ಎನ್​ಟಿಆರ್ ಶತಮಾನೋತ್ಸವದಲ್ಲಿ ಶಿವರಾಜ್​ಕುಮಾರ್, ಬಾಲ್ಯದಲ್ಲಿ ಕಂಡ ದೃಶ್ಯ ವೈಭವ ವಿವರಿಸಿದ ಶಿವಣ್ಣ

|

Updated on: May 21, 2023 | 4:12 PM

Shiva Rajkumar: ತೆಲುಗು ಚಿತ್ರರಂಗದ ದಂತಕತೆ ಎನ್​ಟಿಆರ್ 100ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಎನ್​ಟಿಆರ್ ಬಗೆಗಿನ ನೆನಪುಗಳನ್ನು ಸ್ಮರಿಸಿದರು.

ಎನ್​ಟಿಆರ್ ಶತಮಾನೋತ್ಸವದಲ್ಲಿ ಶಿವರಾಜ್​ಕುಮಾರ್, ಬಾಲ್ಯದಲ್ಲಿ ಕಂಡ ದೃಶ್ಯ ವೈಭವ ವಿವರಿಸಿದ ಶಿವಣ್ಣ
ಎನ್​ಟಿಆರ್-ಶಿವರಾಜ್ ಕುಮಾರ್
Follow us on

ತೆಲುಗು ಚಿತ್ರರಂಗದ (Tollywood) ದಂತಕತೆ ಎನ್​ಟಿಆರ್ (NTR). ಕನ್ನಡಕ್ಕೆ ರಾಜ್​ಕುಮಾರ್ (Dr Rajkumar) ಎಂತೋ ಅಂತೆಯೇ ತೆಲುಗು ಚಿತ್ರರಂಗಕ್ಕೆ ಎನ್​ಟಿಆರ್. ಚಿತ್ರರಂಗದಲ್ಲಿ ಅನಭಿಷಿಕ್ತ ದೊರೆಯಾಗಿ ಮೆರೆದ ಎನ್​ಟಿಆರ್, ತೆಲುಗು ಜನರ ಸ್ವಾಭಿಮಾನ ಕೆರಳಿಸಿ ಬಲಿಷ್ಠ ಕಾಂಗ್ರೆಸ್ ಪಕ್ಷವನ್ನು ಎದುರು ಹಾಕಿಕೊಂಡು ಪಕ್ಷ ಕಟ್ಟಿ ವರ್ಷವಾಗುವ ಮುನ್ನವೇ ಸಿಎಂ ಸಹ ಆದವರು. ಎನ್​ಟಿಆರ್​ ಜನಿಸಿ ನೂರು ವರ್ಷಗಳಾಗಿರುವ ಕಾರಣ ಅವರ ಕುಟುಂಬದವರು ಎನ್​ಟಿಆರ್ 100 ಕಾರ್ಯಕ್ರಮವನ್ನು ನಿನ್ನೆ ಅದ್ಧೂರಿಯಾಗಿ ಆಯೋಜನೆ ಮಾಡಿದ್ದರು. ಕಾರ್ಯಕ್ರಮದಲ್ಲಿ ನಟ ಶಿವರಾಜ್ ಕುಮಾರ್ ಸಹ ಭಾಗಿಯಾಗಿದ್ದರು.

ನಮಸ್ಕಾರ ಎನ್ನುವ ಮೂಲಕ ಮಾತು ಆರಂಭಿಸಿದ ಶಿವಣ್ಣ ತೆಲುಗು ಸರಿಯಾಗಿ ಬರುವುದಿಲ್ಲ ಕ್ಷಮಿಸಿ ಎಂದು ಇಂಗ್ಲೀಷ್​ನಲ್ಲಿ ಮಾತು ಮುಂದುವರೆಸಿ ”ಎನ್​ಟಿಆರ್ ಅವರಂಥಹಾ ಮೇರು ವ್ಯಕ್ತಿಯ ನೂರನೇ ಜನ್ಮ ಶತಾಬ್ಧಿಯಲ್ಲಿ ಭಾಗಿಯಾಗಿರುವುದು ನನ್ನ ಪುಣ್ಯವೆಂದು ಭಾವಿಸುತ್ತೇನೆ. ಅವರ ಬಗ್ಗೆ ಹೇಳಲಿಕ್ಕೆ ಬಹಳ ವಿಷಯಗಳಿವೆ. ನನಗೆ ಎನ್​ಟಿಆರ್ ಬಗೆಗೆ ಮೊದಲ ನೆನಪೆಂದರೆ, ನಾನು ಶಾಲೆಯಲ್ಲಿ ಕಲಿಯುತ್ತಿರಬೇಕಾದರೆ ನಮ್ಮ ಕಾರು ಕೋಣಂಬಾಕಂನಿಂದ ಟಿ ನಗರಕ್ಕೆ ಹೋಗುತ್ತಿತ್ತು, ಮಧ್ಯದಲ್ಲಿ ಹಬೀಬುಲ್ಲಾ ರಸ್ತೆ ಆ ರಸ್ತೆಯ ಬಲಭಾಗದಲ್ಲಿ ಎನ್​ಟಿಆರ್ ಅವರ ಮನೆ ಇತ್ತು. ಅಲ್ಲಿ ದೊಡ್ಡ ಸಂಖ್ಯೆಯ ಜನ ಸೇರಿರುತ್ತಿದ್ದರು. ಆಗಾಗ ಎನ್​ಟಿಆರ್ ಅವರು ಹೊರಗೆ ಬಂದು ಎಲ್ಲರತ್ತಲೂ ಕೈ ಬೀಸುತ್ತಿದ್ದರು. ನಾವು ಸ್ವಲ್ಪ ಹೊತ್ತು ಅಲ್ಲಿ ನಿಂತು ನೋಡಿ ಬಳಿಕ ಮುಂದೆ ಹೋಗುತ್ತಿದ್ದೆವು” ಎಂದರು.

”ಆ ನಂತರ ಜನ ನಮ್ಮ ಮನೆಗೆ ಅಪ್ಪಾಜಿಯವರನ್ನು ನೋಡಲು ಬರುತ್ತಿದ್ದರು. ಆ ಸಮಯದಲ್ಲಿ ನಮಗೆ ಕೆಲವು ನಟರಷ್ಟೆ ಗೊತ್ತಿದ್ದರು. ಎನ್​ಟಿಆರ್ ಹಾಗೂ ಅಪ್ಪಾಜಿ ಅವರನ್ನು ಕಾಣಲು ಆಂಧ್ರ, ಕರ್ನಾಟಕದಿಂದ ಬಸ್ಸುಗಳಲ್ಲಿ ಜನರು ಬರುತ್ತಿದ್ದರು. ಎಷ್ಟು ಪುಣ್ಯವಂತರು ಇವರು ಎಂದು ನಮಗೆ ಅನ್ನಿಸುತ್ತಿತ್ತು. ಎನ್​ಟಿಆರ್ ಅವರಿಗೆ ನಮ್ಮ ತಂದೆ ತಮ್ಮನಂತೆ ಇದ್ದರು. ಆ ಗೆಳೆತನ ಹಾಗೆಯೇ ಇತ್ತು. ಇವರಿಬ್ಬರನ್ನು ಹೊರತುಪಡಿಸಿದರೆ ಎಂಜಿಆರ್, ಶಿವಾಜಿ ಗಣೇಶನ್, ಪ್ರೇಮ್ ನಜೀರ್, ನಾಗೇಶ್ವರ ರಾವ್ ಅವರುಗಳ ಪರಿಚಯವೂ ಆಗಿತ್ತು. ಬಸ್ಸುಗಟ್ಟಲೆ ಜನರು ಇವರನ್ನು ಕಾಣಲು ಬರುತ್ತಿದ್ದುದೆ ನಮಗೆ ಆಶ್ಚರ್ಯ ತರುತ್ತಿತ್ತು” ಎಂದರು ಶಿವಣ್ಣ.

ಇದನ್ನೂ ಓದಿ:NTR 31: ಪ್ರಶಾಂತ್ ನೀಲ್-ಜೂನಿಯರ್ ಎನ್​ಟಿಆರ್ ಚಿತ್ರದ ಶೂಟಿಂಗ್ ಆರಂಭ ಯಾವಾಗ? ಕೊನೆಗೂ ಸಿಕ್ತು ಮಾಹಿತಿ

”ಎನ್​ಟಿಆರ್ ಅವರ ಬಗೆಗಿನ ಮತ್ತೊಂದು ನೆನಪೆಂದರೆ, 1984 ರಲ್ಲಿ ಹೈದರಾಬಾದ್​ನಲ್ಲಿ ಫಿಲಂಫೆಸ್ಟ್ ನಡೆದಾಗ ಎನ್​ಟಿಆರ್ ಅವರು ಆಂಧ್ರ ಪ್ರದೇಶದ ಸಿಎಂ ಆಗಿದ್ದರು. ಹಲವು ರಾಜ್ಯಗಳಿಂದ ನಟ-ನಟಿಯರು ಹೈದರಾಬಾದ್​ಗೆ ಬಂದಿದ್ದರು. ಎಲ್ಲರನ್ನೂ ವಿಮಾನನಿಲ್ದಾಣದಲ್ಲಿಯೇ ಸ್ವತಃ ಎನ್​ಟಿಆರ್ ಅವರೇ ಸ್ವಾಗತ ಮಾಡಿದ್ದರು. ಆಗ ನಾನೂ ಸಹ ಹೈದರಾಬಾದ್​ಗೆ ಬಂದಿದ್ದೆ. ಒಬ್ಬ ಸಿಎಂ ಆಗಿ ಅವರು ವಿಮಾನನಿಲ್ದಾಣದಲ್ಲಿಯೇ ನಟರನ್ನು ಸ್ವಾಗತಿಸುವ ಅವಶ್ಯಕತೆ ಇರಲಿಲ್ಲ ಆದರೆ ಅವರು ಮಾಡಿದರು. ಅಂದು ಅವರು ಸಿಎಂ ರೀತಿಯಲ್ಲ ಬದಲಿಗೆ ಸಾಮಾನ್ಯ ವ್ಯಕ್ತಿಯ ರೀತಿ ನಡೆದುಕೊಂಡಿದ್ದರು” ಎಂದು ಶಿವರಾಜ್ ಕುಮಾರ್ ನೆನಪು ಮಾಡಿಕೊಂಡರು.

ಎನ್​ಟಿಆರ್ ಅವರಿಗೆ ಆಶೀರ್ವಾದವನ್ನು ನೀವು ಮಾಡಿದ್ದೀರಿ, ಅದೇ ರೀತಿ ಈಗಾಗಲೇ ಬಾಲಕೃಷ್ಣ ಹಾಗೂ ಚಂದ್ರಬಾಬು ನಾಯ್ಡುಗೆ ಸಹ ನೀಡಿದ್ದೀರಿ. ಈ ಆಶೀರ್ವಾದವನ್ನು ಅವರಿಗೆ ನೀಡುತ್ತಲೇ ಇರಬೇಕು, ಈ ತಲೆಮಾರು, ಈ ಕುಟುಂಬ ಹೀಗೆ ಮುಂದುವರೆಯುತ್ತಿರಬೇಕು ಎಂದರು ಶಿವರಾಜ್ ಕುಮಾರ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ