ಕಪಾಳಮೋಕ್ಷ ಕಾಂಟ್ರವರ್ಸಿ: ಟೀಕೆ ಮಾಡಿದವರಿಗೆ ‘ಜೈ ಭೀಮ್’ ನಟ ಪ್ರಕಾಶ್ ರಾಜ್ ಖಡಕ್ ತಿರುಗೇಟು
Jai Bhim | Prakash Raj: ಹಿಂದಿ ಹೇರಿಕೆ ಬಗ್ಗೆ ಇಡೀ ದಕ್ಷಿಣ ಭಾರತದಲ್ಲಿ ವಿರೋಧ ವ್ಯಕ್ತವಾಗುತ್ತಲೇ ಇದೆ. ನಿಜಜೀವನದಲ್ಲಿ ಪ್ರಕಾಶ್ ರಾಜ್ ಕೂಡ ಹಿಂದಿ ಹೇರಿಕೆಯನ್ನು ಖಂಡಿಸುತ್ತಲೇ ಬಂದಿದ್ದಾರೆ. ‘ಜೈ ಭೀಮ್’ ಸಿನಿಮಾದ ಕಪಾಳಮೋಕ್ಷ ದೃಶ್ಯ ಸಹ ಅದನ್ನೇ ಪ್ರತಿಬಿಂಬಿಸಿದೆ.
ನಟ ಪ್ರಕಾಶ್ ರಾಜ್ ಅವರು ಒಂದಿಲ್ಲೊಂದು ಕಾರಣಕ್ಕೆ ವಿವಾದ ಮಾಡಿಕೊಳ್ಳುತ್ತಲೇ ಇರುತ್ತಾರೆ. ರಾಜಕೀಯದ ನಿಲುವುಗಳಿಂದ ಅವರನ್ನು ಟೇಕೆ ಮಾಡುವವರು ಅನೇಕರಿದ್ದಾರೆ. ಇತ್ತೀಚೆಗೆ ಮಾ ಎಲೆಕ್ಷನ್ ಸಲುವಾಗಿ ಪ್ರಕಾಶ್ ರಾಜ್ ಅವರು ಕೆಲವರ ವಿರೋಧ ಕಟ್ಟಿಕೊಂಡಿದ್ದರು. ಆ ವಿಚಾರ ತಣ್ಣಗಾಯಿತು ಎನ್ನುವಾಗಲೇ ಮತ್ತೊಂದು ವಿವಾದ ಮುನ್ನೆಲೆಗೆ ಬಂದಿದೆ. ‘ಜೈ ಭೀಮ್’ ಸಿನಿಮಾದಲ್ಲಿ ಅವರು ನಟಿಸಿದ ಒಂದು ದೃಶ್ಯವನ್ನು ಕೆಲವರು ಟೀಕಿಸುತ್ತಿದ್ದಾರೆ. ಅಂಥವರಿಗೆ ಪ್ರಕಾಶ್ ರಾಜ್ ಖಡಕ್ ತಿರುಗೇಟು ನೀಡಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಸೂರ್ಯ ನಟನೆಯ ‘ಜೈ ಭೀಮ್’ ಸಿನಿಮಾದಲ್ಲಿ ಪ್ರಕಾಶ್ ರೈ ಅವರು ಪೊಲೀಸ್ ಅಧಿಕಾರಿ ಪಾತ್ರ ಮಾಡಿದ್ದಾರೆ. ತನಿಖೆ ಸಮಯದಲ್ಲಿ ಹಿಂದಿ ಮಾತನಾಡಿದ ವ್ಯಕ್ತಿಗೆ ಅವರು ಕಪಾಳಮೋಕ್ಷ ಮಾಡುತ್ತಾರೆ. ಅಲ್ಲದೇ, ತಮಿಳಿನಲ್ಲಿ ಮಾತನಾಡುವಂತೆ ತಾಕೀತು ಮಾಡುತ್ತಾರೆ. ಈ ದೃಶ್ಯಕ್ಕೆ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ‘ಜೈ ಭೀಮ್ ರೀತಿಯ ಸಿನಿಮಾ ನೋಡಿದ ಬಳಿಕ ಕೆಲವರಿಗೆ ಬುಡಕಟ್ಟು ಜನರ ಕಷ್ಟ ಕಾಣಿಸುವುದಿಲ್ಲ. ಅನ್ಯಾಯದ ಭೀಕರತೆ ಕಾಣಿಸುವುದೇ ಇಲ್ಲ. ಕಪಾಳಮೋಕ್ಷ ಮಾಡಿದ್ದನ್ನು ಮಾತ್ರ ಅವರು ನೋಡುತ್ತಾರೆ. ಅಷ್ಟೇ ಅವರಿಗೆ ಅರ್ಥವಾಗಿರುವುದು. ಇದರಿಂದ ಅವರ ಉದ್ದೇಶ ಏನು ಎಂಬುದು ಬಯಲಾಗುತ್ತದೆ’ ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ.
‘ಕೆಲವರಿಗೆ ಈ ದೃಶ್ಯದಿಂದ ಕಿರಿಕಿರಿ ಆಗಿದೆ. ಯಾಕೆಂದರೆ ಅದರಲ್ಲಿ ನಟಿಸಿರುವುದು ಪ್ರಕಾಶ್ ರಾಜ್. ಅಂಥವರ ಬಣ್ಣ ಬಯಲಾಗಿದೆ. ಬುಡಕಟ್ಟು ಜನರ ನೋವು ಅವರಿಗೆ ನಾಟುವುದಿಲ್ಲ ಎಂದಾದರೆ ಅಂಥ ವ್ಯಕ್ತಿಗಳಿಗೆ ಪ್ರತಿಕ್ರಿಯೆ ನೀಡುವುದರಲ್ಲ ಅರ್ಥವಿಲ್ಲ’ ಎಂದಿದ್ದಾರೆ ಪ್ರಕಾಶ್ ರಾಜ್.
ಹಿಂದಿ ಹೇರಿಕೆ ಬಗ್ಗೆ ಇಡೀ ದಕ್ಷಿಣ ಭಾರತದಲ್ಲಿ ವಿರೋಧ ವ್ಯಕ್ತವಾಗುತ್ತಲೇ ಇದೆ. ನಿಜಜೀವನದಲ್ಲಿ ಪ್ರಕಾಶ್ ರಾಜ್ ಕೂಡ ಹಿಂದಿ ಹೇರಿಕೆಯನ್ನು ಖಂಡಿಸುತ್ತಲೇ ಬಂದಿದ್ದಾರೆ. ‘ಜೈ ಭೀಮ್’ ಸಿನಿಮಾದ ಕಪಾಳಮೋಕ್ಷ ದೃಶ್ಯ ಕೂಡ ಅದನ್ನೇ ಪ್ರತಿಬಿಂಬಿಸಿದೆ. ಅದೇ ಕಾರಣಕ್ಕಾಗಿ ಇಂಥ ದೃಶ್ಯದಲ್ಲಿ ನಟಿಸಲು ಪ್ರಕಾಶ್ ರಾಜ್ ಒಪ್ಪಿಕೊಂಡರು. ತಮ್ಮ ಆ ನಿರ್ಧಾರಕ್ಕೆ ಅವರು ಈಗಲೂ ಬದ್ಧರಾಗಿದ್ದಾರೆ.
ನ.2ರಂದು ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ‘ಜೈ ಭೀಮ್’ ಸಿನಿಮಾ ಬಿಡುಗಡೆ ಆಯಿತು. ಪ್ರೇಕ್ಷಕರಿಂದ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನೈಜ ಘಟನೆ ಆಧರಿಸಿ ಈ ಸಿನಿಮಾ ತಯಾರಾಗಿದೆ. ಓಟಿಟಿ ಪ್ಲಾಟ್ಫಾರ್ಮ್ನಲ್ಲಿ ‘ಸೂರರೈ ಪೋಟ್ರು’ ಬಳಿಕ ಸೂರ್ಯ ಅವರಿಗೆ ಮತ್ತೊಂದು ಗೆಲುವು ಸಿಕ್ಕಂತಾಗಿದೆ.
ಇದನ್ನೂ ಓದಿ:
ಪುನೀತ್ ಸಾವಿನ ಬಗ್ಗೆ ಮೂಡಿದೆ ಅನುಮಾನ; ವೈದ್ಯರ ವಿರುದ್ಧ ದೂರು ದಾಖಲು
ಕೆನ್ನೆಗೆ ಬಾರಿಸಿ ಸುದ್ದಿಯಾದ ಪ್ರಕಾಶ್ ರೈ; ನಟನ ಬೆಂಬಲಕ್ಕೆ ನಿಂತ ದಕ್ಷಿಣ ಭಾರತದ ಮಂದಿ