ಭಾರತೀಯ ಸಿನಿಮಾ ಇತಿಹಾಸದಲ್ಲಿ ಸಲೀಂ ಮತ್ತು ಜಾವೇದ್ ಅವರ ಕೊಡುಗೆ ದೊಡ್ಡದು. ಚಿತ್ರಕಥೆ, ಸಂಭಾಷಣೆ ಮೂಲಕ ಹಲವಾರು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ಖ್ಯಾತಿ ಈ ದಿಗ್ಗಜರದ್ದು. ಜೊತೆಯಾಗಿ 24 ಸಿನಿಮಾಗಳನ್ನು ಅವರಿಬ್ಬರು ಮಾಡಿದರು. ಆ ಪೈಕಿ 20 ಸಿನಿಮಾಗಳು ಬ್ಲಾಕ್ ಬಸ್ಟರ್ ಆದವು. ತೆರೆ ಹಿಂದೆ ಇದ್ದುಕೊಂಡು ಸ್ಟಾರ್ ಪಟ್ಟ ಪಡೆದ ಹೆಗ್ಗಳಿಕೆ ಈ ಬರಹಗಾರರದ್ದು. ಈಗ ಸಲೀಂ ಮತ್ತು ಜಾವೇದ್ ಬಗ್ಗೆ ಹೊಸ ಸಾಕ್ಷ್ಯಚಿತ್ರ ಸಿದ್ಧವಾಗಿದೆ. ಇದರಲ್ಲಿ ಕನ್ನಡದ ಹೆಮ್ಮೆಯ ನಟ ಯಶ್ ಕೂಡ ಕಾಣಿಸಿಕೊಂಡಿದ್ದಾರೆ ಎಂಬುದು ವಿಶೇಷ.
ಸಲೀಂ-ಜಾವೇದ್ ಜೋಡಿಯ ಬಗ್ಗೆ ಮೂಡಿಬಂದಿರುವ ಈ ಡಾಕ್ಯುಮೆಂಟರಿಗೆ ‘ಆ್ಯಂಗ್ರಿ ಯಂಗ್ ಮೆನ್’ ಎಂದು ಹೆಸರು ಇಡಲಾಗಿದೆ. ಇದರಲ್ಲಿ ಸಲ್ಮಾನ್ ಖಾನ್, ಫರ್ಹಾನ್ ಅಖ್ತರ್, ಅಮಿತಾಭ್ ಬಚ್ಚನ್, ಕರಣ್ ಜೋಹರ್, ಆಮಿರ್ ಖಾನ್ ಮುಂತಾದ ಘಟಾನುಘಟಿ ಸೆಲೆಬ್ರಿಟಿಗಳ ಸಂದರ್ಶನ ಇದೆ. ಇವರ ಜೊತೆ ಯಶ್ ಕೂಡ ಸಂದರ್ಶನ ನೀಡಿದ್ದಾರೆ. ಇಂಥ ಸ್ಟಾರ್ ಕಲಾವಿದರ ನಡುವೆ ಯಶ್ ಅವರು ಸ್ಥಾನ ಪಡೆದಿರುವುದು ಅವರ ಅಭಿಮಾನಿಗಳಿಗೆ ಹೆಮ್ಮೆ ತಂದಿದೆ.
ಇದನ್ನೂ ಓದಿ: ‘ಟಾಕ್ಸಿಕ್’ ಸಿನಿಮಾ ಮುಹೂರ್ತದಲ್ಲಿ ಹೇಗಿತ್ತು ಯಶ್ ಗತ್ತು? ವಿಡಿಯೋ ನೋಡಿ..
ಯಶ್ ಅವರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಛಾಪು ಮೂಡಿಸಿದ್ದಾರೆ. ಹಿಂದಿ ಸಿನಿಮಾ ಪ್ರೇಕ್ಷಕರು ಯಶ್ಗೆ ಅಭಿಮಾನಿಗಳಾಗಿದ್ದಾರೆ. ಬಾಲಿವುಡ್ ದಿಗ್ಗಜರಾದ ಸಲೀಂ ಮತ್ತು ಜಾವೇದ್ ಬಗ್ಗೆ ಯಶ್ ಅವರು ತಮ್ಮ ಅನಿಸಿಕೆಗಳನ್ನು ‘ಆ್ಯಂಗ್ರಿ ಯಂಗ್ ಮೆನ್’ ಸಾಕ್ಷ್ಯಚಿತ್ರದಲ್ಲಿ ಹೇಳಿಕೊಂಡಿದ್ದಾರೆ. ಇದರ ಟ್ರೇಲರ್ ಬಿಡುಗಡೆ ಆಗಿದೆ. ಅಮೇಜಾನ್ ಪ್ರೈಂ ವಿಡಿಯೋ ಮೂಲಕ ಆಗಸ್ಟ್ 20ರಂದು ಈ ಡಾಕ್ಯುಮೆಂಟರಿ ಬಿಡುಗಡೆ ಆಗಲಿದೆ.
ಸಲೀಂ ಖಾನ್ ಮತ್ತು ಜಾವೇದ್ ಅಖ್ತರ್ ಅವರು ಜೊತೆಯಾಗಿ ‘ದೀವಾರ್’, ‘ಶೋಲೆ’, ‘ಡಾನ್’, ‘ಮಿಸ್ಟರ್ ಇಂಡಿಯಾ’, ‘ಝಂಜೀರ್’ ಮುಂತಾದ ಸಿನಿಮಾಗಳನ್ನು ನೀಡಿದ್ದಾರೆ. ಒಂದು ಹಂತದ ನಂತರ ಅವರಿಬ್ಬರು ಜೊತೆಯಾಗಿ ಕೆಲಸ ಮಾಡುವುದನ್ನು ನಿಲ್ಲಿಸಿದರು. ಆಗ ಇಡೀ ಬಾಲಿವುಡ್ಗೆ ಶಾಕ್ ಆಗಿತ್ತು. ಆ ರೀತಿಯ ಹಲವು ಇಂಟರೆಸ್ಟಿಂಗ್ ಘಟನೆಗಳು ‘ಆ್ಯಂಗ್ರಿ ಯಂಗ್ ಮೆನ್’ ಡಾಕ್ಯುಮೆಂಟರಿಯಲ್ಲಿ ಇವೆ ಎಂಬುದನ್ನು ಟ್ರೇಲರ್ನಲ್ಲಿ ತೋರಿಸಲಾಗಿದೆ. ‘ನಾನು ಸಂದರ್ಶನ ನೀಡುವಾಗ ಇದೇ ಮೊದಲ ಬಾರಿಗೆ ನರ್ವಸ್ ಆಗುತ್ತಿದ್ದೇನೆ’ ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ. ತಂದೆ (ಸಲೀಂ ಖಾನ್) ಬಗ್ಗೆ ಅವರು ಮನಸಾರೆ ಮಾತನಾಡಿದ್ದಾರೆ. ಹಾಗಾಗಿ ಈ ಸಾಕ್ಷ್ಯಚಿತ್ರ ನಿರೀಕ್ಷೆ ಮೂಡಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.