
ದಕ್ಷಿಣ ಭಾರತ ಹಾಗೂ ಬಾಲಿವುಡ್ನಲ್ಲಿ ಖ್ಯಾತಿ ಹೊಂದಿರುವ ನಟ ನಟ ಆರ್. ಮಾಧವನ್ (R Madhavan) ಅವರು ಇತ್ತೀಚಿನ ಸ್ಪೈ ಥ್ರಿಲ್ಲರ್ ‘ಧುರಂಧರ್’ ಚಿತ್ರದ ಭರ್ಜರಿ ಯಶಸ್ಸಿನ ಅಲೆಯಲ್ಲಿದ್ದಾರೆ. ಆದರೆ, ಚಾಕೊಲೇಟ್ ಬಾಯ್ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಮಾಧವನ್ ಅವರ ಸ್ಟಾರ್‌ಡಮ್ ಜರ್ನಿ ಅಷ್ಟು ಸುಲಭವಾಗಿರಲಿಲ್ಲ. ತಮ್ಮ ಆರಂಭಿಕ ದಿನಗಳಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಅವರನ್ನು ನಕಲು ಮಾಡಲು ಹೋಗಿ ಅನುಭವಿಸಿದ ಕಹಿ ನೆನಪೊಂದನ್ನು ಅವರು ಈಗ ಹಂಚಿಕೊಂಡಿದ್ದಾರೆ.
ಮಣಿ ರತ್ನಂ ನಿರ್ದೇಶನದ ‘ಅಲೈ ಪಾಯುತೇ’ ಸಿನಿಮಾ ಸೂಪರ್ ಹಿಟ್ ಆದ ನಂತರ, ಚಿತ್ರರಂಗದ ಕೆಲವರು ಮಾಧವನ್ ಅವರಿಗೆ ಒಂದು ಸಲಹೆ ನೀಡಿದ್ದರು. ‘ನೀನು ಕೇವಲ ಸಿಟಿ ಪ್ರೇಕ್ಷಕರಿಗೆ ಮಾತ್ರ ನಟನಾದರೆ ಸಾಲದು. ರಜನಿಕಾಂತ್ ಅವರಂತೆ ಸೂಪರ್ ಸ್ಟಾರ್ ಆಗಬೇಕೆಂದರೆ ಬಿ ಮತ್ತು ಸಿ ಸೆಂಟರ್ (ಹಳ್ಳಿ ಮತ್ತು ಸಣ್ಣ ಪಟ್ಟಣಗಳ) ಪ್ರೇಕ್ಷಕರನ್ನು ತಲುಪಬೇಕು. ಹಳ್ಳಿಯ ಜನ ನಿನ್ನನ್ನು ಥಲೈವಾ ಎಂದು ಕರೆಯುವಂತಹ ಸಿನಿಮಾಗಳನ್ನು ಮಾಡು’ ಎಂದು ಸಲಹೆ ನೀಡಿದ್ದರು.
ಈ ಸಲಹೆಯಿಂದ ಪ್ರಭಾವಿತರಾದ ಮಾಧವನ್, ಹಳ್ಳಿ ಜನರಿಗೆ ಕನೆಕ್ಟ್ ಆಗುವಂತಹ ಕಥೆಯೊಂದನ್ನು ಒಪ್ಪಿಕೊಂಡರು. ಆ ಸಿನಿಮಾದಲ್ಲಿ ಅವರು ಊಟಕ್ಕೂ ಕಷ್ಟಪಡುವ, ಓದದೆ ಇರುವ, ಆದರೆ ಕ್ರಿಕೆಟರ್ ಆಗಬೇಕೆಂಬ ಕನಸು ಕಾಣುವ ಬಡ ಯುವಕನ ಪಾತ್ರ ಮಾಡಿದ್ದರು. ಆದರೆ ಆ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಎಷ್ಟು ಭೀಕರವಾಗಿ ಸೋತಿತು ಎಂದರೆ, ಆ ಚಿತ್ರವನ್ನು ನಿರ್ಮಿಸಿದ ಇಡೀ ಸ್ಟುಡಿಯೋವೇ ಆರ್ಥಿಕ ನಷ್ಟದಿಂದಾಗಿ ಮುಚ್ಚಿಹೋಯಿತು!
ಈ ಸೋಲಿನ ಬಗ್ಗೆ ಮಾತನಾಡಿದ ಮಾಧವನ್, ‘ಆಗ ನನಗೆ ಒಂದು ದೊಡ್ಡ ಪಾಠ ಕಲಿತಂತಾಯಿತು. ಬೇರೆಯವರು ನೀಡುವ ಸಲಹೆಯನ್ನು ನಾವು ಕುರುಡಾಗಿ ನಂಬಬಾರದು. ಎಲ್ಲರ ಬಳಿಯೂ ಮಾಹಿತಿ ಇರುತ್ತದೆ, ಆದರೆ ಅದನ್ನು ನಾವು ಹೇಗೆ ಅರ್ಥೈಸಿಕೊಳ್ಳುತ್ತೇವೆ ಮತ್ತು ನಮ್ಮ ಸ್ವಂತ ವಿವೇಚನೆಗೆ ಹೇಗೆ ಬಳಸಿಕೊಳ್ಳುತ್ತೇವೆ ಎಂಬುದು ಮುಖ್ಯ’ ಎಂದಿದ್ದಾರೆ.
ಇದನ್ನೂ ಓದಿ: ಸಾಮಾನ್ಯ ಪ್ರೇಕ್ಷಕನಂತೆ ಥಿಯೇಟರ್‌ಗೆ ಬಂದು ‘ಧುರಂಧರ್ 2’ ನೋಡಿದ ಆರ್. ಮಾಧವನ್
‘ಅವರು ನೀಡಿದ ಸಲಹೆ ತಪ್ಪಾಗಿರಲಿಲ್ಲ, ಆದರೆ ನಾನು ಅದನ್ನು ಅರ್ಥ ಮಾಡಿಕೊಂಡ ರೀತಿ ತಪ್ಪಾಗಿತ್ತು. ರಜನಿಕಾಂತ್ ಅವರ ಸೂತ್ರವನ್ನು ಹಾಗೆಯೇ ಕಾಪಿ ಮಾಡುವ ಬದಲು, ನನ್ನದೇ ಆದ ಶೈಲಿಯಲ್ಲಿ ಬಿ ಮತ್ತು ಸಿ ಸೆಂಟರ್ ಪ್ರೇಕ್ಷಕರನ್ನು ತಲುಪಬೇಕಿತ್ತು. ಆ ಚಿತ್ರ ನನ್ನ ಪಾಲಿಗೆ ದೊಡ್ಡ ಮುಖಭಂಗದಂತಾಗಿತ್ತು. ಆದರೆ ಮುಂದಿನ ಹಾದಿಗೆ ಒಳ್ಳೆಯ ಪಾಠ ಕಲಿಸಿತು’ ಎಂದು ಮಾಧವನ್ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.