
2026ರ ವರ್ಷದ ಬ್ಲಾಕ್‌ಬಸ್ಟರ್ ಸಿನಿಮಾ ‘ಹನುಮಾನ್ ಅಂಶ್’ ಒಟಿಟಿ ಬಿಡುಗಡೆಯಲ್ಲಿ ಹೊಸ ಹಾದಿ ಹಿಡಿದಿದೆ. ಎರಡು ಪ್ರತ್ಯೇಕ ಒಟಿಟಿ ವೇದಿಕೆಗಳಲ್ಲಿ ಬೇರೆ ಬೇರೆ ಭಾಷೆಗಳಲ್ಲಿ ಈ ಚಿತ್ರ ಸ್ಟ್ರೀಮಿಂಗ್ ಆಗಲಿದ್ದು, ಒಟ್ಟು ಆರು ಭಾಷೆಗಳಲ್ಲಿ ಪ್ರೇಕ್ಷಕರಿಗೆ ಲಭ್ಯವಾಗಲಿದೆ. ನವೆಂಬರ್ 27ರಂದು ‘ಸೋನಿ ಲಿವ್’ ಒಟಿಟಿ ಮೂಲಕ ಹಿಂದಿ ಭಾಷೆಯಲ್ಲಿ ಈ ಚಿತ್ರ ಪ್ರೀಮಿಯರ್ ಆಗಲಿದೆ ಎಂದು ಈ ಹಿಂದೆ ಘೋಷಿಸಲಾಗಿತ್ತು. ಇದರ ಬೆನ್ನಲ್ಲೇ ಇದೀಗ ‘ನೆಟ್‌ಫ್ಲಿಕ್ಸ್’ ಮಹತ್ವದ ಘೋಷಣೆ ಮಾಡಿದ್ದು, ನವೆಂಬರ್ 29ರಂದು ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಗುಜರಾತಿ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದು ತಿಳಿಸಿದೆ.
‘ನಂಬಿಕೆಯೇ ಅವರ ಜೀವನವನ್ನು ಬದಲಿಸಿತು. ಅವರ ಭಕ್ತಿ ಸಾವಿರಾರು ಜನರ ಬದುಕನ್ನು ಬದಲಿಸಿತು. ಹನುಮಂತನ ಪರಮ ಭಕ್ತನ ದೈವಿಕ ಕಥೆಯನ್ನು ಈಗ ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಿಸಿ. ನವೆಂಬರ್ 29ರಂದು ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಗುಜರಾತಿ ಭಾಷೆಗಳಲ್ಲಿ ಹನುಮಾನ್ ಅಂಶ್ ನೆಟ್‌ಫ್ಲಿಕ್ಸ್ ಇಂಡಿಯಾದಲ್ಲಿ ಬಿಡುಗಡೆಯಾಗಲಿದೆ’ ಎಂದು ನೆಟ್‌ಫ್ಲಿಕ್ಸ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದೆ.
ಚಿತ್ರದ ನಿರ್ಮಾಪಕಿ ಅನುಪ್ರಿಯಾ ನಾಗರ್ ಅವರು ‘ಹನುಮಾನ್ ಅಂಶ್’ ಚಿತ್ರದ ಮುಂದುವರಿದ ಭಾಗ ನಿರ್ಮಾಣವಾಗುತ್ತಿರುವುದನ್ನು ಖಚಿತಪಡಿಸಿದ್ದಾರೆ. ನೀಮ್ ಕರೋಲಿ ಬಾಬಾ ಅವರ ಜೀವನ ಮತ್ತು ಬೋಧನೆಗಳನ್ನು ಯುವ ಪೀಳಿಗೆಗೆ ಪರಿಚಯಿಸುವುದೇ ಈ ಸಿನಿಮಾ ಮಾಡುವ ಹಿಂದಿನ ಮುಖ್ಯ ಉದ್ದೇಶವಾಗಿತ್ತು ಎಂದು ಅವರು ಹೇಳಿದ್ದಾರೆ.
‘ವಯಸ್ಸು ಕೇವಲ ಒಂದು ಸಂಖ್ಯೆಯಷ್ಟೇ. ನೀಮ್ ಕರೋಲಿ ಬಾಬಾ ಅವರ ಕಥೆಗಳನ್ನು ಯುವ ಪ್ರೇಕ್ಷಕರಿಗೆ, ವಿಶೇಷವಾಗಿ ಜೆನ್ ಜೀ ಪೀಳಿಗೆಗೆ ತಲುಪಿಸುವುದು ನನ್ನ ಏಕೈಕ ಗುರಿಯಾಗಿತ್ತು. ನಮಗೆ ಇಂತಹ ಮಹಾನ್ ವ್ಯಕ್ತಿಗಳ ಬಗ್ಗೆ ವಿದೇಶಿಯರ ಮೂಲಕ ತಿಳಿಯುವಂತಾಗಿದೆ. ನಾನೂ ಸಹ ವಿದೇಶಿಯರ ಮೂಲಕವೇ ಅವರ ಬಗ್ಗೆ ತಿಳಿದುಕೊಂಡೆ. ಭಾರತದ ಯುವತಿಯಾಗಿ, ನಮ್ಮದೇ ನೆಲದ ಸಂತರ ಕಥೆಯನ್ನು ನಮ್ಮ ಮೂಲಕವೇ ತಿಳಿದುಕೊಳ್ಳಲು ಸಾಧ್ಯವಾಗುತ್ತಿಲ್ಲವಲ್ಲ ಎಂದು ನನಗೆ ಬೇಸರವಾಗಿತ್ತು’ ಎಂದು ಅನುಪ್ರಿಯಾ ಹೇಳಿದ್ದಾರೆ.
ಈ ಸಿನಿಮಾಗಾಗಿ ತಾವು ಮಾಡಿದ ವೈಯಕ್ತಿಕ ಹೂಡಿಕೆಯ ಬಗ್ಗೆಯೂ ಅನುಪ್ರಿಯಾ ಹಂಚಿಕೊಂಡಿದ್ದಾರೆ. ‘ನಾನು ಯುಕೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಮೂರು ವರ್ಷಗಳ ಅವಧಿಯಲ್ಲಿ ಪಾರ್ಟ್-ಟೈಮ್ ಕೆಲಸಗಳನ್ನು ಮಾಡಿ ಸಂಪಾದಿಸಿ ಉಳಿಸಿದ್ದ ಹಣವನ್ನು ಈ ಚಿತ್ರಕ್ಕೆ ಹಾಕಿದ್ದೇನೆ. ನನ್ನ ಜೀವನದ ಸುಂದರ ಘಟ್ಟದಲ್ಲಿ ಮಹಾರಾಜ್ ಜಿ ಅವರ ಪರಿಚಯವಾದಾಗ, ಈ ಪ್ರಾಜೆಕ್ಟ್ ಮಾಡಲೇಬೇಕೆಂದು ನಿರ್ಧರಿಸಿ ರಿಸ್ಕ್ ತೆಗೆದುಕೊಂಡೆ’ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ‘ಹನುಮಾನ್ ಅಂಶ್’ ನಿರ್ಮಾಪಕರ ನಡುವೆ ಭಿನ್ನಾಭಿಪ್ರಾಯ; ತಡವಾಗಿ ಬೆಳಕಿಗೆ ಬಂತು ವಿಷಯ
‘ಡಿವೈನ್ ಡಿಟೂರ್’ ಪುಸ್ತಕವನ್ನು ಆಧರಿಸಿದ ‘ಹನುಮಾನ್ ಅಂಶ್’ ಚಿತ್ರದ ಕಥೆಯಲ್ಲಿ ಶೋಭಿನವ್ ಸತ್ಯ ಅವರು ನೀಮ್ ಕರೋಲಿ ಬಾಬಾ ಪಾತ್ರದಲ್ಲಿ ನಟಿಸಿದ್ದಾರೆ. ತಾಯಿಯ ಮರಣದ ನಂತರ ಆಧ್ಯಾತ್ಮಿಕ ಹಾದಿಯತ್ತ ತಿರುಗುವ ಲಕ್ಷ್ಮೀ ನಾರಾಯಣ್ ಎಂಬ ಯುವಕನ ಪಯಣ ಹಾಗೂ ಬಾಬಾ ಅವರ ಪ್ರೀತಿ, ಕರುಣೆ ಮತ್ತು ನಿಸ್ವಾರ್ಥ ಸೇವೆಯ ಸಂದೇಶಗಳನ್ನು ಚಿತ್ರ ಒಳಗೊಂಡಿದೆ. ತಾರಾಗಣದಲ್ಲಿ ವಿಹಾನ್ ಶೆಡ್ಗೆ, ಚಂದನ್ ಕೆ. ಆನಂದ್, ಪೂರ್ಣಿಮಾ ತಿವಾರಿ, ಅನಿಲ್ ರಸ್ತೋಗಿ ಸೇರಿದಂತೆ ಹಲವರು ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.