ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿರುವ ‘ಛಾವಾ’ ಒಟಿಟಿಗೆ ಯಾವಾಗ?
Chhaava Movie: ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ನಟಿಸಿರುವ ‘ಛಾವಾ’ ಸಿನಿಮಾ ಕಲೆಕ್ಷನ್ನಲ್ಲಿ ಹಲವು ದಾಖಲೆಗಳನ್ನು ಮುರಿದು ಮುನ್ನುಗ್ಗುತ್ತಿದೆ. ಸಿನಿಮಾದ, ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿರುವಾಗಲೇ ಸಿನಿಮಾದ ಒಟಿಟಿ ಬಿಡುಗಡೆ ಬಗ್ಗೆ ಸುದ್ದಿಗಳು ಹರಿದಾಡುತ್ತಿವೆ. ಅಷ್ಟಕ್ಕೂ ಸಿನಿಮಾ ಒಟಿಟಿಗೆ ಯಾವಾಗ ಬರಲಿದೆ?

ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ (Rashmika Mandanna) ನಟಿಸಿರುವ ‘ಛಾವಾ’ ಸಿನಿಮಾ ಬಾಕ್ಸ್ ಆಫೀಸ್ ಅನ್ನು ಕೊಳ್ಳೆ ಹೊಡೆಯುತ್ತಿದೆ. ಹಲವು ಹಳೆಯ ದಾಖಲೆಗಳನ್ನು ಮುರಿದು ಇನ್ನೂ ತುಂಬಿದ ಗೃಹಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಹಿಂದಿಯಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ಇತ್ತೀಚೆಗಷ್ಟೆ ತೆಲುಗಿಗೆ ಡಬ್ ಆಗಿ ಬಿಡುಗಡೆ ಆಗಿ, ಆಂಧ್ರ, ತೆಲಂಗಾಣಗಳಲ್ಲಿಯೂ ಸಹ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ‘ಜವಾನ್’ ಸೇರಿದಂತೆ ಇನ್ನೂ ಕೆಲ ಇತ್ತೀಚೆಗೆ ಬಿಡುಗಡೆ ಆದ ಸಿನಿಮಾಗಳ ದಾಖಲೆಯನ್ನು ಮುರಿದಿದ್ದು, ಇನ್ನಷ್ಟು ದಾಖಲೆಗಳನ್ನು ಮುರಿಯಲು ಮುನ್ನುಗ್ಗುತ್ತಿದೆ. ಇದರ ನಡುವೆ ಸಿನಿಮಾದ ಒಟಿಟಿ ಬಿಡುಗಡೆ ಬಗ್ಗೆ ಸುದ್ದಿಗಳು ಹರಿದಾಡುತ್ತಿವೆ.
‘ಛಾವಾ’ ಸಿನಿಮಾ ಉತ್ತರ ಭಾರತದಲ್ಲಿ ಮತ್ತು ತೆಲುಗು ರಾಜ್ಯಗಳಲ್ಲಿ ಮಾತ್ರವೇ ದೊಡ್ಡ ಸಂಖ್ಯೆಯಲ್ಲಿ ಬಿಡುಗಡೆ ಆಗಿತ್ತು. ಅದರ ಹೊರತಾಗಿ ಕೆಲವು ಟೈರ್ 1 ಸಿಟಿಗಳಲ್ಲಿ ಮಾತ್ರವೇ ಬಿಡುಗಡೆ ಆಗಿತ್ತು. ಹಾಗಾಗಿ ಈ ಸಿನಿಮಾವನ್ನು ಒಟಿಟಿಯಲ್ಲಿ ನೋಡಲು ಹಲವು ಮಂದಿ ಉತ್ಸುಕರಾಗಿ ಕಾಯುತ್ತಿದ್ದಾರೆ. ಇದೀಗ ‘ಛಾವಾ’ ಸಿನಿಮಾದ ಒಟಿಟಿ ಬಿಡುಗಡೆ ದಿನಾಂಕದ ಬಗ್ಗೆ ಸುದ್ದಿಗಳು ಹರಿದಾಡುತ್ತಿವೆ.
ಮೂಲಗಳ ಪ್ರಕಾರ ‘ಛಾವಾ’ ಸಿನಿಮಾದ ಡಿಜಿಟಲ್ ಹಕ್ಕುಗಳನ್ನು ನೆಟ್ಫ್ಲಿಕ್ಸ್ ಖರೀದಿ ಮಾಡಿದ್ದು, ಬಲು ಅದ್ಧೂರಿಯಾಗಿ ಸಿನಿಮಾವನ್ನು ಒಟಿಟಿ ವೇದಿಕೆಗೆ ರಿಲೀಸ್ ಮಾಡಲಿದೆಯಂತೆ. ಏಪ್ರಿಲ್ 11 ರಂದು ಈ ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಅಗಲಿದೆ. ಚಿತ್ರಮಂದಿರಗಳಲ್ಲಿ ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ಮಾತ್ರವೇ ಬಿಡುಗಡೆ ಆದ ಈ ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ಕನ್ನಡ, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿಯೂ ಲಭ್ಯವಿರಲಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಚಿತ್ರತಂಡ ಇನ್ನಷ್ಟೆ ಅಧಿಕೃತ ಮಾಹಿತಿ ಹೊರಹಾಕಬೇಕಿದೆ.
ಇದನ್ನೂ ಓದಿ:‘ಛಾವಾ’ ಪ್ರಭಾವ, ಕೋಟೆ ಅಗಿದು ನಿಧಿಗಾಗಿ ಹುಡುಕಿದ ಜನ
ಫೆಬ್ರವರಿ 14 ರಂದು ಬಿಡುಗಡೆ ಆದ ‘ಛಾವಾ’ ಸಿನಿಮಾ ಈ ವರೆಗೆ ವಿಶ್ವ ಬಾಕ್ಸ್ ಆಫೀಸ್ನಲ್ಲಿ 718.50 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಭಾರತದಲ್ಲಿ ಮಾತ್ರ ಈ ಸಿನಿಮಾ 633 ಕೋಟಿಗೂ ಹೆಚ್ಚು ಹಣ ಗಳಿಕೆ ಮಾಡಿದೆ. ಭಾರತದಲ್ಲಿ ಮಾತ್ರವೇ ಸಿನಿಮಾದ ಕಲೆಕ್ಷನ್ 800 ಕೋಟಿ ದಾಟುವ ನಿರೀಕ್ಷೆ ಇದೆ. ಹಾಗಾಗಿಯೇ ಸಿನಿಮಾದ ಒಟಿಟಿ ಬಿಡುಗಡೆಯನ್ನು ತಡ ಮಾಡಲಾಗಿದೆ.
‘ಛಾವಾ’ ಸಿನಿಮಾ ಶಿವಾಜಿಯ ಪುತ್ರ ಸಂಬಾಜಿ ಮಹಾರಾಜರ ಕತೆಯನ್ನು ಒಳಗೊಂಡಿದೆ. ಸಿನಿಮಾದಲ್ಲಿ ಯೇಸುಬಾಯಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಅಕ್ಷಯ್ ಖನ್ನಾ, ಔರಂಗಾಜೇಬನ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ಲಕ್ಷ್ಮಣ ಉಠೇಕರ್, ಸಿನಿಮಾ ಅನ್ನು ಕೆಲ ಪ್ರಮುಖ ರಾಜಕಾರಣಿಗಳು ಸಹ ವೀಕ್ಷಿಸಿದ್ದು ಸಿನಿಮಾದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸಹ ಸಿನಿಮಾದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ