ಅಕ್ಷಯ್ ಕುಮಾರ್ (Akshay Kumar) ಅವರ ಸಂಕಷ್ಟಗಳು ಮುಗಿಯುತ್ತಲೇ ಇಲ್ಲ. ಅಕ್ಷಯ್ರ ಸಿನಿಮಾಗಳು ಸತತವಾಗಿ ಸೋಲುತ್ತಿರುವ ಬೆನ್ನಲ್ಲೆ ಅವರ ಇತ್ತೀಚೆಗಿನ ಸಿನಿಮಾ ‘ಓಎಂಜಿ 2’ ಗೆ ಸೆನ್ಸಾರ್ ಸಮಸ್ಯೆ ಬಂದೊದಗಿತ್ತು. ಸಿನಿಮಾದ ಹಲವು ದೃಶ್ಯಗಳಿಗೆ, ಸಂಭಾಷಣೆಗಳಿಗೆ ಸಿಬಿಎಫ್ಸಿಯು ಕತ್ತರಿ ಹಾಕಿತಲ್ಲದೆ ಅದೆಲ್ಲದರ ಬಳಿಕವೂ ಸಿನಿಮಾಕ್ಕೆ ಎ ಪ್ರಮಾಣ ಪತ್ರ ನೀಡಿತು. ಇದು ಅಕ್ಷಯ್ ಕುಮಾರ್ ಸೇರಿದಂತೆ ಚಿತ್ರತಂಡವನ್ನು ಕೆರಳಿಸಿತ್ತು. ಹಾಗಿದ್ದರೂ ಸಹ ಹೆಚ್ಚೇನೂ ಪ್ರತಿಕ್ರಿಯಿಸದೆ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಯ್ತು. ಇದೀಗ ಸಿನಿಮಾದ ಒಟಿಟಿ ಬಿಡುಗಡೆಗೂ ಸಮಸ್ಯೆ ಎದುರಾಗಿದೆ.
‘ಓಎಂಜಿ 2‘ ಸಿನಿಮಾ ಅಕ್ಟೋಬರ್ ಎಂಟರಂದು ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಆಗಲಿಕ್ಕಿತ್ತು. ಈ ಬಗ್ಗೆ ಪ್ರಚಾರವೂ ಮಾಡಲಾಗಿತ್ತು, ಸ್ವತಃ ಅಕ್ಷಯ್ ಕುಮಾರ್ ವಿಶೇಷ ವಿಡಿಯೋ ಮಾಡಿ ನೆಟ್ಫ್ಲಿಕ್ಸ್ ಒಟಿಟಿಯಲ್ಲಿ ತಮ್ಮ ಸಿನಿಮಾ ನೋಡುವಂತೆ ಮನವಿ ಮಾಡಿದ್ದರು. ಆದರೆ ಇದೀಗ ಸಿನಿಮಾದ ಬಿಡುಗಡೆಯನ್ನು ಮುಂದೂಡಲಾಗಿದೆ. ‘ಓಎಂಜಿ 2‘ ಸಿನಿಮಾದ ಒಟಿಟಿ ಆವೃತ್ತಿಗೂ ಕತ್ತರಿ ಪ್ರಯೋಗ ಮಾಡಲಾಗುತ್ತಿದೆ. ಬರೋಬ್ಬರಿ 27 ಕಟ್ಗಳೊಂದಿಗೆ ಸಿನಿಮಾವನ್ನು ಒಟಿಟಿಗೆ ಬಿಡುಗಡೆ ಮಾಡಲಾಗುತ್ತಿದೆ. ಇದೇ ಕಾರಣಕ್ಕೆ ಸಿನಿಮಾದ ಬಿಡುಗಡೆಯನ್ನು ಮುಂದೂಡಲಾಗಿದೆ.
ಇದನ್ನೂ ಓದಿ:ಹೊಸ ಸಿನಿಮಾ ಘೋಷಿಸಿದ ಅಕ್ಷಯ್ ಕುಮಾರ್; ‘ವೆಲ್ಕಮ್ 3’ ಚಿತ್ರದಲ್ಲಿ ಸ್ಟಾರ್ಸ್ ದಂಡು
ತಮ್ಮ ಸಿನಿಮಾದ ಒಟಿಟಿ ಬಿಡುಗಡೆಗೆ ಸಮಸ್ಯೆ ಆಗಿರುವ ಬಗ್ಗೆ ಮಾತನಾಡಿರುವ ನಟ ಅಕ್ಷಯ್ ಕುಮಾರ್, ”ನನಗೆ ಜಗಳ ಅಥವಾ ಹೋರಾಟ ಮಾಡಲು ಇಷ್ಟವಿಲ್ಲ. ನಿಯಮಗಳ ಬಗ್ಗೆ ನನಗೆ ಅರಿವಿಲ್ಲ, ನಿಯಮದ ಪುಸ್ತಕವನ್ನು ನಾನೆಂದೂ ಓದಿಲ್ಲ. ಇದು ವಯಸ್ಕರ ಸಿನಿಮಾ ಎಂದು ಅವರಿಗೆ ಅನ್ನಿಸಿದ್ದರೆ ನಾವು ಏನೂ ಮಾಡಲು ಸಾಧ್ಯವಿಲ್ಲ. ನಾವು ಹಲವರಿಗೆ ಸಿನಿಮಾ ತೋರಿಸಿದ್ದೇವೆ ಎಲ್ಲರಿಗೂ ಸಿನಿಮಾ ಇಷ್ಟವಾಗಿದೆ. ಈ ಸಿನಿಮಾವನ್ನು ನಾವು ಯುವ ಜನರಿಗಾಗಿ ಮಾಡಿದ್ದೆವು. ಈಗ ಈ ಸಿನಿಮಾ ಒಟಿಟಿಗೆ ಬರುತ್ತಿದೆ ಆ ಬಗ್ಗೆ ನನಗೆ ಖುಷಿ ಇದೆ” ಎಂದಿದ್ದಾರೆ.
‘ಓಎಂಜಿ 2’ ಸಿನಿಮಾವು ಲೈಂಗಿಕ ಶಿಕ್ಷಣದ ಅವಶ್ಯಕತೆ ಬಗೆಗಿನ ವಿಷಯವನ್ನು ಹೊಂದಿರುವ ಸಿನಿಮಾ ಆಗಿದೆ. ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಶಿವಗಣದ ಸದಸ್ಯನ ಪಾತ್ರದಲ್ಲಿ ನಟಿಸಿದ್ದಾರೆ. ನಟ ಪಂಕಜ್ ತ್ರಿಪಾಠಿ ಶಿವನ ಭಕ್ತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಯಾಮಿ ಗುಪ್ತಾ, ಪಂಕಜ್ ಮಲ್ಹೋತ್ರಾ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾವನ್ನು ಅಮಿತ್ ರಾಯ್ ನಿರ್ದೇಶನ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:50 pm, Fri, 6 October 23