
ಹಿಂದಿಯ ‘ಸ್ಕ್ಯಾಮ್’ (Scam) ವೆಬ್ ಸರಣಿ (Web series) ಭಾರತದ ಬಲು ಜನಪ್ರಿಯ ವೆಬ್ ಸರಣಿಗಳಲ್ಲಿ ಒಂದು. ಈ ಸ್ಕ್ಯಾಮ್ ವೆಬ್ ಸರಣಿ ಭಾರತದ ನಿಜ ಆರ್ಥಿಕ ಅಪರಾಧಿಗಳ ಕತೆಗಳನ್ನು ಹೇಳುವ ವೆಬ್ ಸರಣಿ. ಪ್ರತಿಭಾವಂತ ನಿರ್ದೇಶಕ ಹನ್ಸಲ್ ಮೆಹ್ತಾ ನಿರ್ದೇಶನ ಮಾಡುತ್ತಾ ಬರುತ್ತಿರುವ ‘ಸ್ಕ್ಯಾಮ್’ ವೆಬ್ ಸರಣಿಯ ಎರಡು ಸೀಸನ್ಗಳು ಈಗಾಗಲೇ ಬಂದಿದ್ದು ಎರಡೂ ಸೂಪರ್ ಹಿಟ್ ಆಗಿವೆ. ಅದರಲ್ಲೂ ಮೊದಲಿಗೆ ಬಂದ ‘ಸ್ಕ್ಯಾಮ್ 1992’, ಷೇರು ಮಾರುಕಟ್ಟೆ ಬಳಸಿ ಕೋಟ್ಯಂತರ ಹಣ ಲೂಟಿ ಮಾಡಿದ್ದ ಹರ್ಷಲ್ ಮೆಹ್ತ ಜೀವನ ಆಧರಿಸಿದ ಕತೆ ಒಳಗೊಂಡಿತ್ತು. ಅದು ಬ್ಲಾಕ್ ಬಸ್ಟರ್ ಆಗಿತ್ತು. ಬಳಿಕ ಕರೀಂ ಲಾಲ್ ತೆಲಗಿ ಕುರಿತ ‘ಸ್ಕ್ಯಾಮ್ 2003’ ಬಂತು. ಇದೀಗ ಮತ್ತೊಬ್ಬ ಆರ್ಥಿಕ ಅಪರಾಧಿಯ ಕತೆಯನ್ನು ಹನ್ಸಲ್ ತೆರೆಗೆ ತರುತ್ತಿದ್ದಾರೆ.
ದೇಶದಾದ್ಯಂತ ಸಂಚಲನ ಸೃಷ್ಟಿಸಿದ್ದ ಆರ್ಥಿಕ ಅಪರಾಧಿಗಳ ಜೀವನವನ್ನು ಆಯ್ಕೆ ಮಾಡಿಕೊಂಡು ವೆಬ್ ಸರಣಿ ಮಾಡುವ ಹನ್ಸಲ್ ಮೆಹ್ತಾ, ಈ ಬಾರಿ ಸಹಾರಾ ಇಂಡಿಯಾ ಸ್ಥಾಪಕ ಭಾರತೀಯ ಉದ್ಯಮಿ ದಿವಂಗತ ಸುಬ್ರತಾ ರಾಯ್ ಅವರ ಜೀವನವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಹನ್ಸಲ್ ಮೆಹ್ತಾ ಅವರ ‘ಸ್ಕ್ಯಾಮ್ 3’ ನಿರ್ಮಾಪಕರು ಶೀಘ್ರದಲ್ಲೇ ಅಧಿಕೃತ ಘೋಷಣೆ ಮಾಡಲು ಸಜ್ಜಾಗಿದ್ದಾರೆ, ಏಕೆಂದರೆ ಇದರ ಚಿತ್ರೀಕರಣವು ಮೇ 13 ರಿಂದ ಆರಂಭವಾಗಿದೆ ಎನ್ನಲಾಗುತ್ತಿದೆ.
ಭಾರತದ ಅತ್ಯಂತ ವಿವಾದಾತ್ಮಕ ಉದ್ಯಮಿಗಳಲ್ಲಿ ಒಬ್ಬರು ಸುಬ್ರತಾ ರಾಯ್. ಅತ್ಯಂತ ಐಶಾರಾಮಿ ಜೀವನ ನಡೆಸುತ್ತಿದ್ದ ಸುಬ್ರತಾ ರಾಯ್ ಮೇಲೆ ಹಲವು ಆರೋಪಗಳಿದ್ದವು, ವಂಚನೆ, ಪಾಂಜಿ ಸ್ಕ್ಯಾಮ್ ಆರೋಪ, ಮನಿ ಲಾಂಡರಿಂಗ್ ಇನ್ನೂ ಕೆಲವು ಆರೋಪಗಳಿದ್ದವು. ಸುಮಾರು 24 ಸಾವಿರ ಕೋಟಿ ರೂಪಾಯಿಗಳ ಹಣವನ್ನು ಸುಬ್ರತೋ ರಾಯ್ ವಂಚಿಸಿದ್ದರು. ಸುಬ್ರತೋ ರಾಯ್ ಅನ್ನು ಜೈಲಿಗೆ ಹಾಕಿದ ಬಳಿಕ ಅಲ್ಲಿಯೂ ಸಹ ಈ ವ್ಯಕ್ತಿ ಪ್ರಭಾವ ಬಳಸಿ ಸೌಲಭ್ಯಗಳನ್ನು ಪಡೆದುಕೊಂಡಿದ್ದು ದೊಡ್ಡ ಸುದ್ದಿಯಾಗಿತ್ತು.
ಇದನ್ನೂ ಓದಿ:ಜೀ5 ಒಟಿಟಿಯಲ್ಲಿ ಏ.24ರಿಂದ ಪ್ರಸಾರ ಆಗಲಿದೆ ‘ಜೆರಾಕ್ಸ್’ ವೆಬ್ ಸರಣಿ; ಏನಿದರ ಕಥೆ?
ಸುಬ್ರತಾ ರಾಯ್, ತಮ್ಮ ಮಕ್ಕಳ ಮದುವೆಗೆ 500 ಕೋಟಿಗೂ ಹೆಚ್ಚು ಹಣ ಖರ್ಚು ಮಾಡಿದ್ದರು. ರಾಜಕಾರಣಿಗಳಿಗೆ ಬಲು ಆಪ್ತರಾಗಿದ್ದ ಸುಬ್ರತೋ ರಾಯ್, ಅಟಲ್ ಬಿಹಾರಿ ವಾಜಪೇಯಿ, ನರೇಂದ್ರ ಮೋದಿ ಅವರುಗಳಿಗೆ ಆಗ ಬೆಂಬಲ ನೀಡಿದ್ದರು. ಅಟಲ್ ಅವರು ಸುಬ್ರತೋ ರಾಯ್ ಪುತ್ರನ ಮದುವೆಗೆ ಸಹ ಆಗಮಿಸಿದ್ದರು. ಹಲವು ಸಾಮಾಜಿಕ ಕಾರ್ಯಗಳಲ್ಲಿಯೂ ಸಹ ಸುಬ್ರತೋ ರಾಯ್ ತಮ್ಮನ್ನು ತೊಡಗಿಸಿಕೊಂಡಿದ್ದರು. ಕಾರ್ಗಿಲ್ನಲ್ಲಿ ಮೃತರಾದ ಸೈನಿಕರ ಕುಟುಂಬಕ್ಕೆ ನೆರವಾಗಿದ್ದರು, ಇನ್ನೂ ಹಲವು ಸಾಮಾಜ ಸೇವೆ ಮಾಡಿದ್ದರು. ಆದರೆ ಅಂತಿಮವಾಗಿ ಸುಬ್ರತೋ ಹೃದಯಾಘಾತದಿಂದ ನಿಧನ ಹೊಂದಿದಾಗ ಅವರ ಮಕ್ಕಳು, ಪತ್ನಿ ಸಹ ಅವರನ್ನು ಕಾಣಲು ಬಂದಿರಲಿಲ್ಲ.
ಇದೀಗ ಹನ್ಸಲ್ ಮೆಹ್ತಾ ಅವರು ಸುಬ್ರತಾ ರಾಯ್ ಅವರ ಜೀವನ ಕತೆಯನ್ನು ವೆಬ್ ಸರಣಿ ಮಾಡಲು ತಯಾರಾಗಿದ್ದು, ಚಿತ್ರಕತೆ ರೆಡಿ ಮಾಡಿಕೊಂಡಿದ್ದಾರೆ. ಸಿದ್ಧಾರ್ಥ್ ಬೋಡ್ಕೆ ಅವರು ಸುಬ್ರತಾ ರಾಯ್ ಪಾತ್ರದಲ್ಲಿ ನಟಿಸಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ