‘ತಂಗಲಾನ್’ ಸಿನಿಮಾ ಮೇಲಿನ ನಿಷೆಧ ತೆರವು, ಒಟಿಟಿ ಬಿಡುಗಡೆಗೆ ತೆರೆದ ದಾರಿ
‘ತಂಗಲಾನ್’ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಹಿಟ್ ಎನಿಸಿಕೊಂಡಿದೆ. ಆದರೆ ಸಿನಿಮಾದ ವಿರುದ್ಧ ಪ್ರಕರಣ ದಾಖಲಾದ ಕಾರಣ ಒಟಿಟಿಗೆ ಬಿಡುಗಡೆ ಆಗಿರಲಿಲ್ಲ. ಈಗ ಸಿನಿಮಾದ ಮೇಲೆ ಹೇರಲಾಗಿದ್ದ ತಾತ್ಕಾಲಿಕ ನಿಷೇಧವನ್ನು ತೆರವು ಮಾಡಲಾಗಿದೆ.
ಚಿಯಾನ್ ವಿಕ್ರಂ ನಟಿಸಿ, ಪಾ ರಂಜಿತ್ ನಿರ್ದೇಶನ ಮಾಡಿರುವ ‘ತಂಗಲಾನ್’ ಸಿನಿಮಾ ಆಗಸ್ಟ್ 15 ರಂದು ಚಿತ್ರಮಂದಿರದಲ್ಲಿ ಬಿಡುಗಡೆ ಆಗಿ ಹಿಟ್ ಎನಿಸಿಕೊಂಡಿತ್ತು. ಕೋಲಾರದ ಚಿನ್ನದ ಗಣಿಯ ಕತೆ ಒಳಗೊಂಡಿದ್ದ ‘ತಂಗಲಾನ್’ ಸಿನಿಮಾವನ್ನು ತಮಿಳಿನ ‘ಕೆಜಿಎಫ್’ ಎಂದೇ ಪ್ರಚಾರ ಮಾಡಲಾಗಿತ್ತು. ಸಿನಿಮಾವು ಚಿನ್ನದ ಗಣಿಯ ಆರಂಭದ ದಿನಗಳ ಕತೆಯನ್ನು ಒಳಗೊಂಡಿತ್ತು. ಬುಡಕಟ್ಟು ಜನಾಂಗ, ಅವರ ನಂಬಿಕೆ, ಜೀವನ, ಬ್ರಿಟೀಷರು ಚಿನ್ನದ ಗಣಿ ಅರಸಿ ಬರುವುದು ಇನ್ನತರೆ ವಿಷಯಗಳನ್ನು ಸಿನಿಮಾ ಒಳಗೊಂಡಿತ್ತು. ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿ ಹಿಟ್ ಆದ ಬಳಿಕ ಸಿನಿಮಾದ ಮೇಲೆ ದೂರು ದಾಖಲಿಸಲಾಗಿತ್ತು. ಸಿನಿಮಾ ಒಟಿಟಿ ಬಿಡುಗಡೆಗೆ ಮದ್ರಾಸ್ ಹೈಕೋರ್ಟ್ ತಡೆ ನೀಡಿತ್ತು, ಈಗ ಆ ತಡೆಯನ್ನು ತೆರವು ಮಾಡಲಾಗಿದೆ.
ಸಿನಿಮಾದಲ್ಲಿ ವೈಷ್ಣವರಿಗೆ ಅಪಮಾನ ಮಾಡಲಾಗಿದೆ. ವೈಷ್ಣವ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡುವ ದೃಶ್ಯಗಳು ಸಿನಿಮಾದಲ್ಲಿ ಇವೆಯಾದ್ದರಿಂದ ಸಿನಿಮಾದ ಮೇಲೆ ನಿಷೇಧ ಹೇರಬೇಕು ಎಂದು ತಿರುವಳ್ಳಾವೂರ್ನ ವ್ಯಕ್ತಿಯೊಬ್ಬರು ಮದ್ರಾಸ್ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿದ್ದರು. ಅರ್ಜಿಯನ್ನು ಪರಿಗಣಿಸಿದ್ದ ನ್ಯಾಯಾಲಯವು ‘ತಂಗಲಾನ್’ ಸಿನಿಮಾ ಮೇಲೆ ತಾತ್ಕಾಲಿಕ ನಿಷೇಧ ಹೇರಿತ್ತು, ಇದೇ ಕಾರಣದಿಂದ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆಗಿರಲಿಲ್ಲ.
ಕೆಲ ದಿನಗಳ ಹಿಂದೆ ಅರ್ಜಿಯ ವಿಚಾರಣೆ ನಡೆದು, ‘ತಂಗಲಾನ್’ ಸಿನಿಮಾಕ್ಕೆ ಸಿಬಿಎಫ್ಸಿ ಈಗಾಗಲೇ ಪ್ರಮಾಣ ಪತ್ರ ನೀಡಿದೆಯಾದ್ದರಿಂದ ಸಿನಿಮಾದ ಮೇಲೆ ನಿಷೇಧ ಹೇರುವಂತಿಲ್ಲ ಎಂದು ನಿರ್ಣಯಿಸಿ, ಹೇರಲಾಗಿದ್ದ ತಾತ್ಕಾಲಿಕ ನಿಷೇಧವನ್ನು ತೆರವು ಮಾಡಲಾಗಿದೆ. ಸಿನಿಮಾದ ಡಿಜಿಟಲ್ ಹಕ್ಕನ್ನು ನೆಟ್ಫ್ಲಿಕ್ಸ್ ಖರೀದಿ ಮಾಡಿದ್ದು, ಸಿನಿಮಾ ದೀಪಾವಳಿಗೆ ನೆಟ್ಫ್ಲಿಕ್ಸ್ನಲ್ಲಿ ತೆರೆಗೆ ಬರಲಿದೆ.
ಇದನ್ನೂ ಓದಿ:‘ತಂಗಲಾನ್’ ಚಿತ್ರಕ್ಕೆ ಮೊದಲ ಆಫರ್ ಹೋಗಿದ್ದು ಕನ್ನಡದ ಈ ನಟಿಗೆ
ಸಿನಿಮಾದ ದೃಶ್ಯವೊಂದರಲ್ಲಿ ಬುದ್ಧ ಹಾಗೂ ವೈಷ್ಣವರ ಕುರಿತಾದ ದೃಶ್ಯವೊಂದಿದೆ. ಆ ದೃಶ್ಯದಲ್ಲಿ ಪಾತ್ರಧಾರಿಯೊಬ್ಬ ವೈಷ್ಣವ ಸಮುದಾಯದವರ ಬಗ್ಗೆ ಹಾಸ್ಯ ಮಾಡುವ ಸಂಭಾಷಣೆಯೊಂದಿದೆ. ಅಲ್ಲದೆ, ವೈಷ್ಣವ ಮತಕ್ಕಿಂತಲೂ ಬೌದ್ಧ ಮತ ಶ್ರೇಷ್ಠ ಎಂಬ ಹೋಲಿಕೆಯ ದೃಶ್ಯವೂ ಇದೆ ಎನ್ನಲಾಗಿದೆ. ಇದೇ ಕಾರಣಕ್ಕೆ ಸಿನಿಮಾದ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು.
‘ತಂಗಲಾನ್’ ಸಿನಿಮಾದಲ್ಲಿ ಚಿಯಾನ್ ವಿಕ್ರಂ ಜೊತೆಗೆ ಮಲಯಾಳಂ ನಟಿ ಪಾರ್ವತಿ ಮೆನನ್ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾವನ್ನು ಪಾ ರಂಜಿತ್ ನಿರ್ದೇಶನ ಮಾಡಿದ್ದು, ಜ್ಞಾನವೇಲು ನಿರ್ಮಾಣ ಮಾಡಿದ್ದಾರೆ. ಇತ್ತೀಚೆಗೆ ‘ತಂಗಲಾನ್’ ಸಿನಿಮಾ ಬಗ್ಗೆ ಮಾತನಾಡಿರುವ ಜ್ಞಾನವೇಲು. ‘ತಂಗಲಾನ್’ ದೊಡ್ಡ ಸಿನಿಮಾ ಆಗಿರುವ ಕಾರಣ ನೆಟ್ಫ್ಲಿಕ್ಸ್ನವರು ಸಿನಿಮಾವನ್ನು ದೀಪಾವಳಿಗೆ ಬಿಡುಗಡೆ ಮಾಡಲು ಯೋಜಿಸಿದ್ದಾರೆ. ದೀಪಾವಳಿಗೆ ಸಿನಿಮಾ ಒಟಿಟಿಗೆ ಬರಲಿದೆ’ ಎಂದು ಖಾತ್ರಿ ಪಡಿಸಿದ್ದರು. ಅದರ ಬೆನ್ನಲ್ಲೆ ಈಗ ಸಿನಿಮಾದ ಮೇಲೆ ಹೇರಲಾಗಿದ್ದ ತಾತ್ಕಾಲಿಕ ನಿಷೇಧ ತೆರವಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ