‘ಜೈ ಭೀಮ್​’ ಚಿತ್ರ ಮಾಡಿದ್ದ ಸೂರ್ಯ, ಜ್ಯೋತಿಕಾ ವಿರುದ್ಧ ಎಫ್​ಐಆರ್​ ದಾಖಲಿಸಲು ಕೋರ್ಟ್​ ಆದೇಶ

| Updated By: ಮದನ್​ ಕುಮಾರ್​

Updated on: May 05, 2022 | 11:42 AM

Jai Bhim Movie | Vanniyar: ಈ ಪ್ರಕರಣದ ವಿಚಾರಣೆ ಏ.29ರಂದು ನಡೆಯಿತು. ನಟ ಸೂರ್ಯ, ನಿರ್ಮಾಪಕಿ ಜ್ಯೋತಿಕಾ ಹಾಗೂ ನಿರ್ದೇಶಕ ಜ್ಞಾನವೇಲ್​ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ.

‘ಜೈ ಭೀಮ್​’ ಚಿತ್ರ ಮಾಡಿದ್ದ ಸೂರ್ಯ, ಜ್ಯೋತಿಕಾ ವಿರುದ್ಧ ಎಫ್​ಐಆರ್​ ದಾಖಲಿಸಲು ಕೋರ್ಟ್​ ಆದೇಶ
ಸೂರ್ಯ
Follow us on

ಕಾಲಿವುಡ್​ನ ಖ್ಯಾತ ನಟ ಸೂರ್ಯ (Suriya) ಅಭಿನಯಿಸಿರುವ ‘ಜೈ ಭೀಮ್​’ ಸಿನಿಮಾ ಸಖತ್​ ಸದ್ದು ಮಾಡಿತ್ತು. ನೇರವಾಗಿ ಒಟಿಟಿಯಲ್ಲಿ ರಿಲೀಸ್​ ಆಗಿದ್ದ ಈ ಸಿನಿಮಾಗೆ ವಿಮರ್ಶಕರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ ಕೆಲವರು ‘ಜೈ ಭೀಮ್​’ ಚಿತ್ರದ ಬಗ್ಗೆ ಆಕ್ಷೇಪ ಎತ್ತಿದ್ದರು. ವನ್ನಿಯಾರ್​ (Vanniyar) ಸಮುದಾಯದ ಜನರನ್ನು ಈ ಸಿನಿಮಾದಲ್ಲಿ ಅವಹೇಳನಕಾರಿಯಾಗಿ ಬಿಂಬಿಸಲಾಗಿದೆ ಎಂದು ತಕರಾರು ತೆಗೆದಿದ್ದರು. ಈ ಪ್ರಕರಣ ಈಗ ಕೋರ್ಟ್​ ಮೆಟ್ಟಿಲು ಏರಿದೆ. ಸಿನಿಮಾದ ನಟ ಸೂರ್ಯ, ನಿರ್ಮಾಪಕಿಯೂ ಆಗಿರುವ ಅವರ ಪತ್ನಿ ಜ್ಯೋತಿಕಾ ಹಾಗೂ ನಿರ್ದೇಶಕ ಜ್ಞಾನವೇಲ್​ ವಿರುದ್ಧ ಎಫ್​ಐಆರ್​ ದಾಖಲು ಮಾಡುವಂತೆ ಚೆನ್ನೈನ ನ್ಯಾಯಾಲಯವೊಂದು ಆದೇಶಿಸಿದೆ. ಇದರಿಂದ ಚಿತ್ರತಂಡಕ್ಕೆ ಸಂಕಷ್ಟ ಎದುರಾಗಿದೆ. 2021ರ ನವೆಂಬರ್​ 2ರಂದು ‘ಜೈ ಭೀಮ್​’ ಸಿನಿಮಾ (Jai Bhim Movie) ‘ಅಮೇಜಾನ್​ ಪ್ರೈಂ ವಿಡಿಯೋ’ ಮೂಲಕ ರಿಲೀಸ್​ ಆಗಿತ್ತು. ಬುಡಕಟ್ಟು ಸಮುದಾಯದ ಜನರ ಮೇಲೆ ನಡೆದ ಪೊಲೀಸ್​ ದೌರ್ಜನ್ಯದ ಕುರಿತು ಈ ಚಿತ್ರದಲ್ಲಿ ಹೇಳಲಾಗಿದೆ. ಆದರೆ ಸಿನಿಮಾದ ಕೆಲವು ದೃಶ್ಯಗಳು ವನ್ನಿಯಾರ್​ ಸಮುದಾಯವನ್ನು ಅವಹೇಳಕಾರಿಯಾಗಿ ಚಿತ್ರಿಸಿವೆ ಎಂದು ಆ ಸಮುದಾಯದ ಕೆಲವರು ಕಾನೂನಿನ ಸಮರ ಸಾರಿದ್ದಾರೆ.

‘ರುದ್ರ ವನ್ನಿಯಾರ್​ ಸೇನಾ’ ಸಂಘಟನೆಯವರು ಈ ಕೇಸ್​ ದಾಖಲಿಸಿದ್ದಾರೆ. ಏ.29ರಂದು ಈ ಪ್ರಕರಣದ ವಿಚಾರಣೆ ನಡೆಯಿತು. ನಟ ಸೂರ್ಯ, ನಿರ್ಮಾಪಕಿ ಜ್ಯೋತಿಕಾ ಹಾಗೂ ನಿರ್ದೇಶಕ ಜ್ಞಾನವೇಲ್​ ಅವರು ವಿಚಾರಣೆಯಲ್ಲಿ ಹಾಜರಾಗಿಲ್ಲ. ‘ವನ್ನಿಯರ್​ ಸಮುದಾಯವನ್ನು ಕೆಟ್ಟದಾಗಿ ತೋರಿಸುವ ಸಲುವಾಗಿಯೇ ಈ ಸಿನಿಮಾವನ್ನು ಮಾಡಲಾಗಿದೆ’ ಎಂದು ದೂರುದಾರರು ಆರೋಪಿಸಿದ್ದಾರೆ. ವಿಚಾರಣೆ ನಡೆಸಿದ ನ್ಯಾಯಾಲಯವು ಈ ಆದೇಶ ಹೊರಡಿಸಿದೆ. ಸೂರ್ಯ, ಜ್ಯೋತಿಕಾ ಮತ್ತು ಜ್ಞಾನವೇಲ್​ ವಿರುದ್ಧ ಎಫ್​ಐಆರ್​ ದಾಖಲಿಸಿ, ಕಾನೂನು ಪ್ರಕಾರ ತನಿಖೆ ನಡೆಸುವಂತೆ ಚೆನ್ನೈ ಪೊಲೀಸರಿಗೆ ಕೋರ್ಟ್​ ಸೂಚಿಸಿದೆ. ಈ ಪ್ರಕರಣದ ಮುಂದಿನ ವಿಚಾರಣೆ ಮೇ 20ರಂದು ನಡೆಯಲಿದೆ.

ಕೆಲವು ಸತ್ಯ ಘಟನೆಗಳನ್ನು ಆಧರಿಸಿ ‘ಜೈ ಭೀಮ್​’ ಸಿನಿಮಾ ಮೂಡಿಬಂದಿದೆ. ಈ ಚಿತ್ರ ರಿಲೀಸ್​ ಆದಾಗಲೇ ವನ್ನಿಯಾರ್​ ಸಮುದಾಯದಿಂದ ವಿರೋಧ ವ್ಯಕ್ತವಾಗಿತ್ತು. ಸಿನಿಮಾದಲ್ಲಿನ ವಿಲನ್​ ಪಾತ್ರಗಳನ್ನು ವನ್ನಿಯಾರ್​ ಸಮುದಾಯದವರು ಎಂದು ತೋರಿಸಲಾಗಿದೆ. ಉದ್ದೇಶ ಪೂರ್ವಕವಾಗಿಯೇ ಈ ರೀತಿ ಮಾಡಲಾಗಿದೆ. ಸಮಾಜದಲ್ಲಿ ತಮ್ಮ ಸಮುದಾಯಕ್ಕೆ ಅವಮಾನ ಆದಂತಾಗಿದೆ ಎಂದು ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ
ಆಸ್ಕರ್​ ರೇಸ್​ನಿಂದ ‘ಜೈ ಭೀಮ್​’ ಚಿತ್ರ ಹೊರಬಿದ್ದರೂ ಸೂರ್ಯ ಫ್ಯಾನ್ಸ್​ ಖುಷಿ ಕಡಿಮೆ ಆಗಿಲ್ಲ; ಕಾರಣ ಏನು?
ಸಂಕಷ್ಟದಲ್ಲಿ ‘ಜೈ ಭೀಮ್’ ತಂಡ; ಕ್ಷಮೆ ಕೇಳಿ ಐದು ಕೋಟಿ ನೀಡುವಂತೆ ಸೂರ್ಯಗೆ ಬಂತು ನೋಟಿಸ್
ಕಪಾಳಮೋಕ್ಷ ಕಾಂಟ್ರವರ್ಸಿ: ಟೀಕೆ ಮಾಡಿದವರಿಗೆ ‘ಜೈ ಭೀಮ್​’ ನಟ ಪ್ರಕಾಶ್​ ರಾಜ್​ ಖಡಕ್​ ತಿರುಗೇಟು
‘ಜೈ ಭೀಮ್​’ ಎನ್ನುತ್ತ ಕರ್ನಾಟಕದಲ್ಲೂ ಸದ್ದು ಮಾಡಲು ಸಜ್ಜಾದ ತಮಿಳು ಸ್ಟಾರ್​ ನಟ ಸೂರ್ಯ

ಸೂರ್ಯ ಮತ್ತು ಜ್ಯೋತಿಕಾ ಒಡೆತನದ ‘2ಡಿ ಎಂಟರ್​ಟೇನ್​ಮೆಂಟ್​’ ಬ್ಯಾನರ್​ ಮೂಲಕ ‘ಜೈ ಭೀಮ್​’ ಸಿನಿಮಾ ಮೂಡಿಬಂದಿದೆ. ವಕೀಲ ಚಂದ್ರು ಅವರ ರಿಯಲ್​ ಲೈಫ್​ ಪಾತ್ರದಲ್ಲಿ ಸೂರ್ಯ ನಟಿಸಿದ್ದಾರೆ. ಬುಡಕಟ್ಟು ಸಮುದಾಯದ ಜನರಿಗೆ ನ್ಯಾಯ ಒದಗಿಸಿಕೊಡುವ ಮೂಲಕ ರಿಯಲ್​ ಹೀರೋ ಎನಿಸಿಕೊಂಡ ಚಂದ್ರು ಅವರ ಪಾತ್ರದಲ್ಲಿನ ಸೂರ್ಯ ನಟನೆಗೆ ಪ್ರೇಕ್ಷಕರು ಫುಲ್​ ಮಾರ್ಕ್ಸ್​ ನೀಡಿದ್ದಾರೆ. ಈಗ ಈ ಚಿತ್ರತಂಡಕ್ಕೆ ಸಂಕಷ್ಟ ಎದುರಾಗಿದೆ. ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್​ನಲ್ಲಿ ‘ಜೈ ಭೀಮ್​’ ತಂಡ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ದಟ್ಟವಾಗಿದೆ.

ಭಿನ್ನ ರೀತಿಯ ಸಿನಿಮಾಗಳನ್ನು ಮಾಡುವ ಮೂಲಕ ಸೂರ್ಯ ಗುರುತಿಸಿಕೊಂಡಿದ್ದಾರೆ. ‘ಜೈ ಭೀಮ್​’ ಚಿತ್ರಕ್ಕಿಂತಲೂ ಮುನ್ನ ಅವರು ಮಾಡಿದ್ದ ‘ಸೂರರೈ ಪೊಟ್ರು’ ಚಿತ್ರ ಕೂಡ ಸೂಪರ್​ ಹಿಟ್​ ಆಗಿತ್ತು. ಆ ಸಿನಿಮಾ ಸಹ ‘ಅಮೇಜಾನ್​ ಪ್ರೈಂ ವಿಡಿಯೋ’ದಲ್ಲಿ ರಿಲೀಸ್​ ಆಗಿತ್ತು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.