
ಎಂ.ಎಸ್. ರಾಜು ನಿರ್ದೇಶನದ ಮಿಸ್ಟಿಕಲ್ ಸೂಪರ್ ನ್ಯಾಚುರಲ್ ಥ್ರಿಲ್ಲರ್ ‘ಅಗಾಧ’ ಚಿತ್ರ ಒಟಿಟಿಯಲ್ಲಿ ಗಮನ ಸೆಳೆಯುತ್ತಿದೆ. ಇತ್ತೀಚೆಗೆ ಜೀ 5 ಒಟಿಟಿ ಒಟಿಟಿ ವೇದಿಕೆಯಲ್ಲಿ ಈ ಸಿನಿಮಾದ ಡಿಜಿಟಲ್ ಪ್ರೀಮಿಯರ್ ಆರಂಭ ಆಯಿತು. ರಹಸ್ಯ, ಆಧ್ಯಾತ್ಮಿಕತೆ ಹಾಗೂ ಅಲೌಕಿಕ ಶಕ್ತಿಗಳ ರೋಚಕ ಲೋಕವನ್ನು ಈ ಸಿನಿಮಾ ಅನಾವರಣಗೊಳಿಸಿದೆ. ಕಾಮಾಕ್ಷಿ ಭಾಸ್ಕರ್ಲ ಅವರು ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅವರ ಜೊತೆ ಶ್ರವಣ್ ರೆಡ್ಡಿ, ಉಲ್ಕಾ ಗುಪ್ತಾ, ಜೋವಿಕಾ, ಭಾನು ಚಂದರ್, ವನಿತಾ ವಿಜಯಕುಮಾರ್, ರೋಷನ್ ಬಶೀರ್ ಮುಂತಾದವರು ಅಭಿನಯಿಸಿದ್ದಾರೆ.
ಮಹಾದೇವಿ ಎಂಬ ಆಧ್ಯಾತ್ಮಿಕ ಶಕ್ತಿಯುಳ್ಳ ಯುವತಿಯ ಸುತ್ತ ಈ ಸಿನಿಮಾದ ಕಥಾಹಂದರ ಸಾಗುತ್ತದೆ. ಆಕೆಯ ಜೀವನದಲ್ಲಿ ಸಂಭವಿಸುವ ನಿಗೂಢ ಸಾವುಗಳು ಹಾಗೂ ಸೋದರಸಂಬಂಧಿಯ ಅನಿರೀಕ್ಷಿತ ಆತ್ಮಹತ್ಯೆಯು ಕಥೆಗೆ ದಿಢೀರ್ ತಿರುವು ನೀಡುತ್ತವೆ. ಈ ದುರಂತಗಳ ಹಿಂದಿನ ಸತ್ಯವನ್ನು ಭೇದಿಸಲು ಹೊರಡುವ ಆಕೆ, ಅಂತಿಮವಾಗಿ ನಿಷೇಧಿತ ಅರಣ್ಯದ ಗುಹೆಯೊಂದನ್ನು ಪ್ರವೇಶಿಸುತ್ತಾಳೆ. ಅಲ್ಲಿ ಆಕೆಗೆ ‘ಅಗಾಧ’ ಎಂಬ ಅಗೋಚರ, ಅಲೌಕಿಕ ಶಕ್ತಿಯ ಮುಖಾಮುಖಿಯಾಗುತ್ತದೆ. ನಂಬಿಕೆ, ಆತಂಕ, ಭಯ ಹಾಗೂ ಅಜ್ಞಾತ ಲೋಕದ ಗಡಿಯ ನಡುವೆ ಸಾಗುವ ಆಕೆಯ ಈ ಅನ್ವೇಷಣೆಯೇ ಚಿತ್ರದ ಸಾರಾಂಶ.
ನಿರ್ದೇಶಕ ಎಂ.ಎಸ್. ರಾಜು ಅವರು ಸೂಪರ್ ನ್ಯಾಚುರಲ್ ಹಾರರ್, ಮಿಸ್ಟ್ರಿ ಹಾಗೂ ಫ್ಯಾಂಟಸಿ ಅಂಶಗಳನ್ನು ಸಮತೋಲನದಲ್ಲಿ ಇಟ್ಟುಕೊಂಡು ವಿಶಿಷ್ಟ ಕಥಾಹಂದರವನ್ನು ಹೆಣೆದಿದ್ದಾರೆ. ಮಾಮೂಲಿ ಬೆದರಿಸುವ ತಂತ್ರಗಳಿಗೆ ಸೀಮಿತವಾಗದೆ, ಪುರಾಣ ಪ್ರೇರಿತ ಅಂಶಗಳು ಹಾಗೂ ನಿಗೂಢ ಸನ್ನಿವೇಶಗಳ ಮೂಲಕ ನಿರೂಪಣೆಯನ್ನು ಕಟ್ಟಿಕೊಡಲಾಗಿದೆ. ನಾಯಕಿಯ ಜೊತೆಯಲ್ಲೇ ಪ್ರೇಕ್ಷಕರೂ ಒಂದೊಂದೇ ರಹಸ್ಯಗಳನ್ನು ಭೇದಿಸುತ್ತಾ ಸಾಗುವಂತೆ ದೃಶ್ಯಗಳನ್ನು ವಿನ್ಯಾಸಗೊಳಿಸಲಾಗಿದ್ದು, ಕಾಮಾಕ್ಷಿ ಭಾಸ್ಕರ್ಲ ಅವರು ಉತ್ತಮ ಅಭಿನಯದಿಂದ ಮಹಾದೇವಿ ಪಾತ್ರಕ್ಕೆ ಜೀವ ತುಂಬಿದ್ದಾರೆ.
ಈ ಸಿನಿಮಾಗೆ ತಾಂತ್ರಿಕವಾಗಿಯೂ ಉತ್ತಮ ಬೆಂಬಲ ದೊರಕಿದೆ. ನಾನಿ ಚಮಿಡಿಶೆಟ್ಟಿ ಅವರ ಛಾಯಾಗ್ರಹಣ, ರಾಕೇಶ್ ವೆಂಕಟಾಪುರಂ ಅವರ ಸಂಗೀತ ಹಾಗೂ ಜುನೈದ್ ಸಿದ್ದಿಕಿ ಅವರ ಸಂಕಲನದಿಂದ ಚಿತ್ರದ ರೋಚಕತೆ ಹೆಚ್ಚಿದೆ. ಕಾಶಿ ವಿಶಾಲಾಕ್ಷಿ ಬಲುಸು ನಿರ್ಮಾಣದ ಈ ಚಿತ್ರವು ಚಿತ್ರಮಂದಿರಗಳಲ್ಲಿ ತನ್ನ ದೈವಿಕ ರಹಸ್ಯ ಮತ್ತು ದಟ್ಟ ಅರಣ್ಯದ ರೋಚಕತೆಯಿಂದ ಸದ್ದು ಮಾಡಿತ್ತು.
ಇದನ್ನೂ ಓದಿ: ಒಟಿಟಿಗೆ ಮೆಗಾಸ್ಟಾರ್ ಪದಾರ್ಪಣೆ, ಪಡೆಯಲಿದ್ದಾರೆ ಭರ್ಜರಿ ಸಂಭಾವನೆ
ಇದೀಗ ‘ಜೀ 5 ತೆಲುಗು’ ಒಟಿಟಿಯಲ್ಲಿ ಪ್ರಸಾರವಾಗುತ್ತಿರುವ ಈ ಸಿನಿಮಾ ಆಧ್ಯಾತ್ಮಿಕ ಥ್ರಿಲ್ಲರ್ ಹಾಗೂ ಮಿಸ್ಟ್ರಿ ಜಾನರ್ ಇಷ್ಟಪಡುವ ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಿದೆ. ಚಿತ್ರಮಂದಿರದಲ್ಲಿ ಮಿಸ್ ಮಾಡಿಕೊಂಡಿದ್ದವರು ಮನೆಯಲ್ಲೇ ಕುಳಿತು ಈ ರೋಚಕ ಸಿನಿಮಾವನ್ನು ವೀಕ್ಷಿಸಬಹುದಾಗಿದೆ. ಈ ಚಿತ್ರವನ್ನು ತೆಲುಗು ಮಾತ್ರವಲ್ಲದೇ ಕನ್ನಡದಲ್ಲೂ ವೀಕ್ಷಿಸಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.