‘ಬಿಗ್ ಬಾಸ್ ಒಟಿಟಿ’ಯಲ್ಲಿ (Bigg Boss OTT) ಮೊದಲ ವಾರ ಪೂರ್ಣಗೊಳ್ಳುತ್ತಾ ಬಂದಿದೆ. ಎಲ್ಲಾ ಸ್ಪರ್ಧಿಗಳು ಹಾಯಾಗಿ ಸಮಯ ಕಳೆಯುತ್ತಿದ್ದಾರೆ. ವಾರಾಂತ್ಯಕ್ಕೆ ಎಲಿಮಿನೇಷನ್ ನಡೆಯಲಿದ್ದು, ಮನೆಯಿಂದ ಒಬ್ಬರು ಹೊರ ಹೋಗುವುದು ಖಚಿತ. ಹಲವರ ತಲೆಯಮೇಲೆ ಎಲಿಮಿನೇಷನ್ ತೂಗುಗತ್ತಿ ಇದೆ. ಈ ಮಧ್ಯೆ ಬಿಗ್ ಬಾಸ್ನಲ್ಲಿ ಮೂರು ಪ್ರಮುಖ ಬೆಳವಣಿಗೆಗಳು ನಡೆದಿವೆ. ಅರ್ಜುನ್ ರಮೇಶ್, ರಾಕೇಶ್ ಅಡಿಗ ಅವರಿಗೆ ಪ್ರಮೋಷನ್ ಸಿಕ್ಕರೆ ಅಕ್ಷತಾಗೆ ಡಿಮೋಷನ್ ಸಿಕ್ಕಿದೆ. ಇದರಿಂದ ಅಕ್ಷತಾ ಜೈಲು ಸೇರಿದ್ದಾರೆ. ವೀಕ್ಷಕರು ವೋಟಿಗ್ ಮಾಡೋಕೆ ಈ ಬೆಳವಣಿಗೆ ತುಂಬಾನೇ ಮುಖ್ಯವಾಗಲಿದೆ.
‘ಬಿಗ್ ಬಾಸ್’ ಮನೆಗೆ ಸೇರಿದ ನಂತರದಲ್ಲಿ ಯಾರು ಹೇಗೆ ಪರ್ಫಾರ್ಮೆನ್ಸ್ ನೀಡುತ್ತಾರೆ ಅನ್ನೋದು ತುಂಬಾನೇ ಮುಖ್ಯವಾಗುತ್ತದೆ. ಕೊಂಚ ಡಲ್ ಆದರೂ ಜನರಿಂದ ವೋಟ್ ಬೀಳುವುದಿಲ್ಲ. ಈ ಬಾರಿ ಅಕ್ಷತಾ ಅವರು ಎಲ್ಲರ ಜತೆ ಬೆರೆತಿಲ್ಲ. ಹೀಗಾಗಿ, ಮನೆಯವರಿಂದ ಅವರಿಗೆ ಬೆಂಬಲ ಸಿಕ್ಕಿಲ್ಲ.
ಕ್ಯಾಪ್ಟನ್ ಆದ ಅರ್ಜುನ್
ಮೊದಲ ವಾರದಲ್ಲಿ ಕ್ಯಾಪ್ಟನ್ಸಿ ಟಾಸ್ಕ್ ಇತ್ತು. ಅರ್ಜುನ್ ರಮೇಶ್, ಸೋಮಣ್ಣ ಮಾಚಿಮಾಡ, ಚೈತ್ರಾ ಹಳ್ಳಿಕೇರಿ ಹಾಗೂ ನಂದು ಕ್ಯಾಪ್ಟನ್ಸಿ ಟಾಸ್ಕ್ನಲ್ಲಿದ್ದರು. ಅತಿ ಹೆಚ್ಚು ಅಂಕ ಪಡೆದು ಅರ್ಜುನ್ ಅವರು ಕ್ಯಾಪ್ಟನ್ ಆದರು. ಈ ಮೂಲಕ ‘ಬಿಗ್ ಬಾಸ್ ಒಟಿಟಿ’ಯ ಮೊದಲ ಸೀಸನ್ನ ಮೊದಲ ಕ್ಯಾಪ್ಟನ್ ಎಂಬ ಹೆಗ್ಗಳಿಕೆಗೆ ಅರ್ಜುನ್ ಭಾಜನರಾದರು. ಅವರಿಗೆ ನಿದ್ರಿಸೋಕೆ ಈಗ ಕ್ಯಾಪ್ಟನ್ ರೂಂ ಸಿಕ್ಕಿದೆ.
ರಾಕೇಶ್ ಅತ್ಯುತ್ತಮ
ವೀಕೆಂಡ್ಗೂ ಮುನ್ನ ಒಳ್ಳೆಯ ಪರ್ಫಾರ್ಮೆನ್ಸ್ ನೀಡಿದವರು ಯಾರು ಎಂಬುದನ್ನು ಆಯ್ಕೆ ಮಾಡಬೇಕಾಗುತ್ತದೆ. ಈ ಆಯ್ಕೆಯಲ್ಲಿ ರಾಕೇಶ್ಗೆ ಅತಿ ಹೆಚ್ಚು ವೋಟ್ ಸಿಕ್ಕಿದೆ. ರಾಕೇಶ್ ಅವರು ಎಲ್ಲರ ಜತೆಗೂ ಬೆರೆತಿದ್ದಾರೆ. ತೊಂದರೆ ಆದಾಗ ಮಧ್ಯಸ್ಥಿಕೆ ವಹಿಸಿದ್ದಾರೆ. ತಂಡವನ್ನು ಅದ್ಭುತವಾಗಿ ಮನ್ನಡೆಸಿದ್ದಾರೆ. ಈ ಕಾರಣದಿಂದ ಅವರು ‘ಅತ್ಯುತ್ತಮ’ ಎಂಬ ಪಟ್ಟ ಗಳಿಸಿಕೊಂಡಿದ್ದಾರೆ.
ಅಕ್ಷತಾ ಕಳಪೆ
ಅತ್ಯುತ್ತಮದ ಜತೆಗೆ ಕಳಪೆ ಪಟ್ಟವನ್ನೂ ಬಿಗ್ ಬಾಸ್ ಮನೆಯಲ್ಲಿ ನೀಡಲಾಗುತ್ತದೆ. ಅಕ್ಷತಾ ಅವರಿಗೆ ‘ಕಳಪೆ’ ಪಟ್ಟ ನೀಡಲಾಯಿತು. ಈ ಕಾರಣಕ್ಕೆ ಅವರು ಜೈಲು ಸೇರಿದ್ದಾರೆ. ಒಂದು ದಿನ ಅವರು ಜೈಲಲ್ಲೇ ಕಳೆಯಬೇಕಾಗುತ್ತದೆ.