
ನಟ, ರಾಜಕಾರಣಿ ನಿಖಿಲ್ ಕುಮಾರ್ (Nikhil Kumar) ಅವರು ಅಭಿಮಾನಿಗಳಿಗೆ ಒಂದು ಮುಖ್ಯವಾದ ಸಂದೇಶ ನೀಡಿದ್ದಾರೆ. ಜನವರಿ 22ರಂದು ಅವರ ಜನ್ಮದಿನ. ಆದರೆ ಈ ಬಾರಿ ಅವರು ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಂದು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನಾ (Ram Mandir Inauguration) ಸಮಾರಂಭ ನಡೆಯಲಿದ್ದು, ಅದರಲ್ಲಿ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಭಾಗಿ ಆಗಲಿದ್ದಾರೆ. ಆ ಕಾರಣದಿಂದ ಅವರು ಈ ವರ್ಷ ಅಭಿಮಾನಿಗಳು ಮತ್ತು ಪಕ್ಷದ ಕಾರ್ಯಕರ್ತರನ್ನು ಹುಟ್ಟುಹಬ್ಬದ ದಿನ ಭೇಟಿಯಾಗುತ್ತಿಲ್ಲ. ಈ ಬಗ್ಗೆ ಮುಂಚಿತವಾಗಿ ಅವರು ಎಲ್ಲರಿಗೂ ಮಾಹಿತಿ ನೀಡಿದ್ದಾರೆ.
ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಹಾಗೂ ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಗೆ ಸಕಲ ತಯಾರಿ ಮಾಡಿಕೊಳ್ಳಲಾಗಿದೆ. ಆ ಐತಿಹಾಸಿಕ ಕ್ಷಣವನ್ನು ನೇರವಾಗಿ ವೀಕ್ಷಿಸುವ ಅವಕಾಶ ಕೆಲವರಿಗೆ ಸಿಗುತ್ತಿದೆ. ಕರ್ನಾಟಕದ ಕೆಲವು ರಾಜಕಾರಣಿಗಳು, ಉದ್ಯಮಿಗಳು, ಸಿನಿಮಾ ಸೆಲೆಬ್ರಿಟಿಗಳು ಮುಂತಾದವರಿಗೆ ಆಹ್ವಾನ ಬಂದಿದೆ. ಅದೇ ರೀತಿ, ನಿಖಿಲ್ ಕುಮಾರ್ ಅವರು ಕೂಡ ಅಯೋಧ್ಯೆಗೆ ತೆರಳಲು ಸಜ್ಜಾಗಿದ್ದಾರೆ.
ಇದನ್ನೂ ಓದಿ: ದೊಡ್ಡ ಪರದೆಯಲ್ಲೂ ವೀಕ್ಷಿಸಬಹದು ರಾಮ ಮಂದಿರ ಕಾರ್ಯಕ್ರಮ; 100 ರೂ. ಟಿಕೆಟ್
‘ಪ್ರೀತಿಯ ಅಭಿಮಾನಿಗಳಿಗೆ ನಮಸ್ಕಾರ. ಜನವರಿ 22, ನನ್ನ ಹುಟ್ಟುಹಬ್ಬದ ದಿನ ನಿಮ್ಮನ್ನು ಭೇಟಿಯಾಗಲು ಸಾಧ್ಯವಾಗುತ್ತಿಲ್ಲ. ಕ್ಷಮೆ ಇರಲಿ. ಅಯೋಧ್ಯೆಯ ಶ್ರೀರಾಮ ಮಂದಿರ ಉದ್ಘಾಟನೆಯಲ್ಲಿ ನಾನು ಭಾಗಿಯಾಗಬೇಕಿದೆ. ನೀವೆಲ್ಲರೂ ನೀವಿದ್ದ ಕಡೆಯಿಂದಲೇ ನನ್ನ ಹುಟ್ಟುಹಬ್ಬಕ್ಕೆ ಹರಿಸಿದರೆ ಅದೇ ನನಗೆ ಸಂತೋಷ’ ಎಂದು ನಿಖಿಲ್ ಕುಮಾರ್ ಅವರು ತಮ್ಮ ಅಭಿಮಾನಿಗಳಿಗೆ ಮತ್ತು ಪಕ್ಷದ ಕಾರ್ಯಕರ್ತರಿಗೆ ತಿಳಿಸಿದ್ದಾರೆ. ‘ನನ್ನ ಹುಟ್ಟುಹಬ್ಬಕ್ಕಾಗಿ ಯಾವುದೇ ದುಂದು ವೆಚ್ಚ ಬೇಡ. ಅದನ್ನೇ ಒಳ್ಳೆಯ ಕಾರ್ಯಕ್ಕೆ ಬಳಸಿ. ಮತ್ತೊಮ್ಮೆ ನಿಮ್ಮ ಬಳಿ ಕ್ಷಮೆ ಕೇಳುತ್ತ, ಆದಷ್ಟು ಬೇಗ ಭೇಟಿ ಆಗೋಣ ಎಂದು ತಿಳಿಸುತ್ತೇನೆ. ನಿಮ್ಮ ಪ್ರೀತಿಯ ನಿಖಿಲ್ ಕುಮಾರ್’ ಎಂದು ಅವರು ಪತ್ರ ಪೂರ್ಣಗೊಳಿಸಿದ್ದಾರೆ.
ಇದನ್ನೂ ಓದಿ: ರಾಮ ಮಂದಿರ ಉದ್ಘಾಟನೆ: ಶಾರುಖ್, ಸಲ್ಮಾನ್, ಆಮಿರ್ ಖಾನ್ಗೆ ನೀಡಿಲ್ಲ ಆಹ್ವಾನ
ಕನ್ನಡದ ನಟ ರಿಷಬ್ ಶೆಟ್ಟಿ ಅವರಿಗೂ ಅಯೋಧ್ಯೆಯಿಂದ ಆಹ್ವಾನ ಬಂದಿದೆ. ಯಶ್ ಕೂಡ ಈ ಸಮಾರಂಭದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಅಮಿತಾಭ್ ಬಚ್ಚನ್, ಆಲಿಯಾ ಭಟ್, ರಜನಿಕಾಂತ್, ರಣಬೀರ್ ಕಪೂರ್, ಕಂಗನಾ ರಣಾವತ್, ಆಯುಷ್ಮಾನ್ ಖುರಾನಾ, ಅಕ್ಷಯ್ ಕುಮಾರ್, ಅನುಷ್ಕಾ ಶರ್ಮಾ, ಅನುಪಮ್ ಖೇರ್, ಅಜಯ್ ದೇವಗನ್, ಪ್ರಭಾಸ್, ರಾಮ್ ಚರಣ್, ಮಾಧುರಿ ದೀಕ್ಷಿತ್, ಮೋಹನ್ಲಾಲ್, ಸನ್ನಿ ಡಿಯೋಲ್, ಸಂಜಯ್ ಲೀಲಾ ಬನ್ಸಾಲಿ, ಚಿರಂಜೀವಿ ಸೇರಿದಂತೆ ಹಲವರು ರಾಮ ಮಂದಿರ ಉದ್ಘಾಟನೆಯಲ್ಲಿ ಹಾಜರಿ ಹಾಕಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ