ಮುಂಬೈ: ಬಾಲಿವುಡ್ ಖ್ಯಾತ ನಟ ನಾಸಿರುದ್ದೀನ್ ಶಾ (70) ಆರೋಗ್ಯ ಸ್ಥಿತಿಯಲ್ಲಿ ಏರುಪೇರಾಗಿದ್ದು, ಸದ್ಯ ಮುಂಬೈನ ಹಿಂದುಜಾ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅವರ ಪತ್ನಿ, ನಟಿ ರತ್ನಾ ಪಾಠಕ್ ಶಾ ತಿಳಿಸಿದ್ದಾರೆ. ನಾಸಿರುದ್ದೀನ್ ಶಾ ನ್ಯುಮೋನಿಯಾದಿಂದ ಬಳಲುತ್ತಿದ್ದು, ಭಯಪಡುವಂತಹ ಸನ್ನಿವೇಶ ಇಲ್ಲ. ವೈದ್ಯರು ನೀಡುತ್ತಿರುವ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಸದ್ಯದಲ್ಲೇ ಡಿಸ್ಚಾರ್ಜ್ ಆಗಲಿದ್ದಾರೆಂದು ರತ್ನಾ ಪಾಠಕ್ ಹೇಳಿದ್ದಾರೆ.
ಮೂಲತಃ ಉತ್ತರಪ್ರದೇಶದ ಬಾರ್ಬಂಕಿಯವರಾದ ನಾಸಿರುದ್ದೀನ್ ಶಾ ಪ್ರತಿಭಾವಂತ ನಟ. ತಮ್ಮ ಸಿನಿವೃತ್ತಿ ಜೀವನದಲ್ಲಿ ಮೂರು ನ್ಯಾಷನಲ್ ಫಿಲ್ಮ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರು ಕೊನೇಬಾರಿಗೆ ಕಾಣಿಸಿಕೊಂಡಿದ್ದು 2020ರ ನಾಟಕ ‘ಮೀ ರಕ್ಸಮ್’ನಲ್ಲಿ. ಅದಕ್ಕೂ ಮೊದಲು Bandish Bandits ಎಂಬ ವೆಬ್ಸೀರಿಸ್ನಲ್ಲಿ ಅಭಿನಯಿಸಿ, ಸಿಕ್ಕಾಪಟೆ ಜನಮೆಚ್ಚುಗೆ ಗಳಿಸಿದ್ದರು. ಇದರಲ್ಲಿ ರಿತ್ವಿಕ್ ಭೌಮಿಕ್, ಶ್ರೇಯಾ ಚೌಧರಿ ಮತ್ತು ಇತ್ತೀಚೆಗಷ್ಟೇ ನಿಧನರಾದ ಅಮಿತ್ ಮಿಸ್ಟ್ರಿ ಕೂಡ ಅಭಿನಯಸಿದ್ದಾರೆ.
ನಾಸಿರುದ್ದೀನ್ ಶಾ ಅವರ ಮಾಸೂಮ್, ಸರ್ಫ್ರೋಷ್, ಇಕ್ಬಾಲ್, ಮಾನ್ಸೂನ್ ವೆಡ್ಡಿಂಗ್, ಮಕ್ಬೂಲ್ ಸೇರಿ ಹಲವು ಸಿನಿಮಾಗಳು ಮೆಚ್ಚುಗೆಗಳಿಸಿದ್ದವು. ವಿಮರ್ಶಕರೂ ಸಹ ಈ ಸಿನಿಮಾಗಳನ್ನು ತುಂಬ ಪಾಸಿಟಿವ್ ಆಗಿ ವಿಮರ್ಶಿಸಿದ್ದರು. ಇವರು ಮೊದಲ ನ್ಯಾಷನಲ್ ಫಿಲ್ಮ್ ಅವಾರ್ಡ್ನ್ನು 1979ರಲ್ಲಿ ಸ್ಪರ್ಶ್ ಸಿನಿಮಾದ ಅಭಿನಯಕ್ಕಾಗಿ ಪಡೆದಿದ್ದಾರೆ. ಎರಡನೇ ನ್ಯಾಷನಲ್ ಅವಾರ್ಡ್ನ್ನು 1984ರಲ್ಲಿ ಪಾರ್ ಸಿನಿಮಾಕ್ಕಾಗಿ ಮತ್ತು ಮೂರನೇ ಬಾರಿಗೆ ಈ ಅವಾರ್ಡ್ನ್ನು 2005ರಲ್ಲಿ ಇಕ್ಬಾಲ್ ಸಿನಿಮಾದ ಅಭಿನಯಕ್ಕಾಗಿ ಪಡೆದಿದ್ದಾರೆ.
ಇದನ್ನೂ ಓದಿ: Garuda Purana: ಮರಣಾನಂತರ ಸುಮಾರು 12 ಲಕ್ಷ ಕಿ.ಮೀ ದೂರ ಕ್ರಮಿಸುತ್ತವೆ ಆತ್ಮ; ಎದುರಾಗುವ ಕಷ್ಟಗಳು ಎಂಥವು ಗೊತ್ತಾ?
(Noted Actor Naseeruddin Shah Admitted In Mumbai Hospital With Pneumonia)