CSpace: ಕೇರಳದಲ್ಲಿ ಪ್ರಾರಂಭವಾಗಲಿದೆ ಸರ್ಕಾರಿ ಸ್ವಾಮ್ಯದ ಓಟಿಟಿ; ಏನಿದರ ವಿಶೇಷ? ಇಲ್ಲಿದೆ ನೋಡಿ
Kerala | OTT: ದೇಶದಲ್ಲೇ ಮೊದಲ ಬಾರಿಗೆ ಕೇರಳದಲ್ಲಿ ಸರ್ಕಾರಿ ಸ್ವಾಮ್ಯದ ಓವರ್-ದಿ-ಟಾಪ್ ಅರ್ಥಾತ್ ಓಟಿಟಿ ವೇದಿಕೆಯನ್ನು ಆರಂಭಿಸಲಾಗುತ್ತಿದೆ. ನವೆಂಬರ್ 1 ರಂದು ಇದು ಆರಂಭವಾಗಲಿದ್ದು, ಚಲನಚಿತ್ರ ಪ್ರೇಮಿಗಳಿಗೆ ಅವರ ಆಯ್ಕೆಯ ಚಲನಚಿತ್ರಗಳು, ಕಿರುಚಿತ್ರಗಳು ಮತ್ತು ಸಾಕ್ಷ್ಯಚಿತ್ರಗಳ ಸರಣಿಯನ್ನು ನೋಡುವ ಅವಕಾಶ ಒದಗಿಸಲಿದೆ.
ದೇಶದಲ್ಲೇ ಮೊದಲ ಬಾರಿಗೆ ಕೇರಳದಲ್ಲಿ ಸರ್ಕಾರಿ ಸ್ವಾಮ್ಯದ ಓವರ್-ದಿ-ಟಾಪ್ ಅರ್ಥಾತ್ ಓಟಿಟಿ ವೇದಿಕೆಯನ್ನು ಆರಂಭಿಸಲಾಗುತ್ತಿದೆ. ನವೆಂಬರ್ 1 ರಂದು ಇದು ಆರಂಭವಾಗಲಿದ್ದು, ಚಲನಚಿತ್ರ ಪ್ರೇಮಿಗಳಿಗೆ ಅವರ ಆಯ್ಕೆಯ ಚಲನಚಿತ್ರಗಳು, ಕಿರುಚಿತ್ರಗಳು ಮತ್ತು ಸಾಕ್ಷ್ಯಚಿತ್ರಗಳ ಸರಣಿಯನ್ನು ನೋಡುವ ಅವಕಾಶ ಒದಗಿಸಲಿದೆ. ಬುಧವಾರದಂದು ಕಲಾಭವನ ಥಿಯೇಟರ್‌ನಲ್ಲಿ ನಡೆದ ಸಮಾರಂಭದಲ್ಲಿ ಕೇರಳದ ಸಾಂಸ್ಕೃತಿಕ ವ್ಯವಹಾರಗಳ ಸಚಿವ ಸಾಜಿ ಚೆರಿಯನ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯ ಸರ್ಕಾರದ ಪರವಾಗಿ ಕೇರಳ ರಾಜ್ಯ ಚಲನಚಿತ್ರ ಅಭಿವೃದ್ಧಿ ನಿಗಮದ (ಕೆಎಸ್‌ಎಫ್‌ಡಿಸಿ) ಉಪಕ್ರಮವಾಗಿರುವ ಒಟಿಟಿ ಪ್ಲಾಟ್‌ಫಾರ್ಮ್ ‘ಸಿಸ್ಪೇಸ್’ (CSpace OTT) ಅನ್ನು ಘೋಷಿಸಿದರು. ಅಧ್ಯಕ್ಷತೆ ವಹಿಸಿದ್ದ ಕೆಎಸ್‌ಎಫ್‌ಡಿಸಿ ಅಧ್ಯಕ್ಷ ಶಾಜಿ ಎನ್ ಕರುಣ್ ಮಾತನಾಡಿ, ಹಲವಾರು ವಿಶಿಷ್ಟ ವೈಶಿಷ್ಟ್ಯಗಳನ್ನು ಹೊಂದಿರುವ ಸಿಸ್ಪೇಸ್, ಕೇರಳ ರಾಜ್ಯ ರಚನೆಯಾದ ದಿನವಾದ ನವೆಂಬರ್ 1ರಂದೇ ಅನಾವರಣವಾಗಲಿದೆ. ಸರ್ಕಾರಿ ಸ್ವಾಮ್ಯದ ಓಟಿಟಿ ಭಾರತದಲ್ಲೇ ಮೊದಲು. ಇದು ಮಲಯಾಳಂ ಚಿತ್ರರಂಗದ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದಿದ್ದಾರೆ. (Source)
ಹೊಸ ಓಟಿಟಿಯು ಈಗಿರುವ ಚಲನಚಿತ್ರ ವ್ಯವಹಾರಕ್ಕೆ ಬಿಕ್ಕಟ್ಟನ್ನು ಸೃಷ್ಟಿಸಿ ಸಮಸ್ಯೆ ಮಾಡುವುದಿಲ್ಲ ಎಂದು ಭರವಸೆ ನೀಡಿದ ಚೆರಿಯನ್, ಚಲನಚಿತ್ರಗಳು ಥಿಯೇಟರ್‌ನಲ್ಲಿ ಬಿಡುಗಡೆಯಾದ ನಂತರವೇ ‘CSpace’ನಲ್ಲಿ ಬಿತ್ತರವಾಗಲಿದೆ ಎಂದಿದ್ದಾರೆ. ‘‘CSpace ಲಾಭ ಹಂಚಿಕೆ, ಪಾರದರ್ಶಕತೆ ಮತ್ತು ತಾಂತ್ರಿಕ ಗುಣಮಟ್ಟದಲ್ಲಿ ರಾಜಿಯಾಗುವುದಿಲ್ಲ ಎಂದಿರುವ ಅವರು, ಲಾಭದ ದೃಷ್ಟಿಯನ್ನು ಗಮನಿಸದೇ ಕಲಾತ್ಮಕ ಮೌಲ್ಯದೊಂದಿಗೆ ಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಜತೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಮತ್ತು ಪ್ರಶಸ್ತಿ ವಿಜೇತ ಚಲನಚಿತ್ರಗಳು, ಕೇರಳದ ವಾರ್ಷಿಕ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಗಮನ ಸೆಳೆದ (IFFK) ಕಿರುಚಿತ್ರಗಳು ಮತ್ತು ಸಾಕ್ಷ್ಯಚಿತ್ರಗಳನ್ನು ಬಿತ್ತರಿಸಲಾಗುವುದು ಎಂದಿದ್ದಾರೆ.
‘ಸಿಸ್ಪೇಸ್’ನಲ್ಲಿ ಸ್ಟ್ರೀಮ್ ಮಾಡಲು ಚಲನಚಿತ್ರಗಳ ನೋಂದಣಿಯನ್ನು ಜೂನ್ 1 ರಿಂದ ಪ್ರಾರಂಭಿಸಲಾಗುತ್ತಿದ್ದು, ಇದಕ್ಕಾಗಿ ಚಿತ್ರಾಂಜಲಿ ಸ್ಟುಡಿಯೋ ಮತ್ತು ರಾಜ್ಯ ರಾಜಧಾನಿಯಲ್ಲಿರುವ ಕೆಎಸ್‌ಎಫ್‌ಡಿಸಿಯ ಕೇಂದ್ರ ಕಚೇರಿಯಲ್ಲಿ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ. ಕೆಎಸ್‌ಎಫ್‌ಡಿಸಿಯನ್ನು ಆಧುನೀಕರಿಸುವ ಯೋಜನೆಗಳ ಕುರಿತು ಮಾತನಾಡಿದ ಅವರು ಸರ್ಕಾರಿ ಸ್ವಾಮ್ಯದ ಚಿತ್ರಮಂದಿರಗಳ ನವೀಕರಣಕ್ಕೆ ಸಾಕಷ್ಟು ಹಣವನ್ನು ಒದಗಿಸಲಾಗುವುದು. ಚಿತ್ರಾಂಜಲಿ ಸ್ಟುಡಿಯೊವನ್ನು ಚಲನಚಿತ್ರ ನಿರ್ಮಾಪಕರ ನೆಚ್ಚಿನ ಶೂಟಿಂಗ್ ಸ್ಥಳವಾಗಿ ಪರಿವರ್ತಿಸುವ ಯೋಜನೆಗೆ ಈಗಾಗಲೇ ಅಗತ್ಯ ಹಣವನ್ನು ಒದಗಿಸಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸದ್ದಿಲ್ಲದೆ ಅಮೇಜಾನ್ ಪ್ರೈಮ್ ವಿಡಿಯೋಗೆ ಕಾಲಿಟ್ಟ ‘ಕೆಜಿಎಫ್ 2’; ಸಿನಿಮಾ ನೋಡೋಕೆ ಹಲವು ಷರತ್ತು
ಡಿಜಿಟಲ್ ಯುಗದಲ್ಲಿ ಓಟಿಟಿ ಜಾಗತಿಕ ಆಕರ್ಷಣೆಯನ್ನು ಹೊಂದಿದೆ ಎಂದಿರುವ KSDFC ಅಧ್ಯಕ್ಷ ಕರುಣ್, ಭಾಷೆಗಳನ್ನು ಮೀರಿ ಚಿತ್ರಗಳು ಜನರನ್ನು ತಲುಪಲು ಇದರಿಂದ ಸಾಧ್ಯ ಎಂದಿದ್ದಾರೆ. ಕೇರಳ ತನ್ನದೇ ಆದ ಓಟಿಟಿ ಪ್ಲಾಟ್‌ಫಾರ್ಮ್ ಅನ್ನು ಪ್ರಾರಂಭಿಸುವ ಮೂಲಕ ಇತರ ರಾಜ್ಯಗಳಿಗೆ ಮಾದರಿಯಾಗಿದೆ ಎಂದೂ ಅವರು ಹೇಳಿದ್ದಾರೆ.
1975 ರಲ್ಲಿ ಸ್ಥಾಪನೆಯಾದ ಕೆಎಸ್‌ಎಫ್‌ಡಿಸಿ(KSFDC) ಭಾರತದಲ್ಲಿ ಚಲನಚಿತ್ರ ಅಭಿವೃದ್ಧಿಗಾಗಿ ಸ್ಥಾಪನೆಯಾದ ಮೊದಲ ಸಾರ್ವಜನಿಕ ವಲಯದ ನಿಗಮವಾಗಿದೆ. ಇದೀಗ ಸರ್ಕಾರಿ ಸ್ವಾಮ್ಯದ ಓಟಿಟಿಯ ಮೂಲಕ ಹೊಸ ಪ್ರಯತ್ನಕ್ಕೆ ಮುಂದಾಗಿರುವ ಕೇರಳವು ಚಲನಚಿತ್ರ ಕ್ಷೇತ್ರದಲ್ಲಿ ಹೊಸ ಪ್ರಯೋಗಕ್ಕೆ ಮುಂದಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ