ಟಾಲಿವುಡ್ನ ಯುವ ನಟ ತೇಜ ಸಜ್ಜಾ ಅಭಿನಯದ ‘ಹನುಮಾನ್’ (HanuMan) ಸಿನಿಮಾಗೆ ಜನರು ಮೆಚ್ಚುಗೆ ಸೂಚಿಸಿದ್ದಾರೆ. ಚಿತ್ರಮಂದಿರದಲ್ಲಿ ಅಬ್ಬರಿಸಿದ ಈ ಚಿತ್ರ ಈಗ ಒಟಿಟಿಯಲ್ಲೂ ಸದ್ದು ಮಾಡುತ್ತಿದೆ. ವಿಶೇಷ ಏನೆಂದರೆ, ಮೂರು ಬೇರೆ ಬೇರೆ ಒಟಿಟಿ (OTT) ಪ್ಲಾಟ್ಫಾರ್ಮ್ಗಳಲ್ಲಿ ಈ ಸಿನಿಮಾ ಪ್ರಸಾರ ಆಗುತ್ತಿದೆ. ಪ್ರಶಾಂತ್ ವರ್ಮಾ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ತೇಜ ಸಜ್ಜಾ (Teja Sajja) ಜೊತೆ ಅಮೃತಾ ಅಯ್ಯರ್, ವರಲಕ್ಷ್ಮಿ ಶರತ್ ಕುಮಾರ್, ವೆನ್ನೆಲ ಕಿಶೋರ್, ವಿನಯ್ ರೈ, ರಾಜ್ ದೀಪಕ್ ಶೆಟ್ಟಿ ಮುಂತಾದವರು ‘ಹನುಮಾನ್’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
ಮೂರು ಬೇರೆ ಬೇರೆ ದಿನಾಂಕದಲ್ಲಿ ‘ಹನುಮಾನ್’ ಸಿನಿಮಾ ಒಟಿಟಿಗೆ ಕಾಲಿಟ್ಟಿತು. ಮಾರ್ಚ್ 16ರಂದು ‘ಹನುಮಾನ್’ ಚಿತ್ರದ ಹಿಂದಿ ವರ್ಷನ್ ‘ಜಿಯೋ ಸಿನಿಮಾ’ ಒಟಿಟಿಯಲ್ಲಿ ಲಭ್ಯವಾಯಿತು. ಬಳಿಕ ಮಾರ್ಚ್ 18ರಂದು ‘ಜೀ 5’ ಒಟಿಟಿಯಲ್ಲಿ ತೆಲುಗು ವರ್ಷನ್ ವೀಕ್ಷಣೆಗೆ ಲಭ್ಯವಾಯಿತು. ಏಪ್ರಿಲ್ 5ರಿಂದ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಮೂಲಕ ಕನ್ನಡ, ಮಲಯಾಳ ಹಾಗೂ ತಮಿಳು ವರ್ಷನ್ನ ಪ್ರಸಾರ ಆರಂಭವಾಗಲಿದೆ.
Tamil, Malayalam and Kannada versions of #HanuMan premieres April 5th on @DisneyPlusHS 😃#HanuManOnHotstar pic.twitter.com/PQvJWoTvZb
— Prasanth Varma (@PrasanthVarma) March 26, 2024
ಸೂಪರ್ ಹೀರೋ ಕಥೆಯನ್ನು ‘ಹನುಮಾನ್’ ಸಿನಿಮಾ ಹೊಂದಿದೆ. ಅಂಜನಾದ್ರಿ ಎಂಬ ಕಾಲ್ಪನಿಕ ಊರಿನಲ್ಲಿ ಆಂಜನೇಯನ ಆಶೀರ್ವಾದದಿಂದ ಸೂಪರ್ ಪವರ್ ಪಡೆಯುವ ಹಳ್ಳಿ ಯುವಕನ ಕಥೆಯನ್ನು ಈ ಸಿನಿಮಾದಲ್ಲಿ ಹೇಳಲಾಗಿದೆ. ಹನುಮಂತು ಎಂಬ ಪಾತ್ರಕ್ಕೆ ತೇಜ ಸಜ್ಜಾ ಬಣ್ಣ ಹಚ್ಚಿದ್ದಾರೆ. ಸೂಪರ್ ಹೀರೋ ಆಗಿ ಅವರು ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಿಂದ ಅವರ ಬೇಡಿಕೆ ಮತ್ತು ಸಂಭಾವನೆ ಹೆಚ್ಚಾಗಿದೆ.
ಇದನ್ನೂ ಓದಿ: ಅಮಿತ್ ಶಾ ಭೇಟಿ ಮಾಡಿದ ‘ಹನುಮಾನ್’ ತಂಡ; ಸಿಕ್ತು ಗೃಹ ಸಚಿವರ ಮೆಚ್ಚುಗೆ
ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಅನೇಕ ಸ್ಟಾರ್ ನಟರ ಸಿನಿಮಾಗಳ ಎದುರಿನಲ್ಲಿ ‘ಹನುಮಾನ್’ ಸಿನಿಮಾ ಬಿಡುಗಡೆ ಆಗಿತ್ತು. ಸ್ಟಾರ್ ಹೀರೋಗಳ ಸಿನಿಮಾಗಳನ್ನು ಹಿಂದಿಕ್ಕಿ ಈ ಸಿನಿಮಾ ಸೂಪರ್ ಹಿಟ್ ಆಯಿತು. ವಿಶ್ವಾದ್ಯಂತ 300 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಈ ಸಿನಿಮಾ ಗೆದ್ದು ಬೀಗಿದೆ. ಈಗ ಈ ಸಿನಿಮಾಗೆ ಸೀಕ್ವೆಲ್ ಸಿದ್ಧವಾಗುತ್ತಿದ್ದು, ಅದಕ್ಕೆ ‘ಜೈ ಹನುಮಾನ್’ ಎಂದು ಶೀರ್ಷಿಕೆ ಇಡಲಾಗಿದೆ. ಈ ಸಿನಿಮಾದಲ್ಲಿ ಘಟಾನುಘಟಿ ಕಲಾವಿದರು ನಟಿಸುತ್ತಾರೆ ಎನ್ನಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 3:22 pm, Tue, 26 March 24