1500 ರೂಪಾಯಿ ಪಾವತಿಸಿದರೂ ಸಾಲು ಸಾಲು ಜಾಹೀರಾತು; ಸುಸ್ತಾದ ಪ್ರೈಮ್​ ಚಂದಾದಾರರು

Amazon Prime Video: ಸಾಮಾನ್ಯವಾಗಿ ಮೆಂಬರ್​ಶಿಪ್ ಪಡೆದ ನಂತರ ಅಲ್ಲಿ ಯಾವುದೇ ಜಾಹೀರಾತು ಹಾಕುವುದಿಲ್ಲ. ಅಮೇಜಾನ್ ಪ್ರೈಮ್ ವಿಡಿಯೋದವರು ಮೊದಲು ಇದೇ ರೀತಿಯಲ್ಲಿ ಇದ್ದರು. ಆದರೆ, ಈಗ ಅವರು ಬದಲಾಗಿದ್ದಾರೆ. 1499 ರೂಪಾಯಿ ಕೊಟ್ಟು ವರ್ಷದ ಚಂದಾದಾರರಾದವರು ಜಾಹೀರಾತು ನೋಡಬೇಕಾದ ಅನಿವಾರ್ಯತೆ ಎದುರಾಗಿದೆ.

1500 ರೂಪಾಯಿ ಪಾವತಿಸಿದರೂ ಸಾಲು ಸಾಲು ಜಾಹೀರಾತು; ಸುಸ್ತಾದ ಪ್ರೈಮ್​ ಚಂದಾದಾರರು
ಪ್ರೈಮ್ ವಿಡಿಯೋ

Updated on: Nov 25, 2025 | 10:53 AM

ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಇತ್ತೀಚೆಗೆ ‘ದಿ ಫ್ಯಾಮಿಲಿ ಮ್ಯಾನ್’ (Family Man 3) ಸರಣಿಯ ಮೂರನೇ ಸೀಸನ್ ಪ್ರಸಾರ ಆರಂಭಿಸಿದೆ. ಈ ಸರಣಿ ನೋಡುವ ಪ್ರೇಕ್ಷಕ ಸುಸ್ತಾಗಿ ಹೋಗಿದ್ದಾನೆ. ಜಾಹೀರಾತೊಳಗೆ ವೆಬ್ ಸೀರಿಸ್ ಅಥವಾ ವೆಬ್ ಸೀರಿಸ್ ಒಳಗೆ ಜಾಹೀರಾತೋ ಎಂಬಂತಾಗಿದೆ. ಒಂದು ಗಂಟೆಯ ಎಪಿಸೋಡ್​ಗೆ ಬರೋಬ್ಬರಿ ನಾಲ್ಕರಿಂದ ಐದು ಜಾಹೀರಾತು ನೋಡಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದೆ. ಇದಕ್ಕೆ ಅಮೇಜಾನ್ ಪ್ರೈಮ್ ಚಂದಾದಾರರು ಆಕ್ರೋಶ ಹೊರಹಾಕಿದ್ದಾರೆ.

ಸಾಮಾನ್ಯವಾಗಿ ಮೆಂಬರ್​ಶಿಪ್ ಪಡೆದ ನಂತರ ಅಲ್ಲಿ ಯಾವುದೇ ಜಾಹೀರಾತು ಹಾಕುವುದಿಲ್ಲ. ಅಮೇಜಾನ್ ಪ್ರೈಮ್ ವಿಡಿಯೋದವರು ಮೊದಲು ಇದೇ ರೀತಿಯಲ್ಲಿ ಇದ್ದರು. ಆದರೆ, ಈಗ ಅವರು ಬದಲಾಗಿದ್ದಾರೆ. 1499 ರೂಪಾಯಿ ಕೊಟ್ಟು ವರ್ಷದ ಚಂದಾದಾರರಾದವರು ಜಾಹೀರಾತು ನೋಡಬೇಕಾದ ಅನಿವಾರ್ಯತೆ ಎದುರಾಗಿದೆ. ಇದರಿಂದ ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದೆ. ಇನ್ನು, ಮೆಂಬರ್​ಶಿಪ್ ಹೊಂದಿದ್ದರೂ ಕೆಲವು ಸಿನಿಮಾಗಳನ್ನು ರೆಂಟ್​ಗೆ ನೋಡಬೇಕಾದ ಪರಿಸ್ಥಿತಿ ಇದೆ.

ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಿವೆ. ‘ಅಮೇಜಾನ್ ಪ್ರೈಮ್ ವಿಡಿಯೋದವರು ಭಾರತದಲ್ಲಿ ತಮ್ಮ ಗುಂಡಿಯನ್ನು ತಾವೇ ತೋಡಿಕೊಳ್ಳುತ್ತಿದ್ದಾರೆ’ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು ‘1500 ರೂಪಾಯಿ ಕೊಟ್ಟ ಮೇಲೂ ಜಾಹೀರಾತು ನೋಡಬೇಕು ಎಂದರೆ ಅರ್ಥವೇನು? ಇದರ ಬದಲು ಪೈರಸಿ ಕಾಪಿ ನೋಡಿದರೆ ಉತ್ತಮ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ‘ಹೇಗಿದೆ ಫ್ಯಾಮಿಲಿ ಮ್ಯಾನ್ 3’; ಮನೋಜ್ ನಟನೆಯ ಸೀರಿಸ್ ನೋಡಿದವರು ಹೇಳಿದ್ದಿಷ್ಟು

ಅಮೇಜಾನ್ ಪ್ರೈಮ್ ವಿಡಿಯೋ ಪ್ರೈಮ್ ಮೆಂಬರ್​ಶಿಪ್ ಪಡೆಯಲು ಈಗ ನೀವು 1499 ರೂಪಾಯಿ ಮಾತ್ರ ಪಾವತಿಸಿದರೆ ಸಾಲುವುದಿಲ್ಲ. ಹೆಚ್ಚುವರಿಯಾಗಿ 699 ರೂಪಾಯಿ ಪಾವತಿಸಬೇಕು. ಅಂದರೆ ಮಾತ್ರ ಜಾಹೀರಾತು ರಹಿತವಾಗಿ ಸಿನಿಮಾ/ಸರಣಿ ಪ್ರಸಾರ ಕಾಣಿಸುತ್ತದೆ. ಇದು ಸಿನಿಮಾ ನೋಡುವ ಅನುಭವ ಕೊಲ್ಲುತ್ತಿದೆ ಎಂದು ಅನೇಕರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.