ಆಗಸ್ಟ್ 6ರಂದು ‘ಬಿಗ್ ಬಾಸ್ ಕನ್ನಡ ಒಟಿಟಿ’ (Bigg Boss Kannada OTT) ಶೋ ಆರಂಭ ಆಗಿತ್ತು. ಒಟ್ಟು 16 ಸ್ಪರ್ಧಿಗಳು ದೊಡ್ಮನೆಯಲ್ಲಿ ಒಂದು ವಾರ ಕಳೆದಿದ್ದಾರೆ. ಮೊದಲ ವಾರದ ಎಲಿಮಿನೇಷನ್ನಲ್ಲಿ (Bigg Boss Elimination) ಯಾರು ಬಿಗ್ ಬಾಸ್ ಮನೆಯಿಂದ ಹೊರ ನಡೆಯುತ್ತಾರೆ ಎಂಬುದನ್ನು ತಿಳಿಯುವ ಸಮಯ ಬಂದಿದೆ. ಮೊದಲ ವಾರದ ಪಂಚಾಯಿತಿ ನಡೆಸಿಕೊಡಲು ಕಿಚ್ಚ ಸುದೀಪ್ (Kichcha Sudeep) ಸಜ್ಜಾಗಿದ್ದಾರೆ. ಪ್ರತಿ ಬಾರಿ ಅವರು ವೀಕೆಂಡ್ ಎಪಿಸೋಡ್ನಲ್ಲಿ ಕಾಣಿಸಿಕೊಳ್ಳುವಾಗ ಅವರ ಸೂಟ್ ಗಮನ ಸೆಳೆಯುತ್ತದೆ. ಇಂದು (ಆಗಸ್ಟ್ 13) ಕೂಡ ಅವರು ಖಡಕ್ ಆಗಿ ರೆಡಿಯಾಗಿ ಬಂದಿದ್ದಾರೆ. ಎಂದಿನ ಲವಲವಿಕೆಯಲ್ಲಿ ಪಂಚಾಯಿತಿ ನಡೆಸಿಕೊಟ್ಟಿದ್ದಾರೆ. ವೂಟ್ ಸೆಲೆಕ್ಟ್ ಮೂಲಕ ಸಂಜೆ 7 ಗಂಟೆಗೆ ಈ ಎಪಿಸೋಡ್ ಪ್ರಸಾರ ಆಗಲಿದೆ.
ಕಿರುತೆರೆ, ಸಿನಿಮಾ, ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆದ ವ್ಯಕ್ತಿಗಳಿಗೆ ‘ಬಿಗ್ ಬಾಸ್ ಕನ್ನಡ ಒಟಿಟಿ’ಯಲ್ಲಿ ಸ್ಪರ್ಧಿಸುವ ಅವಕಾಶ ಸಿಕ್ಕಿದೆ. ಸೋನು ಶ್ರೀನಿವಾಸ್ ಗೌಡ, ಸ್ಫೂರ್ತಿ ಗೌಡ, ರಾಕೇಶ್ ಅಡಿಗ, ಆರ್ಯವರ್ಧನ್ ಗುರೂಜಿ, ಸೋಮಣ್ಣ ಮಾಚಿಮಾಡ, ಸಾನ್ಯಾ ಅಯ್ಯರ್, ಯಶ್ವಂತ್, ನಂದಿನಿ, ರೂಪೇಶ್ ಶೆಟ್ಟಿ, ಚೈತ್ರಾ ಹಳ್ಳಿಕೇರಿ, ಅರ್ಜುನ್ ರಮೇಶ್, ಉದಯ್ ಸೂರ್ಯ, ಜಯಶ್ರೀ ಆರಾಧ್ಯ, ಕಿರಣ್ ಯೋಗೇಶ್ವರ್, ಅಕ್ಷತಾ ಕುಕ್ಕಿ, ಲೋಕೇಶ್ ಅವರು ಸ್ಪರ್ಧಿಸುತ್ತಿದ್ದಾರೆ.
ಆರು ವಾರಗಳ ಕಾಲ ‘ಬಿಗ್ ಬಾಸ್ ಕನ್ನಡ ಒಟಿಟಿ’ ಶೋ ನಡೆಯಲಿದೆ. ಮೊದಲ ವಾರದಲ್ಲಿ ಸಾಕಷ್ಟು ಸಂಗತಿಗಳು ನಡೆದಿವೆ. ಎಲ್ಲ ಸ್ಪರ್ಧಿಗಳು ತಮ್ಮ ಖಾಸಗಿ ಜೀವನದ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸಿಕ್ಕಾಪಟ್ಟೆ ಎಮೋಷನಲ್ ಘಟನೆಗಳಿಗೆ ಈ ವಾರ ಸಾಕ್ಷಿ ಆಗಿದೆ. ಜೊತೆಗೆ ಒಂದಷ್ಟು ಕಿರಿಕ್ಗಳು ಸಂಭವಿಸಿವೆ. ಎಂದಿನಂತೆ ನಾಮಿನೇಷನ್ ಕೂಡ ನಡೆದಿದೆ. ಯಾರು ಎಲಿಮಿನೇಟ್ ಆಗುತ್ತಾರೆ ಎಂಬ ಪ್ರಶ್ನೆಗೆ ಶೀಘ್ರವೇ ಉತ್ತರ ಸಿಗಲಿದೆ.
ಕಿಚ್ಚ ಸುದೀಪ್ ಅವರು ಸಿನಿಮಾ ಮತ್ತು ಬಿಗ್ ಬಾಸ್ ಎರಡಕ್ಕೂ ಸಮಯ ಹೊಂದಿಸುತ್ತಿದ್ದಾರೆ. ಸಿನಿಮಾ ಕೆಲಸಗಳ ಸಲುವಾಗಿ ಅವರು ಎಷ್ಟೇ ಬ್ಯುಸಿ ಇದ್ದರೂ ಕೂಡ ಬಿಗ್ ಬಾಸ್ನ ವಾರಾಂತ್ಯದ ಶೂಟಿಂಗ್ಗೆ ಎಂದಿಗೂ ಚಕ್ಕರ್ ಹಾಕುವುದಿಲ್ಲ. ಎಲ್ಲೇ ಇದ್ದರೂ, ಎಷ್ಟೇ ಕಷ್ಟ ಆದರೂ ಬಂದು ಪಂಚಾಯಿತಿ ನಡೆಸಿಕೊಡುತ್ತಾರೆ. ಅವರನ್ನು ನೋಡಲು ಪ್ರತಿ ವಾರ ಅಭಿಮಾನಿಗಳು ಕಾದಿರುತ್ತಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.