ಕಾಲೇಜು ದಿನಗಳಲ್ಲೇ ಮದುವೆಯಾಗಿದ್ದರು ನೀನಾ ಗುಪ್ತಾ; ವರ್ಷದೊಳಗೆ ಮುರಿದು ಬಿದ್ದ ಮೊದಲ ವಿವಾಹದ ಸತ್ಯ ಆತ್ಮಚರಿತ್ರೆಯಲ್ಲಿ ಬಹಿರಂಗ
Neena Gupta: ಮದುವೆಯಾದ ಕೆಲವೇ ದಿನಗಳಲ್ಲಿ ನಮ್ಮಿಬ್ಬರಿಗೂ ತುಂಬ ವ್ಯತ್ಯಾಸವಿದೆ ಎಂಬುದು ಗೊತ್ತಾಯಿತು. ಯಾವುದೇ ವಿಚಾರವನ್ನೂ ಅಮ್ಲಾನ್ ನೋಡುವ ಬಗೆ ಬೇರೆಯದೇ ಆಗಿತ್ತು. ನಾನು ಸಾಮಾನ್ಯ ಗೃಹಿಣಿಯಾಗಿರಲು ಇಷ್ಟಪಡುತ್ತಿರಲಿಲ್ಲ. ಮಹತ್ವಾಕಾಂಕ್ಷಿಯಾಗಿದ್ದೆ ಎಂದು ನೀನಾ ಗುಪ್ತಾ ಹೇಳಿದ್ದಾರೆ.
ನಟಿ ನೀನಾ ಗುಪ್ತಾ ತಮ್ಮ ಆತ್ಮಚರಿತ್ರೆ ‘ಸಚ್ ಕಹುನ್ ತೋಹ್’ ಬಿಡುಗಡೆ ಮಾಡಿದ್ದು, ಅದರಲ್ಲಿ ಅನೇಕ ವಿಚಾರಗಳನ್ನು ಮುಕ್ತವಾಗಿ ಹೇಳಿಕೊಂಡಿದ್ದಾರೆ. 62ವರ್ಷದ ನೀನಾ ಗುಪ್ತಾ ತಮ್ಮ ಹರೆಯದ ಕಾಲದ ಒಂದಷ್ಟು ಸತ್ಯಗಳನ್ನು ಆತ್ಮಚರಿತ್ರೆಯಲ್ಲಿ ಬಿಚ್ಚಿಟ್ಟಿದ್ದಾರೆ. ವಿವೇಕ್ ಮೆಹ್ರಾರನ್ನು 2008ರಲ್ಲಿ ಮದುವೆಯಾಗಿರುವ ನೀನಾ ಗುಪ್ತಾ, ವೆಸ್ಟ್ ಇಂಡೀಸ್ ಕ್ರಿಕೆಟರ್ ವಿವಿಯನ್ ರಿಚರ್ಡ್ರಿಂದ ಹೆಣ್ಣುಮಗುವನ್ನು ಪಡೆದಿದ್ದು ಈಗಾಗಲೇ ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಇದುವರೆಗೂ ಅನೇಕರಿಗೆ ತಿಳಿದಿಲ್ಲದ ವಿಚಾರವೆಂದರೆ ಅದು ನೀನಾ ಗುಪ್ತಾರ ಮೊದಲ ಮದುವೆ..ಮತ್ತು ಅದು ಮುರಿದುಬಿದ್ದ ಬಗೆ. ಅದನ್ನೀಗ ತಮ್ಮ ಆತ್ಮಚರಿತ್ರೆಯಲ್ಲಿ ನಟಿ ಹೇಳಿಕೊಂಡಿದ್ದಾರೆ. ನೀನಾ ಗುಪ್ತಾ ಹೇಳುವ ಪ್ರಕಾರ ಅವರ ಮೊದಲ ಗಂಡ ಅಮ್ಲಾನ್ ಕುಸುಮ್ ಘೋಸ್. ವಿದ್ಯಾರ್ಥಿ ಜೀವನದಲ್ಲಿದ್ದಾಗಲೇ ನಮ್ಮಿಬ್ಬರ ಪರಿಚಯವಾಗಿತ್ತು. ನಾನು ಸಂಸ್ಕೃತ ಸ್ನಾತಕೋತ್ತರ ಪದವಿ ಓದುತ್ತಿದ್ದಾಗ, ಕುಸುಮ್ ಐಐಟಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು ಎಂದು ನೀನಾ ತಿಳಿಸಿದ್ದಾರೆ.
ಅಮ್ಲಾನ್ ಪಾಲಕರು ಬೇರೆ ಊರಿನಲ್ಲಿದ್ದರು. ಆದರೆ ಆತನ ಅಜ್ಜ ನಮ್ಮ ಮನೆಯ ಸಮೀಪವೇ ಇದ್ದರು. ಅಮ್ಲಾನ್ ಮತ್ತು ನಾನು ಕಾಲೇಜಿನ ಕ್ಯಾಂಪಸ್ನಲ್ಲಿ, ಅವನ ಹಾಸ್ಟೆಲ್ ಬಳಿ, ನನ್ನ ಮನೆಯ ಸಮೀಪ ಗುಟ್ಟಾಗಿ ಭೇಟಿಯಾಗುತ್ತಿದ್ದೆವು. ಹಬ್ಬ, ಉತ್ಸವದಿನಗಳನ್ನೆಲ್ಲ ಒಟ್ಟಾಗಿಯೇ ಆಚರಿಸುತ್ತಿದ್ದೆವು. ನನ್ನ ಸ್ನೇಹಿತೆಯೊಬ್ಬರು ನಮ್ಮಿಬ್ಬರ ಸಂಬಂಧದ ಬಗ್ಗೆ ನನ್ನ ಪಾಲಕರ ಎದುರು ಹೇಳಿದಳು. ಆದರೆ ಅವರು ನಮ್ಮ ಪ್ರೀತಿ, ಸಂಬಂಧಕ್ಕೆ ಅಡ್ಡಿ ಬರಲಿಲ್ಲ. ಅಮ್ಲಾನ್ ಜತೆ ಶ್ರೀನಗರಕ್ಕೆ ಭೇಟಿ ನೀಡುವ ಸಲುವಾಗಿ ನಾನು ಆತನನ್ನು ಮದುವೆಯಾದೆ. ಆದರೆ ತುಂಬ ಬೇಗನೇ ಅಂದರೆ ಒಂದೇ ವರ್ಷದಲ್ಲಿ ಈ ಸಂಬಂಧ ಮುರಿದು ಬಿತ್ತು ಎಂದು ನೀನಾ ಗುಪ್ತಾ ಹೇಳಿಕೊಂಡಿದ್ದಾರೆ.
ಮದುವೆಯಾದ ಕೆಲವೇ ದಿನಗಳಲ್ಲಿ ನಮ್ಮಿಬ್ಬರಿಗೂ ತುಂಬ ವ್ಯತ್ಯಾಸವಿದೆ ಎಂಬುದು ಗೊತ್ತಾಯಿತು. ಯಾವುದೇ ವಿಚಾರವನ್ನೂ ಅಮ್ಲಾನ್ ನೋಡುವ ಬಗೆ ಬೇರೆಯದೇ ಆಗಿತ್ತು. ನಾನು ಸಾಮಾನ್ಯ ಗೃಹಿಣಿಯಾಗಿರಲು ಇಷ್ಟಪಡುತ್ತಿರಲಿಲ್ಲ. ಮಹತ್ವಾಕಾಂಕ್ಷಿಯಾಗಿದ್ದೆ. ನನಗೆ ನನ್ನ ದಾರಿಯನ್ನು ಸ್ಪಷ್ಟ, ಸುಗಮ ಮಾಡಿಕೊಳ್ಳುವ ಅಗತ್ಯವಿತ್ತು. ಹಾಗಂತ ನಾವಿಬ್ಬರೂ ತುಂಬ ಜಗಳವಾಡಲಿಲ್ಲ. ಇವತ್ತಿಗೂ ಆತನ ಬಗ್ಗೆ ತುಂಬ ಕಠಿಣವಾಗಿ ಏನನ್ನೂ ಆರೋಪ ಮಾಡುವುದಿಲ್ಲ ಎಂದು ಹೇಳಿಕೊಂಡಿದ್ದಾರೆ. ನಂತರ ನೀನಾ ವಿವೇಕ್ ಮೆಹ್ರಾರನ್ನು ಮದುವೆಯಾಗಿ 13 ವರ್ಷಗಳಿಂದಲೂ ಸುಖೀ ಸಂಸಾರ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಜಿಯೋ ಫೈಬರ್‌ನಿಂದ ಮಾನ್ಸೂನ್ ಸುಗ್ಗಿ! ಹೊಸ ಪೋಸ್ಟ್ ಪೇಯ್ಡ್ ಪ್ಲಾನ್, ಇಂಟರ್‌ನೆಟ್ ಬಾಕ್ಸ್ ಜೊತೆಗೆ ಇನ್‌ಸ್ಟಲೇಷನ್ ಉಚಿತ!