
ಪನ್ನಗಭರಣ ನಿರ್ದೇಶನದ ಹೊಸ ಕನ್ನಡ ರೊಮ್ಯಾಂಟಿಕ್ ವೆಬ್ ಸೀರಿಸ್ ‘ಕಾರ್ಪೊರೇಟ್ ಲವ್ ಸ್ಟೋರಿ’ ಟ್ರೇಲರ್ ಬಿಡುಗಡೆಯಾಗಿದೆ. ಜೀ5 ಒರಿಜಿನಲ್ ಪಟ್ಟಿಯಲ್ಲಿ ಈ ಸೀರಿಸ್ ಸ್ಥಾನ ಪಡೆದಿದೆ. ಕೆ-ಡ್ರಾಮಾ ಶೈಲಿಯ ಮಟ್ಟದಲ್ಲಿ ಈ ವೆಬ್ ಸೀರಿಸ್ ಮೂಡಿಬರುತ್ತಿದೆ ಎಂದು ಚಿತ್ರತಂಡ ತಿಳಿಸಿದೆ. ಎಲ್ಲಾ ವರ್ಗದ ಪ್ರೇಕ್ಷಕರನ್ನು ತಲುಪಬೇಕು ಎಂಬುದು ತಂಡದ ಉದ್ದೇಶ.
ಡೇಟಿಂಗ್ ಆ್ಯಪ್ ಒಂದನ್ನು ರೂಪಿಸುವ ಸ್ಟಾರ್ಟ್‌ಅಪ್ ಕಂಪನಿಯ ಕಾರ್ಪೊರೇಟ್ ಕಚೇರಿಯಲ್ಲಿ ನಡೆಯುವ ಪ್ರೇಮಕಥೆಯನ್ನು ಈ ಸೀರಿಸ್ ಒಳಗೊಂಡಿದೆ. ಕಂಪನಿಯಲ್ಲಿ ಕೆಲಸ ಮಾಡುವ ಕಥಾನಾಯಕ ಮತ್ತು ಅಲ್ಲಿಗೆ ಇಂಟರ್ನಿ ಆಗಿ ಬರುವ ಕಥಾನಾಯಕಿಯ ನಡುವೆ ಪ್ರೀತಿ ಚಿಗುರುತ್ತದೆ. ಮುಂದೆ ಇಬ್ಬರ ನಡುವೆ ಬಿರುಕು ಮೂಡುತ್ತದೆ. ವೃತ್ತಿ, ಸಂಬಂಧ ಮತ್ತು ಕುಟುಂಬದ ನಿರೀಕ್ಷೆಗಳ ನಡುವೆ ಸಾಗುವ ಈ ಪಯಣದಲ್ಲಿ ಇಬ್ಬರೂ ಮತ್ತೆ ಒಂದಾಗುತ್ತಾರೆಯೇ ಎಂಬುದೇ ಕಥೆಯ ಪ್ರಮುಖ ಕುತೂಹಲವಾಗಿದೆ.
ಇದನ್ನೂ ಓದಿ: ಜೀ5ನಲ್ಲಿ ಪ್ರಸಾರ ಆರಂಭಿಸಿದ ‘ಅಯ್ಯನ ಮನೆ 2’ ವೆಬ್ ಸೀರಿಸ್
ಫಿಲ್ಮಿ ಫೆಲ್ಲೊ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ರಾಜಶ್ರೀ ಪೊನ್ನಪ್ಪ ಅವರು ‘ಕಾರ್ಪೊರೇಟ್ ಲವ್ ಸ್ಟೋರಿ’ ಸೀರಿಸ್ ನಿರ್ಮಾಣ ಮಾಡಿದ್ದಾರೆ. ಪನ್ನಗಭರಣ ನಿರ್ದೇಶಿಸಿದ್ದು, ಪ್ರಿಯಾಂಕಾ ಉಪೇಂದ್ರ, ಸಿತಾರಾ ದಾಸ್ ಮತ್ತು ಪ್ರಣವ್ ಶ್ರೀಧರ್ ಮುಖ್ಯ ತಾರಾಗಣದಲ್ಲಿದ್ದಾರೆ. ಇದರ ಜೊತೆಗೆ ದಿಗಂತ್ ಮಂಚಾಲೆ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಡಿಸೆಂಬರ್ 27ರಿಂದ ಈ ಸರಣಿ ಪ್ರಸಾರ ಆರಂಭಿಸಲಿದೆ.
ಸಾಮಾನ್ಯವಾಗಿ ವೆಬ್ ಸೀರಿಸ್ ಎಂದಾಗ 8-10 ಎಪಿಸೋಡ್‌ಗಳನ್ನು ಒಟ್ಟಿಗೆ ಪ್ರಸಾರ ಮಾಡಿ ಸೀಸನ್ ಮುಗಿಸಲಾಗುತ್ತದೆ. ಆದರೆ, ‘ಕಾರ್ಪೊರೇಟ್ ಲವ್ ಸ್ಟೋರಿ’ ಈ ರೀತಿ ಇಲ್ಲ. ಈ ಸೀರಿಸ್ ಒಟ್ಟು 30 ಎಪಿಸೋಡ್‌ಗಳನ್ನು ಹೊಂದಿರಲಿದ್ದು, ಪ್ರತಿಯೊಂದು ಎಪಿಸೋಡ್ 20–25 ನಿಮಿಷಗಳ ಅವಧಿಯದ್ದಾಗಿರಲಿದೆ. ಪ್ರತಿ ಶುಕ್ರವಾರ ತಲಾ ಐದು ಎಪಿಸೋಡ್‌ಗಳು ತೆರೆಗೆ ಬರಲಿದ್ದು, ಕಾರ್ಪೊರೇಟ್ ಜಗತ್ತಿನ ಹಿನ್ನೆಲೆಯಲ್ಲಿ ಮೂಡಿಬರುತ್ತಿರುವ ಈ ನವಯುಗದ ಪ್ರೇಮಕಥೆ ಈಗಾಗಲೇ ಗಮನ ಸೆಳೆಯುತ್ತಿದೆ. ಮುಂದಿನ ದಿನಗಳಲ್ಲಿ 50 ಎಪಿಸೋಡ್, 100 ಎಪಿಸೋಡ್‌ಗಳ ಸರಣಿಯನ್ನು ತರುವ ಆಲೋಚನೆ ಇದೆ ಎಂದು ಜೀ ಕನ್ನಡ ಬಿಸ್ನೆಸ್ ಹೆಡ್ ದೀಪಕ್ ಶ್ರೀರಾಮುಲು ಹಾಗೂ ಜೀ5ಕನ್ನಡ ಮುಖ್ಯಸ್ಥ ಆರ್ಜೆ ಪ್ರದೀಪ ತಿಳಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.