ತೆಲುಗು ಸಿನಿಮಾ (Tollywood) ನಟ ಅಥವಾ ನಟಿಯರಿಗೆ ರಾಜಕೀಯಕ್ಕೆ ತೀರಾ ಅವಿನಾಭಾವ ಸಂಬಂಧ. ಕನ್ನಡದ ನಟರಂತೆ ಪೊಲಿಟಿಕಲ್ ಕರೆಕ್ಟ್ ಮಾದರಿ ಅವರದ್ದಲ್ಲ, ಅಲ್ಲಿನ ಬಹುತೇಕ ನಟರು ಯಾವುದಾದರೂ ಒಂದು ಪಕ್ಷದೊಂದಿಗೆ ನೇರ ಸಂಬಂಧ ಹೊಂದಿದ್ದಾರೆ. ಸಿನಿಮಾ ನಟರು ರಾಜಕೀಯಕ್ಕೆ ಧುಮುಕುವುದು ತೀರ ಸಾಮಾನ್ಯ ಸಂಗತಿ. ರಾಜಕೀಯ ಪಕ್ಷ (Political Party) ಸ್ಥಾಪಸಿ ವರ್ಷದ ಒಳಗಾಗಿ ಸಿಎಂ ಆಗಿಬಿಟ್ಟ ಸೀನಿಯರ್ ಎನ್ಟಿಆರ್ ತೆಲುಗಿನ ಹಲವು ನಟರಿಗೆ ಆದರ್ಶ. ಇದೀಗ ತೆಲುಗಿನ ಮತ್ತೊಬ್ಬ ನಾಯಕ ನಟ ರಾಜಕೀಯಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಅದೂ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಸಮಯದಲ್ಲಿಯೇ ಈ ನಿರ್ಣಯ ತೆಗೆದುಕೊಂಡಿರುವುದು ಅವರ ಅಭಿಮಾನಿಗಳಿಗೆ ಆಶ್ಚರ್ಯ ತಂದಿದೆ.
2002 ರಲ್ಲಿ ಬಿಡುಗಡೆ ಆಗಿದ್ದ ಜಯಂ ಸಿನಿಮಾ ಮೂಲಕ ಸಂಚಲನ ಸೃಷ್ಟಿಸಿದ್ದ ನಟ ನಿತಿನ್ ಇದೀಗ ರಾಜಕೀಯಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ತೆಲಂಗಾಣದ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ನಿತಿನ್ ಆಸಕ್ತರಾಗಿದ್ದು ಕಾಂಗ್ರೆಸ್ ಪಕ್ಷದ ಕದವನ್ನು ನಿತಿನ್ ಈಗಾಗಲೇ ತಟ್ಟಿದ್ದಾರೆ ಎನ್ನಲಾಗುತ್ತಿದೆ. ನಿಜಾಮಾಬಾದ್ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಟಿಕೆಟ್ಗಾಗಿ ನಿತಿನ್ ಬೇಡಿಕೆ ಇಟ್ಟಿದ್ದು ಈ ಬಗ್ಗೆ ತೆಲಂಗಾಣ ಕಾಂಗ್ರೆಸ್ ಚರ್ಚಿಸುತ್ತಿದೆ ಎನ್ನಲಾಗುತ್ತಿದೆ.
ನಟ ನಿತಿನ್ರ ಕೆಲವು ಹತ್ತಿರದ ಸಂಬಂಧಿಗಳು ಈಗಾಗಲೇ ಸಕ್ರಿಯ ರಾಜಕೀಯದಲ್ಲಿದ್ದಾರೆ. ನಿತಿನ್ ಅವರದ್ದು ಸಿನಿಮಾ ಹಾಗೂ ರಾಜಕೀಯ ಎರಡರಲ್ಲೂ ತೊಡಗಿಸಿಕೊಂಡಿರುವ ಕುಟುಂಬ. ನಿತಿನ್ ರಾಜಕೀಯಕ್ಕೆ ಬರಬೇಕು ಎಂದು ಅವರ ಕುಟುಂಬ ಸದಸ್ಯರು ಮೊದಲಿನಿಂದಲೂ ಒತ್ತಡ ಹೇರುತ್ತಿದ್ದರು. ಆದರೆ ನಿತಿನ್ ಈ ಬಗ್ಗೆ ಮನಸ್ಸು ಮಾಡಿರಲಿಲ್ಲ. ಆದರೆ ಈಗ ನಿತಿನ್ ರಾಜಕೀಯಕ್ಕೆ ಬರುವುದು ಬಹುತೇಕ ಖಾತ್ರಿ ಎನ್ನಲಾಗುತ್ತಿದೆ. ಆದರೆ ಚುನಾವಣೆ ಕ್ಷೇತ್ರದ ವಿಷಯವಾಗಿ ನಿರ್ಣಯವನ್ನು ತೆಲಂಗಾಣ ಕಾಂಗ್ರೆಸ್ ಮಾಡುತ್ತಿದೆಯಾದ್ದರಿಂದ ಪಕ್ಷ ಸೇರ್ಪಡೆ ತುಸು ತಡವಾಗಿದೆ.
ಇದನ್ನೂ ಓದಿ:ಮದ್ಯದ ಬೆಲೆ ಇಳಿಸುವ ಭರವಸೆ ನೀಡಿದ ಪವನ್ ಕಲ್ಯಾಣ್: ಯುವಕರು ಫುಲ್ ಖುಷ್
ಕೆಲ ತಿಂಗಳ ಹಿಂದೆ ನಿತಿನ್ ಅವರನ್ನು ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ನಿತಿನ್ ಅನ್ನು ಬಿಜೆಪಿ ಪಕ್ಷಕ್ಕೆ ಶಾ ಆಹ್ವಾನಿಸಿದ್ದರು ಎನ್ನಲಾಗಿತ್ತು. ಆದರೆ ಈಗಾಗಲೇ ನಿತಿನ್ ಕುಟುಂಬದವರು ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿರುವ ಕಾರಣ, ಶಾ ಅವರ ಆಹ್ವಾನವನ್ನು ನಿತಿನ್ ನಯವಾಗಿ ತಿರಸ್ಕರಿಸಿದ್ದರು ಎನ್ನಲಾಗುತ್ತಿದೆ.
ಇನ್ನು ಆಂಧ್ರ ಪ್ರದೇಶ ಚುನಾವಣೆಯಂತೂ ಸಿನಿಮಾದವರಿಂದಾಗಿಯೇ ರಂಗೇರಿದೆ. ಪವನ್ ಕಲ್ಯಾಣ್ ಭರ್ಜರಿ ಪ್ರಚಾರದಲ್ಲಿ ನಿರತರಾಗಿದ್ದು ಇತರೆ ನಟರ ಅಭಿಮಾನಿಗಳನ್ನು ತಮ್ಮ ಪಕ್ಷದ ಬೆಂಬಲಿಗರನ್ನಾಗಿಸಿಕೊಳ್ಳುವ ಪ್ರಯಾಸದಲ್ಲಿದ್ದಾರೆ. ಜಗನ್ ವಿರುದ್ಧ ಟೀಕಾ ಪ್ರಹಾರ ನಡೆಸುತ್ತಲೇ ಬರುತ್ತಿರುವ ಪವನ್, ಈಗಾಗಲೇ ಮೊದಲ ಹಂತದ ಚುನಾವಣಾ ಪ್ರಚಾರ ಪ್ರವಾಸ ಮುಗಿಸಿ ಎರಡನೇ ಹಂತವನ್ನು ಕೆಲವೇ ದಿನಗಳಲ್ಲಿ ಪ್ರಾರಂಭ ಮಾಡಲಿದ್ದಾರೆ. ಇನ್ನು ಜೂ ಎನ್ಟಿಆರ್ ಸಹ ಸಕ್ರಿಯ ರಾಜಕೀಯಕ್ಕೆ ಬರಬೇಕೆಂಬ ಒತ್ತಡ ಜೋರಾಗಿಯೇ ಕೇಳಿ ಬರುತ್ತಿದೆ. ಆದರೆ ಪ್ರಸ್ತುತ ಅವರು ಅವರದ್ದೇ ಕುಟುಂಬದ ಟಿಡಿಪಿ ಪಕ್ಷದಿಂದ ತಸು ಅಂತರ ಕಾಯ್ದುಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ