ವಿಚ್ಛೇದನದ ಬಗ್ಗೆ ಮೆಗಾಸ್ಟಾರ್ ಕುಟುಂಬದ ಕುಡಿ ನಿಹಾರಿಕಾ ಮಾತು
Niharika Konidela: ಮೆಗಾಸ್ಟಾರ್ ಕುಟುಂಬದ ಕುಡಿ ನಿಹಾರಿಕಾ ಕೋನಿಡೇಲ ಮತ್ತು ವಿವಾಹ ವಿಚ್ಛೇದನದ ಬಗ್ಗೆ ಮೊದಲ ಬಾರಿ ಮಾತನಾಡಿದ್ದಾರೆ. ಮರು ಮದುವೆಯ ಬಗ್ಗೆಯೂ ಮಾತನಾಡಿದ್ದಾರೆ.

ಮೆಗಾಸ್ಟಾರ್ (Megastar) ಕುಟುಂಬ, ತೆಲುಗು ಚಿತ್ರರಂಗದ (Tollywood) ಮೇಲೆ ದೊಡ್ಡ ಪ್ರಭಾವ ಬೀರಿರುವ, ಬೀರುತ್ತಿರುವ ಕುಟುಂಬ. ಮೆಗಾಸ್ಟಾರ್ ಅಥವಾ ಕೋನಿಡೇಲ ಕುಟುಂಬದ ಎಂಟು ಮಂದಿ ನಾಯಕ ನಟರು ಪ್ರಸ್ತುತ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಇದರಲ್ಲಿ ಐದು ಮಂದಿ ಭಾರಿ ದೊಡ್ಡ ಸ್ಟಾರ್ ನಟರುಗಳು. ಈ ಕುಟುಂಬದಲ್ಲಿ ಒಬ್ಬ ನಟಿಯೂ ಇದ್ದಾರೆ ಅದುವೇ ನಿಹಾರಿಕಾ ಕೋನಿಡೇಲ. ಮೆಗಾಸ್ಟಾರ್ ಚಿರಂಜೀವಿ ಸಹೋದರ ನಾಗಬಾಬು ಪುತ್ರಿ ನಿಹಾರಿಕಾ 2020ರ ಡಿಸೆಂಬರ್ ತಿಂಗಳಲ್ಲಿ ಉದ್ಯಮಿ ಚೈತನ್ಯ ಅವರನ್ನು ವಿವಾಹವಾಗಿದ್ದರು. ಆದರೆ ಎರಡೇ ವರ್ಷದಲ್ಲಿ ಇಬ್ಬರ ನಡುವೆ ಬಿರುಕು ಮೂಡಿ ಬಳಿಕ ವಿಚ್ಛೇದನವೂ ಆಯ್ತು. ವಿಚ್ಛೇದನದ ಬಗ್ಗೆ ಮಾತನಾಡದಿದ್ದ ನಿಹಾರಿಕಾ ಇದೀಗ, ತಮ್ಮ ವಿಚ್ಛೇದನ, ಮರು ಮದುವೆ ಇನ್ನಿತರ ವಿಷಯಗಳ ಬಗ್ಗೆ ಮಾತನಾಡಿದ್ದಾರೆ.
‘ಎಲ್ಲರೂ ಕೇಳುತ್ತಾರೆ ವಿಚ್ಛೇದನಕ್ಕೆ ಏನು ಕಾರಣ, ಒಂದು ಕಾರಣ ನೀಡು ಎಂದೆಲ್ಲ ಹೇಳುತ್ತಾರೆ. ಆದರೆ ವಿಚ್ಛೇದನಕ್ಕೆ ಒಂದು ಕಾರಣ ಇರಲಿಲ್ಲ. ಬದಲಿಗೆ ಹಲವಾರು ಕಾರಣಗಳಿದ್ದವು. ಅದನ್ನೆಲ್ಲ ವಿವರಿಸುವುದು ತುಸು ಕಷ್ಟ’ ಎಂದಿದ್ದಾರೆ. ಮರು ಮದುವೆ ಬಗ್ಗೆ ಮಾತನಾಡಿರುವ ನಿಹಾರಿಕಾ, ‘ನನಗೆ ಮಕ್ಕಳೆಂದರೆ ಇಷ್ಟ, ನಾನು ಮಕ್ಕಳನ್ನು ಹೊಂದಬೇಕು ಎಂಬ ಆಸೆ ಇದೆ. ಅದಕ್ಕಾಗಿ ನಾನು ಮದುವೆಯಾಗಬೇಕು, ಆದರೆ ಅದೊಂದೇ ಕಾರಣಕ್ಕೆ ಮದುವೆ ಆಗುವುದು ಸರಿಯಲ್ಲ ಎನಿಸುತ್ತದೆ’ ಎಂದಿದ್ದಾರೆ.
‘ನನಗೆ ಪ್ರೀತಿಯ ಬಗ್ಗೆ ಋಣಾತ್ಮಕ ಅಭಿಪ್ರಾಯವೇನಿಲ್ಲ. ನಾನು ಸದ್ಯಕ್ಕೆ ಒಬ್ಬರನ್ನು ಪ್ರೀತಿಸುವ ಬಗ್ಗೆ, ಮದುವೆಯ ಬಗ್ಗೆ ಯೋಚನೆ ಮಾಡುತ್ತಿಲ್ಲ. ಸದ್ಯಕ್ಕೆ ನಾನು ನನ್ನ ಕರಿಯರ್ ಮೇಲಷ್ಟೆ ಗಮನ ಹರಿಸುತ್ತಿದ್ದೇನೆ. ಒಂದೊಮ್ಮೆ ಪ್ರೀತಿ ಸಹಜವಾಗಿ ಆದರೆ ಆದಂತೆ. ನನಗೆ ಪ್ರೇಮ ವಿವಾಹ ಅಥವಾ ಅರೆಂಜ್ ಮ್ಯಾರೇಜ್ ಏನೇ ಆದರೂ ಅಡ್ಡಿಯಿಲ್ಲ. ಎರಡರ ಬಗ್ಗೆಯೂ ನನಗೆ ಗೌರವವಿದೆ. ಜೀವನ ಎಂಬುದು ಚಕ್ರವಿದ್ದಂತೆ ಅದನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ’ ಎಂದು ಸೂಚ್ಯವಾಗಿ ಹೇಳಿದ್ದಾರೆ ನಿಹಾರಿಕಾ.
ಇದನ್ನೂ ಓದಿ:ವಿಚ್ಛೇದನದ ಬಳಿಕ ಮತ್ತೆ ನಟನೆಗೆ ಮರಳಿದ ಚಿರಂಜೀವಿ ಮನೆ ಮಗಳು ನಿಹಾರಿಕಾ ಕೊನಿಡೆಲಾ
ನಿಹಾರಿಕಾ ಕೊನಿಡೇಲ ಚೇತನ್ ಎಂಬುವರೊಟ್ಟಿಗೆ 2020, ಡಿಸೆಂಬರ್ 9 ರಂದು ಅದ್ಧೂರಿಯಾಗಿ ಜೈಪುರದಲ್ಲಿ ವಿವಾಹವಾಗಿದ್ದರು. ಇಡೀ ಮೆಗಾಸ್ಟಾರ್ ಕುಟುಂಬ, ತೆಲುಗು ಚಿತ್ರರಂಗದ ದೊಡ್ಡ-ದೊಡ್ಡ ಸೆಲೆಬ್ರಿಟಿಗಳು ಆ ಮದುವೆಯಲ್ಲಿ ಪಾಲ್ಗೊಂಡಿದ್ದರು. ಸುಮಾರು ನಾಲ್ಕೈದು ದಿನಗಳ ಕಾಲ ಅದ್ಧೂರಿಯಾಗಿ ಆ ವಿವಾಹ ಸಂಭ್ರಮ ನಡೆದಿತ್ತು. ಆದರೆ ಅದಾಗಿ ಕೇವಲ ಒಂದು ವರ್ಷದ ಬಳಿಕ ಇಬ್ಬರ ನಡುವೆ ಮನಸ್ತಾಪ ಏರ್ಪಟ್ಟಿತು. ಆ ಸಮಯದಲ್ಲಿ ಚೇತನ್ ವಿರುದ್ಧ ಕೆಲವು ಆರೋಪಗಳು ಸಹ ಹೊರಬಂದವು. ಬಳಿಕ 2023 ರಲ್ಲಿ ಇಬ್ಬರೂ ವಿಚ್ಛೇದನ ಪಡೆದುಕೊಂಡರು.
ನಿಹಾರಿಕಾ 2016 ರಿಂದ 2019 ರ ವರೆಗೆ ಆರು ಸಿನಿಮಾಗಳಲ್ಲಿ ನಟಿಸಿದ್ದರು. ಮದುವೆ ಬಳಿಕ ನಟನೆಗೆ ವಿದಾಯ ಹೇಳದ್ದರು. ವಿಚ್ಛೇದನದ ಬಳಿಕ ಮತ್ತೆ ನಟನೆ ಪ್ರಾರಂಭಿಸಿದ್ದು, ‘ಡೆಡ್ ಪಿಕ್ಸೆಲ್ಸ್’ ಹೆಸರಿನ ವೆಬ್ ಸರಣಿಯಲ್ಲಿ ನಟಿಸಿದರು. ಅದು ಹಾಟ್ಸ್ಟಾರ್ನಲ್ಲಿ ಬಿಡುಗಡೆಯಾಯ್ತು. ಇದೀಗ ‘ಸಾಗು’ ಹೆಸರಿನ ಸಿನಿಮಾದಲ್ಲಿ ನಿಹಾರಿಕಾ ಕೋನಿಡೇಲ ನಟಿಸಿದ್ದು, ಸಿನಿಮಾದ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




