ವೆಂಕಟೇಶ್-ರಾಣಾ ನಟಿಸಿರುವ ತೆಲುಗು ವೆಬ್ ಸರಣಿ ವಿರುದ್ಧ ನಟಿ ವಿಜಯಶಾಂತಿ ಗರಂ

|

Updated on: Mar 19, 2023 | 7:57 PM

Rana-Naidu: ಸ್ಟಾರ್ ನಟರಾದ ವಿಕ್ಟರಿ ವೆಂಕಟೇಶ್ ಹಾಗೂ ರಾಣಾ ದಗ್ಗುಬಾಟಿ ನಟಿಸಿರುವ ತೆಲುಗು ವೆಬ್ ಸರಣಿ ಬಗ್ಗೆ ನಟಿ, ರಾಜಕಾರಣಿ ವಿಜಯಶಾಂತಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವೆಬ್ ಸರಣಿಯ ಹಲವು ದೃಶ್ಯಗಳನ್ನು ತೆಗೆಯಬೇಕೆಂದು ಒತ್ತಾಯಿಸಿದ್ದಾರೆ.

ವೆಂಕಟೇಶ್-ರಾಣಾ ನಟಿಸಿರುವ ತೆಲುಗು ವೆಬ್ ಸರಣಿ ವಿರುದ್ಧ ನಟಿ ವಿಜಯಶಾಂತಿ ಗರಂ
ರಾಣಾ ನಾಯ್ಡು
Follow us on

ದಕ್ಷಿಣದ ಸ್ಟಾರ್ ನಟರು ಸಹ ಇತ್ತೀಚೆಗೆ ಒಟಿಟಿಗಳೆಡೆ (OTT) ಬರುತ್ತಿದ್ದಾರೆ. ಬಾಲಿವುಡ್​ (Bollywood) ತುಸು ಮುಂಚಿತವಾಗಿಯೇ ಒಟಿಟಿ ಹಾಗೂ ವೆಬ್ ಸರಣಿಗಳ ಶಕ್ತಿ ಅರಿತು. ದಕ್ಷಿಣದ ನಟರಿಗೆ ಇತ್ತೀಚೆಗೆ ಒಟಿಟಿಗಳ ಶಕ್ತಿ ಅರವಿಗೆ ಬಂದಿದ್ದು, ನಟಿ ಸಮಂತಾ (Samantha) ವೆಬ್ ಸರಣಿಯಲ್ಲಿ ನಟಿಸಿ ಬಾಲಿವುಡ್​ನಲ್ಲಿ ಜನಪ್ರಿಯತೆ ಹೆಚ್ಚಿಸಿಕೊಂಡ ಬಳಿಕ ಇದೀಗ ತೆಲುಗು ಚಿತ್ರರಂಗದ ಸ್ಟಾರ್ ನಟರಾದ ವಿಕ್ಟರಿ ವೆಂಕಟೇಶ್ (Venkatesh) ಹಾಗೂ ರಾಣಾ ದಗ್ಗುಬಾಟಿ (Rana Daggubati) ಅವರುಗಳು ವೆಬ್ ಸರಣಿಯಲ್ಲಿ ನಟಿಸಿದ್ದಾರೆ. ಆದರೆ ತೆಲುಗಿನವರೇ ಆದ ನಟಿ, ರಾಜಕಾರಣಿ ವಿಜಯಶಾಂತಿ ಈ ವೆಬ್ ಸರಣಿ ಕುರಿತಂತೆ ತಮ್ಮ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವೆಂಕಟೇಶ್ ಹಾಗೂ ರಾಣಾ ದಗ್ಗುಬಾಟಿ ಅವರುಗಳು ‘ರಾಣಾ-ನಾಯ್ಡು’ ಹೆಸರಿನ ಥ್ರಿಲ್ಲರ್ ಡ್ರಾಮಾ ವೆಬ್ ಸರಣಿಯಲ್ಲಿ ನಟಿಸಿದ್ದು, ಈ ವೆಬ್ ಸರಣಿ ನೆಟ್​ಫ್ಲಿಕ್ಸ್​ನಲ್ಲಿ ಸ್ಟ್ರೀಮ್​ ಆಗುತ್ತಿದೆ. ಸೆಲೆಬ್ರಿಟಿಗಳಿಗೆ ಸಂಕಷ್ಟ ಬಂದಾಗ ಅವರನ್ನು ಬಚಾವ್ ಮಾಡಿ ಫೀಸು ವಸೂಲಿ ಮಾಡುವ ಪಾತ್ರದಲ್ಲಿ ರಾಣಾ ನಟಿಸಿದ್ದರೆ ಅವರ ತಂದೆಯ ಪಾತ್ರದಲ್ಲಿ ವೆಂಕಟೇಶ್ ನಟಿಸಿದ್ದಾರೆ. ವೆಬ್​ಸರಣಿ ಬಗ್ಗೆ ಒಳ್ಳೆಯ ಮಾತುಗಳೇ ಕೇಳಿ ಬಂದಿವೆ. ಜೊತೆಗೆ ವೆಬ್ ಸರಣಿಯಲ್ಲಿನ ಲೈಂಗಿಕ ದೃಶ್ಯಗಳು, ಅವಾಚ್ಯ ಭಾಷೆಯ ಬಳಕೆ, ಹಿಂಸೆ ಅದರಲ್ಲೂ ಮಹಿಳೆಯರ ಮೇಲಿನ ಹಿಂಸಾಚಾರದ ಬಗ್ಗೆ ಆಕ್ಷೇಪವೂ ಕೇಳಿ ಬರುತ್ತಿದೆ.

ಇದೀಗ ನಟಿ ಹಾಗೂ ರಾಜಕಾರಣಿಯೂ ಆಗಿರುವ ವಿಜಯಶಾಂತಿ ‘ರಾಣಾ-ನಾಯ್ಡು’ ವೆಬ್ ಸರಣಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು, ವೆಬ್ ಸರಣಿಯಲ್ಲಿ ಬಳಸಿರುವ ಭಾಷೆ ಹಾಗೂ ಲೈಂಗಿಕ ದೃಶ್ಯಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಲ್ಲದೆ, ಒಟಿಟಿ ಫ್ಲಾಪ್​ಫಾರ್ಮ್​ಗಳಲ್ಲಿ ಪ್ರಸಾರವಾಗುವ ಕಂಟೆಂಟ್​ಗಳಿಗೆ ಕಠಿಣವಾದ ಸೆನ್ಸಾರ್ ಅವಶ್ಯಕತೆ ಇದೆ ಎಂದಿದ್ದಾರೆ.

”ಇತ್ತೀಚೆಗೆ ತೆಲುಗಿನ (ಬಹುಭಾಷಾ) ವೆಬ್ ಸರಣಿಯೊಂದು ಒಟಿಟಿಯಲ್ಲಿ ಬಿಡುಗಡೆ ಆಗಿದೆ. ಆ ವೆಬ್ ಸರಣಿಗೆ ಕಠಿಣವಾದ ಸೆನ್ಸಾರ್ ಮಾಡುವ ಅಗತ್ಯವಿದೆ. ಸಾಕಷ್ಟು ಜನ ಅದರಲ್ಲೂ ಮಹಿಳೆಯರು ಈ ಬಗ್ಗೆ ಒತ್ತಾಯ ಮಾಡುತ್ತಿದ್ದಾರೆ” ಎಂದಿದ್ದಾರೆ.

ಮುಂದುವರೆದು, ”ತೀವ್ರವಾದ ಸ್ತ್ರೀದ್ವೇಷದ ದೃಶ್ಯಗಳನ್ನು, ಇತರೆ ಸದಭಿರುಚಿಯಲ್ಲದ ದೃಶ್ಯಗಳನ್ನು ಸಂಬಂಧಪಟ್ಟ ನಟ ಮತ್ತು ನಿರ್ಮಾಪಕರು ತೆಗೆಯಬೇಕು. ಮಾತ್ರವಲ್ಲದೆ ರಾಷ್ಟ್ರವ್ಯಾಪಿ ಇತರೆ ಒಟಿಟಿಗಳಲ್ಲಿರುವ ಇಂಥಹಾ ಕಂಟೆಂಟ್ ಅನ್ನು ಸಹ ತೆಗೆಯಬೇಕು, ವಿಶೇಷವಾಗಿ ಸ್ತ್ರೀದ್ವೇಷಿ ಹಾಗೂ ಸಂಸ್ಕೃತಿ ವಿರೋಧಿ ಕಂಟೆಂಟ್ ಅನ್ನು ತೆಗೆದುಹಾಕಬೇಕು. ಭವಿಷ್ಯದಲ್ಲಿಯೂ ಈ ರೀತಿಯ ಕಂಟೆಂಟ್ ಒಟಿಟಿಗಳಲ್ಲಿ ಬಾರದಂತೆ ಕ್ರಮ ಕೈಗೊಳ್ಳಬೇಕು ಎಂದು ಆಶಿಸುತ್ತೇನೆ. ಜನರು ಆ ನಟರಿಗೆ ನೀಡಿರುವ ಪ್ರೀತಿ ಮತ್ತು ಗೌರವವನ್ನು ಉಳಿಸಿಕೊಳ್ಳಬೇಕೆಂದು ನಾನು ಬಯಸುತ್ತೇನೆ” ಎಂದಿದ್ದಾರೆ. ಜೊತೆಗೆ ವೆಬ್ ಸರಣಿಯಲ್ಲಿ ನಟಿಸಿರುವ ಸ್ಟಾರ್ ನಟ ವೆಂಕಟೇಶ್​ಗೆ ಟಾಂಗ್​ ನೀಡಿರುವ ವಿಜಯಶಾಂತಿ, ವಿಕ್ಟರಿ ಪೀಸ್ ಎಂದು ಸಹ ಬರೆದುಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 7:56 pm, Sun, 19 March 23