‘ಬಾಹುಬಲಿ’ ನಂಬಿ 100 ಕೋಟಿ ರೂ. ಕಳೆದುಕೊಂಡ ನೆಟ್​ಫ್ಲಿಕ್ಸ್​! 200 ಕೋಟಿಯಲ್ಲಿ ಈಗ ಇನ್ನೊಂದು ಪ್ಲ್ಯಾನ್​

ಭಾರತೀಯ ಚಿತ್ರರಂಗದಲ್ಲಿ ಬಾಹುಬಲಿ ಸಿನಿಮಾ ಎಬ್ಬಿಸಿದ ಹವಾ ಸಣ್ಣದೇನಲ್ಲ. ಆದರೆ ಅದೇ ಬಾಹುಬಲಿಯನ್ನು ನಂಬಿಕೊಂಡಿದ್ದಕ್ಕಾಗಿ ನೆಟ್​ಫ್ಲಿಕ್ಸ್​ ಸಂಸ್ಥೆಗೆ ಬರೋಬ್ಬರಿ 100 ಕೋಟಿ ರೂ. ನಷ್ಟ ಆಗಿದೆ!

  • Publish Date - 5:14 pm, Wed, 17 March 21 Edited By: Rajesh Duggumane
‘ಬಾಹುಬಲಿ’ ನಂಬಿ 100 ಕೋಟಿ ರೂ. ಕಳೆದುಕೊಂಡ ನೆಟ್​ಫ್ಲಿಕ್ಸ್​! 200 ಕೋಟಿಯಲ್ಲಿ ಈಗ ಇನ್ನೊಂದು ಪ್ಲ್ಯಾನ್​
ಬಾಹುಬಲಿ - ನೆಟ್​ಫ್ಲಿಕ್ಸ್​ ವೆಬ್​ ಸಿರೀಸ್​

ಖ್ಯಾತ ನಿರ್ದೇಶಕ ಎಸ್​.ಎಸ್​. ರಾಜಮೌಳಿ ಆ್ಯಕ್ಷನ್​ ಕಟ್​ ಹೇಳಿದ್ದ ಬಾಹುಬಲಿ ಸಿನಿಮಾ ಎರಡು ಪಾರ್ಟ್​ಗಳಲ್ಲಿ ಮೂಡಿಬಂದಿತ್ತು. ಎರಡೂ ಪಾರ್ಟ್​​ಗೆ ಸಿಕ್ಕಾಪಟ್ಟೆ ಕಮಾಯಿ ಆಗಿತ್ತು. ಆದರೆ ಬಾಹುಬಲಿಯ ಕಥೆ ಅಷ್ಟಕ್ಕೇ ಮುಗಿಯುವಂಥದ್ದಲ್ಲ. ಮೊದಲ ಪಾರ್ಟ್​ಗಿಂತಲೂ ಮುಂಚಿನ ಕಥೆ ಏನು ಎಂಬುದನ್ನು ತೋರಿಸಲು ಒಂದು ಹೊಸ ಯೋಜನೆ ರೂಪಿಸಲಾಗಿತ್ತು. ಆದರೆ ಅದರಲ್ಲಿ ಈಗ ದೊಡ್ಡ ಬದಲಾವಣೆ ಆಗಿದೆ.

‘ಬಾಹುಬಲಿ: ದಿ ಬಿಗಿನಿಂಗ್’​ ಮತ್ತು ‘ಬಾಹುಬಲಿ: ದಿ ಕನ್​ಕ್ಲೂಷನ್​’ ಸಿನಿಮಾಗಳ ಪ್ರೀಕ್ವೆಲ್​ ಮಾಡಲು ಈ ಹಿಂದೆ ಪ್ಲ್ಯಾನ್​ ಮಾಡಲಾಗಿತ್ತು. ಅದಕ್ಕೆ ‘ಬಾಹುಬಲಿ: ಬಿಫೋರ್​ ದಿ ಬಿಗಿನಿಂಗ್​’ ಎಂದು ಹೆಸರಿಡಲಾಗಿತ್ತು. ಹಾಗಂತ ಅದು ಸಿನಿಮಾ ಅಲ್ಲ. ಬದಲಿಗೆ ವೆಬ್​ ಸಿರೀಸ್​ ರೂಪದಲ್ಲಿ ರಾಜಮಾತೆ ಶಿವಗಾಮಿಯ ಕಥೆ ಹೇಳುವುದು ಇದರ ಉದ್ದೇಶ. ಅದನ್ನು ನೆಟ್​ಫ್ಲಿಕ್ಸ್​ ಸಂಸ್ಥೆ ನಿರ್ಮಾಣ ಮಾಡುತ್ತಿತ್ತು. ಮೃಣಾಲ್​ ಠಾಕೂರ್ ಮುಖ್ಯ ಪಾತ್ರ ಮಾಡುತ್ತಿದ್ದು ಈಗಾಗಲೇ ಚಿತ್ರೀಕರಣ ಕೂಡ ಮುಗಿದಿತ್ತು. ಆದರೆ ಈಗ ನೆಟ್​ಫ್ಲಿಕ್ಸ್​ ಸಂಸ್ಥೆ ಒಂದು ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದು, ಅದರಿಂದ 100 ಕೋಟಿ ರೂ. ನಷ್ಟ ಮಾಡಿಕೊಳ್ಳುತ್ತಿದೆ!

ಹೌದು, ಈಗಾಗಲೇ ಚಿತ್ರೀಕರಣ ಆಗಿರುವ ದೃಶ್ಯಗಳು ನೆಟ್​ಫ್ಲಿಕ್ಸ್​ನವರಿಗೆ ಕಿಂಚಿತ್ತೂ ಸಮಾಧಾನ ತಂದಿಲ್ಲವಂತೆ. ಹಾಗಾಗಿ 100 ಕೋಟಿ ರೂ. ಖರ್ಚು ಮಾಡಿ ಚಿತ್ರೀಕರಣ ಮಾಡಿರುವ 9 ಎಪಿಸೋಡ್​ಗಳ ಈ ವೆಬ್​ಸರಣಿಯನ್ನು ಕಸದ ಬುಟ್ಟಿಗೆ ಎಸೆಯಲು ತೀರ್ಮಾನಿಸಲಾಗಿದೆ. ಅದರ ಬದಲಿಗೆ, ಮತ್ತೆ 200 ಕೋಟಿ ರೂ. ಬಜೆಟ್​ನಲ್ಲಿ ಹೊಸದಾಗಿ ಚಿತ್ರೀಕರಣ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂಬ ಮಾತು ಕೇಳಿಬರುತ್ತಿದೆ. ನಿಜವಾಗಿಯೂ ಒಂದು ಸಂಸ್ಥೆ ಹೀಗೆ ನೂರು ಕೋಟಿ ರೂ. ಕಳೆದುಕೊಳ್ಳಲು ಸಾಧ್ಯವೇ ಎಂಬ ಪ್ರಶ್ನೆ ಸಿನಿಪ್ರಿಯರ ವಲಯದಲ್ಲಿ ಕೇಳಿಬರುತ್ತಿದೆ.

ಈ ಬಗ್ಗೆ ಹಲವು ಕಡೆ ವರದಿ ಆಗಿದೆ. ಆದರೆ ಅಧಿಕೃತವಾಗಿ ನೆಟ್​ಫ್ಲಿಕ್ಸ್​ನಲ್ಲಿ ಸಂಸ್ಥೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಪ್ರಾಜೆಕ್ಟ್​ಗೆ ರಾಜಮೌಳಿ ಕೂಡ ಬಂಡವಾಳ ಹೂಡುತ್ತಿದ್ದಾರೆ. ಆದರೆ ಅವರು ಸಹ ಈ ಗಾಸಿಪ್​ ಬಗ್ಗೆ ಮಾತನಾಡಿಲ್ಲ. ಸದ್ಯ ಅವರು ಆರ್​ಆರ್​ಆರ್​ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ‘RRR’ ಚಿತ್ರದಲ್ಲಿ ಜ್ಯೂ. ಎನ್​ಟಿಆರ್​, ರಾಮ್​​ ಚರಣ್​ ಹಾಗೂ ಆಲಿಯಾ ಭಟ್​ ಪ್ರಮುಖ ಪಾತ್ರಗಳನ್ನು ಮಾಡುತ್ತಿದ್ದಾರೆ. ಆಲಿಯಾ ಜನ್ಮದಿನದ ಪ್ರಯುಕ್ತ ಮಾ.15ರಂದು ಅವರ ಪಾತ್ರದ ಫಸ್ಟ್​ಲುಕ್​ ರಿಲೀಸ್​ ಮಾಡಲಾಗಿದ್ದು, ಅಭಿಮಾನಿಗಳ ಮೆಚ್ಚುಗೆ ಗಳಿಸಿದೆ.

ಇದನ್ನೂ ಓದಿ: ಟಿವಿ9 ಜೊತೆ ಬಾಹುಬಲಿ, ಭಜರಂಗಿ ಭಾಯ್ ಜಾನ್, RRR ಸಿನಿಮಾಗಳ ಕಥೆಗಾರ ವಿಜಯೇಂದ್ರ ಪ್ರಸಾದ್ ಮಾತು

ಸ್ನೇಹಿತರ ಅಕೌಂಟ್​ನಿಂದ ನೆಟ್​ಫ್ಲಿಕ್ಸ್​ ನೋಡುತ್ತಿರುವವರಿಗೆ ಕಹಿ ಸುದ್ದಿ; ಶೀಘ್ರದಲ್ಲೇ ಬರಲಿದೆ ಹೊಸ ನಿಯಮ