ರಜನೀಕಾಂತ್ ಅವರೊಟ್ಟಿಗೆ ನಟಿಸಿದ್ದೆ ಕೆಲವು ದಿನಗಳ ಶೂಟಿಂಗ್ ಸಹ ಮುಗಿಯಿತು. ಆದರೆ ಆ ಸಿನಿಮಾದ ನಾಯಕಿ (ನಯನತಾರಾ) ಸಿನಿಮಾದ ನಿರ್ದೇಶಕರ ಮೇಲೆ ಒತ್ತಡ ಹೇರಿ ನನ್ನನ್ನು ಹಾಡಿನಿಂದ ದೂರ ಇಟ್ಟರು” ಎಂದಿದ್ದಾರೆ.

ಬೇರೆ ಯಾರನ್ನೋ ಕರೆಸಿ ರಜನೀಕಾಂತ್ ಅವರೊಟ್ಟಿಗೆ ಡ್ಯಾನ್ಸ್ ಮಾಡಿಸುವುದಾದರೆ ನಾನು ಏಕೆ ಬೇಕು? ನಾನು ಚಿತ್ರೀಕರಣಕ್ಕೆ ಬರುವುದಿಲ್ಲ ಎಂದು ನಾಯಕಿ (ನಯನತಾರಾ) ಆ ಸಿನಿಮಾದ ನಿರ್ದೇಶಕರಿಗೆ ಹೇಳಿದ್ದರೆಂಬುದು ಆ ಬಳಿಕ ನನಗೆ ಗೊತ್ತಾಯಿತು. ಆಗ ಅದು ನನಗೆ ಬೆದರಿಕೆ ಎನಿಸಿತು. ನಾನು ಅದನ್ನು ಸಾವಧಾನವಾಗಿಯೇ ಸ್ವೀಕರಿಸಿದೆ” ಎಂದಿದ್ದಾರೆ ಮಮತಾ ಮೋಹನ್​ದಾಸ್. ನಯನತಾರಾ ಹೇರಿದ ಒತ್ತಡದಿಂದಾಗಿ ಮಮತಾ ಮೋಹನ್​ದಾಸ್ ಅವರು ನಟಿಸಿದ್ದ ದೃಶ್ಯಗಳನ್ನು ಕತ್ತರಿಸಲಾಯ್ತಂತೆ. ಕುಸೇಲನ್ ಸಿನಿಮಾದ ಹಾಡೊಂದರಲ್ಲಿ ಮಮತಾ ಮೋಹನ್​ದಾಸ್ ಕೆಲವೇ ಸೆಕೆಂಡ್​ ಅಷ್ಟೆ ಕಾಣಿಸುತ್ತಾರೆ, ಅಲ್ಲಿಯೂ ಅವರ ಮುಖ ಸರಿಯಾಗಿ ಕಾಣುವುದಿಲ್ಲ.

ಕುಸೇಲನ್ ಸಿನಿಮಾದಲ್ಲಿ ರಜನೀಕಾಂತ್ ಸ್ಟಾರ್ ನಟನ ಪಾತ್ರದಲ್ಲಿ ನಟಿಸಿದ್ದರು, ನಯನತಾರಾ ಸ್ವತಃ ನಯನತಾರಾ ಆಗಿಯೇ ನಟಿಸಿದ್ದರು. ರಜನೀಕಾಂತ್ ಜೊತೆಗೆ ಕೆಲವು ದೃಶ್ಯಗಳು ಹಾಗೂ ಹಾಡುಗಳಲ್ಲಿ ಕುಣಿದಿದ್ದರು. ಮಾತ್ರವಲ್ಲ ಚಿತ್ರರಂಗದ ಹಲವರು ಆ ಸಿನಿಮಾದ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಸ್ಟಾರ್ ನಟನೊಬ್ಬ ತನ್ನ ಬಡ ಗೆಳೆಯನನ್ನು ಭೇಟಿಯಾಗುವ ಭಾವುಕ ಅಂಶಗಳನ್ನು ಒಳಗೊಂಡಿದ್ದ ಸಿನಿಮಾ ಅದಾಗಿತ್ತು. ಅದೇ ಸಿನಿಮಾ ಆ ನಂತರ ಹಿಂದಿಯಲ್ಲಿ ಬಿಲ್ಲು ಬಾರ್ಬರ್ ಹೆಸರಿನಲ್ಲಿ ರೀಮೇಕ್ ಆಯಿತು. ಅಲ್ಲಿ ಶಾರುಖ್ ಖಾನ್ ಸ್ಟಾರ್ ಪಾತ್ರದಲ್ಲಿ, ಇರ್ಫಾನ್ ಖಾನ್ ಬಡ ಗೆಳೆಯನ ಪಾತ್ರದಲ್ಲಿ ನಟಿಸಿದ್ದರು. ಕರೀನಾ ಕಪೂರ್, ಪ್ರಿಯಾಂಕಾ ಚೋಪ್ರಾ ಹಾಗೂ ದೀಪಿಕಾ ಪಡುಕೋಣೆ ಅವರುಗಳು ಅತಿಥಿ ಪಾತ್ರದಲ್ಲಿ ನಟಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ