ಒಬ್ಬ ವ್ಯಕ್ತಿಯ ಬಂಧನದಿಂದ ನಿರಾಳವಾಯ್ತು ತೆಲುಗು ಚಿತ್ರರಂಗ: ಸಿಕ್ಕಿದ್ದು ಹೇಗೆ?

Piracy website: ತೆಲುಗಿನ ಸಿನಿಮಾ ನಿರ್ಮಾಪಕರಿಗೆ ವರ್ಷಗಳಿಂದ ಕಾಡುತ್ತಲೇ ಬಂದಿದ್ದ ಕುಖ್ಯಾತ ಪೈರಸಿ ವೆಬ್​​ಸೈಟ್​​ನ ಮಾಲೀಕನನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ. ಆತನ ಬಂಧನದಿಂದ ತೆಲುಗು ಸಿನಿಮಾ ನಿರ್ಮಾಪಕರು ನಿರಾಳವಾದಂತಾಗಿದೆ. ಅಷ್ಟಕ್ಕೂ ಆ ವ್ಯಕ್ತಿಯ ಬಂಧನ ಆಗಿದ್ದು ಹೇಗೆ? ಆ ವ್ಯಕ್ತಿ ಪೈರಸಿ ವೆಬ್ ಸೈಟ್ ನಡೆಸುತ್ತಿದ್ದಿದ್ದು ಹೇಗೆ? ಇಲ್ಲಿದೆ ಮಾಹಿತಿ...

ಒಬ್ಬ ವ್ಯಕ್ತಿಯ ಬಂಧನದಿಂದ ನಿರಾಳವಾಯ್ತು ತೆಲುಗು ಚಿತ್ರರಂಗ: ಸಿಕ್ಕಿದ್ದು ಹೇಗೆ?
Ibomma Ravi

Updated on: Nov 16, 2025 | 5:09 PM

ತೆಲುಗು ಚಿತ್ರರಂಗ (Tollywood) ದೇಶದಲ್ಲಿಯೇ ಬಹಳ ಲಾಭದಾಯಕ ಚಿತ್ರರಂಗ. ತೆಲುಗು ಚಿತ್ರರಂಗದಷ್ಟು ಸಕ್ಸಸ್ ರೇಟ್ ಭಾರತದ ಇನ್ಯಾವ ಚಿತ್ರರಂಗದಲ್ಲಿಯೂ ಇಲ್ಲ ಎನ್ನಲಾಗುತ್ತಿದೆ. ಇದೇ ಕಾರಣಕ್ಕೋ ಏನೋ ಪೈರಸಿ ಸಮಸ್ಯೆ ಹೆಚ್ಚು ಕಾಡುತ್ತಿರುವುದು ತೆಲುಗು ಚಿತ್ರರಂಗವನ್ನೇ. ತೆಲುಗು ಸಿನಿಮಾಗಳು ಕೆಲವು ಬಿಡುಗಡೆಗೆ ಮುಂಚೆಯೇ ಲೀಕ್ ಆಗಿ ಬಿಡುತ್ತವೆ. ಪೈರಸಿಯಿಂದ ನಿರ್ಮಾಪಕರು ಪ್ರತಿ ವರ್ಷ ಸುಮಾರು 500-600 ಕೋಟಿ ನಷ್ಟ ಅನುಭವಿಸುತ್ತಿದ್ದಾರೆ ಎನ್ನುತ್ತದೆ ವರದಿ. ಆದರೆ ಇದೀಗ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದು, ಇಡೀ ತೆಲುಗು ಚಿತ್ರರಂಗ ಇದರಿಂದ ನಿರಾಳತೆ ಅನುಭವಿಸಿದೆ.

ಕೆಲ ತಿಂಗಳ ಹಿಂದಷ್ಟೆ ಮೆಗಾಸ್ಟಾರ್ ಚಿರಂಜೀವಿ ಸೇರಿದಂತೆ ಹಲವು ಪ್ರಮುಖ ನಿರ್ಮಾಪಕರುಗಳು ಸೈಬರಾಬಾದ್ ಪೊಲೀಸರ ಬಳಿ ಪೈರಸಿ ತಡೆಗೆ ಕಠಿಣ ಕ್ರಮವಹಿಸುವಂತೆ ಮನವಿ ಮಾಡಿದ್ದರು. ಅದಾದ ಕೆಲವೇ ದಿನಗಳಲ್ಲಿ ಕೆಲವು ಪೈರಸಿಕೋರರನ್ನು ಪೊಲೀಸರು ಹಿಡಿದು ಮತ್ತೆ ನಿರ್ಮಾಪಕರು, ನಟರುಗಳನ್ನು ಕರೆಸಿ ಅವರಿಗೆ ಪೈರಸಿ ಕೋರರ ದಂಧೆಯನ್ನು ತೋರಿಸಿದ್ದರು. ಆಗ ನಿರ್ಮಾಪಕರುಗಳು ಐಬೊಮ್ಮ ಪೈರಸಿ ಸೈಟಿನವರನ್ನು ಬಂಧಿಸುವಂತೆ ವಿಶೇಷ ಮನವಿ ಮಾಡಿದ್ದರು. ಅದೇ ಸಮಯದಲ್ಲಿ ಐಬೊಮ್ಮ ಸೈಟಿನವರು ಪೊಲೀಸರಿಗೆ ಸವಾಲು ಹಾಕಿ ಬಹಿರಂಗ ಪತ್ರವೊಂದನ್ನು ಬರೆದಿದ್ದರು. ಆದರೆ ಈಗ ಐಬೊಮ್ಮ ಸೈಟಿನ ಪ್ರಮುಖ ವ್ಯಕ್ತಿ ರವಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಐಬೊಮ್ಮ, ತೆಲುಗು ಚಿತ್ರರಂಗಕ್ಕೆ ಮಾರಕವಾಗಿದ್ದ ಪ್ರಮುಖ ಪೈರಸಿ ವೆಬ್​​ಸೈಟ್ ಆಗಿತ್ತು. ಐಬೊಮ್ಮ ಸೈಟಿನವರು, ಸಿನಿಮಾ ಬಿಡುಗಡೆಗೆ ಮುಂಚೆ ಜಾಹೀರಾತು ನೀಡಿ ಪೈರಸಿ ಮಾಡುತ್ತಿದ್ದರು. ಆದರೆ ಇದೀಗ ಐಬೊಮ್ಮ ಸೈಟ್ ಪ್ರಾರಂಭ ಮಾಡಿದ ವ್ಯಕ್ತಿ ಎನ್ನಲಾಗುತ್ತಿರುವ ಇಮ್ಮಡಿ ರವಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಫ್ರಾನ್ಸ್​​ನಿಂದ ರವಿ ಹೈದರಾಬಾದ್​​ಗೆ ಶುಕ್ರವಾರ ರಾತ್ರಿ ಮರಳಿದ್ದು, ಆತ ಮರಳಿದ ಕೂಡಲೇ ಪೊಲೀಸರು ಆತನ ಬಂಧಿಸಿ, ಕುಕ್ಕಟ್​ಪಲ್ಲಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಇದನ್ನೂ ಓದಿ:ವಾರ್ತೆಗಳು ಓದುತ್ತಿರುವವರು ಶಂಕರ್‌ನಾಗ್: ನಾಗಶೇಖರ್ ಹೊಸ ಸಿನಿಮಾಗೆ ಆಕರ್ಷಕ ಟೈಟಲ್

ರವಿ, ಕೆರೆಬಿಯನ್ ದ್ವೀಪವೊಂದನ್ನು ನೆಲೆಯಾಗಿ ಇರಿಸಿಕೊಂಡು ಅಲ್ಲಿಂದ ಐಬೊಮ್ಮ ವೆಬ್​​ಸೈಟ್ ಅನ್ನು ರನ್ ಮಾಡುತ್ತಿದ್ದ ಎನ್ನಲಾಗುತ್ತಿದೆ. ರವಿಯಿಂದ ಕೆಲ ಹಾರ್ಡ್​​ ಡ್ರೈವ್​​ಗಳನ್ನು ವಶಪಡಿಸಿಕೊಂಡಿದ್ದಾರೆ. ರವಿಗೆ ಸೇರಿದ ನಿವಾಸದ ಮೇಲೆ ದಾಳಿ ಮಾಡಿ ಲ್ಯಾಪ್​​ಟಾಪ್, ಹಾರ್ಡ್​ ಡ್ರೈವ್, ಪೆನ್ ಡ್ರೈವ್ ಇನ್ನಿತರೆಗಳನ್ನು ವಶಕ್ಕೆ ಪಡೆದಿದ್ದಾರೆ. ಅಂದಹಾಗೆ ಇದೀಗ ರವಿ ಅನ್ನು ಬಂಧಿಸುವಲ್ಲಿ ಅವರ ಪತ್ನಿಯೆ ಪ್ರಮುಖ ಪಾತ್ರ ವಹಿಸಿದ್ದಾರೆ ಎಂಬ ಮಾತುಗಳು ಸಹ ಕೇಳಿಬರುತ್ತಿವೆ.

ವೈಜಾಗ್ ಮೂಲದ ರವಿ, ಹೈದರಾಬಾದ್​​ನ ಕುಕ್ಕಟಪಲ್ಲಿಯಲ್ಲಿ ಅಪಾರ್ಟ್​​ಮೆಂಟ್ ಹೊಂದಿದ್ದ. ಆದರೆ ಆತ ಹೆಚ್ಚಾಗಿ ಫ್ರಾನ್ಸ್​​ನಲ್ಲಿಯೇ ಇರುತ್ತಿದ್ದ. ಇತ್ತೀಚೆಗೆ ರವಿ ಹಾಗೂ ಆತನ ಪತ್ನಿಗೆ ಭಿನ್ನಾಭಿಪ್ರಾಯಗಳು ಮೂಡಿದ್ದವು. ಇಬ್ಬರೂ ಪರಸ್ಪರ ವಿಚ್ಛೇದನ ಪಡೆಯಲು ಮುಂದಾಗಿದ್ದರು. ಪತ್ನಿಯೊಂದಿಗೆ ವಿಚ್ಛೇದನ ಪಡೆಯಲೆಂದೇ ರವಿ ಫ್ರ್ಯಾನ್ಸ್​​ನಿಂದ ಹೈದರಾಬಾದ್​​ಗೆ ಬಂದಿದ್ದ. ರವಿ ಹೈದರಾಬಾದ್​​ಗೆ ಬರುತ್ತಿರುವ ವಿಷಯವನ್ನು ಆತನ ಪತ್ನಿಯೇ ಪೊಲೀಸರಿಗೆ ತಿಳಿಸಿ, ಆತನ ಬಂಧನದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:08 pm, Sun, 16 November 25