Naseeruddin Shah: ‘ಹೊಸ ಧರ್ಮ ಸ್ಥಾಪಿಸಲು ಅಕ್ಬರ್ ಪ್ರಯತ್ನಿಸಿದ್ದ ಎಂಬುದು ನಾನ್ ಸೆನ್ಸ್’: ನಟ ನಸಿರುದ್ದೀನ್ ಷಾ
Akbar | Taj Divided By Blood: ಅಕ್ಬರ್ ಹೊಸ ಧರ್ಮವನ್ನು ಸ್ಥಾಪಿಸಲು ಪ್ರಯತ್ನಿಸಿದ್ದ ಎಂಬ ಮಾತಿದೆ. ಈ ಬಗ್ಗೆ ಪಠ್ಯ ಪುಸ್ತಕಗಳಲ್ಲೂ ಉಲ್ಲೇಖ ಆಗಿದೆ. ಅದನ್ನು ನಸೀರುದ್ದೀನ್ ಷಾ ಅವರು ಅಲ್ಲಗಳೆದಿದ್ದಾರೆ.
ಹಿರಿಯ ನಟ ನಸೀರುದ್ದೀನ್ ಷಾ (Naseeruddin Shah) ಅವರು ಅಭಿನಯದ ಜೊತೆಗೆ ತಮ್ಮ ನೇರ ನಡೆ-ನುಡಿಯ ಕಾರಣದಿಂದ ಗುರುತಿಸಿಕೊಂಡಿದ್ದಾರೆ. ಆಗಾಗ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಾರೆ. ಅದರಿಂದ ಅವರು ಕೆಲವರ ವಿರೋಧ ಕಟ್ಟಿಕೊಂಡಿದ್ದೂ ಉಂಟು. ಪ್ರಸ್ತುತ ಅವರು ‘ತಾಜ್: ಡಿವೈಡೆಡ್ ಬೈ ಬ್ಲಡ್’ (Taj Divided By Blood) ವೆಬ್ ಸರಣಿಯಲ್ಲಿ ಅಭಿನಯಿಸಿದ್ದಾರೆ. ಇದು ಮೊಘಲರ ಕುರಿತಾದ ವೆಬ್ ಸಿರೀಸ್. ಇದರಲ್ಲಿ ನಸೀರುದ್ದೀನ್ ಷಾ ಅವರು ಅಕ್ಬರ್ನ ಪಾತ್ರವನ್ನು ಮಾಡಿದ್ದಾರೆ. ‘ಜೀ5’ ಮೂಲಕ ಮಾರ್ಚ್ 3ರಿಂದ ಈ ವೆಬ್ ಸರಣಿ ವೀಕ್ಷಣೆಗೆ ಲಭ್ಯವಾಗಲಿದೆ. ಈ ಪ್ರಯುಕ್ತ ಅನೇಕ ಮಾಧ್ಯಮಗಳಿಗೆ ನಸೀರುದ್ದೀನ್ ಷಾ ಸಂದರ್ಶನ ನೀಡುತ್ತಿದ್ದಾರೆ. ಈ ವೇಳೆ ಅವರು ಅಕ್ಬರ್ (Akbar) ಬಗ್ಗೆ ಒಂದಷ್ಟು ಮಾತುಗಳನ್ನು ಆಡಿದ್ದಾರೆ.
ಹೊಸ ಧರ್ಮವನ್ನು ಸ್ಥಾಪಿಸಲು ಅಕ್ಬರ್ ಪ್ರಯತ್ನಿಸಿದ್ದ ಎಂಬ ಮಾತಿದೆ. ಈ ಬಗ್ಗೆ ಪಠ್ಯ ಪುಸ್ತಕಗಳಲ್ಲೂ ಉಲ್ಲೇಖ ಆಗಿದೆ. ಅದನ್ನು ನಸೀರುದ್ದೀನ್ ಷಾ ಅವರು ಅಲ್ಲಗಳೆದಿದ್ದಾರೆ. ‘ಆಕ್ಬರ್ ಓರ್ವ ಹೃದಯವಂತ, ಸಭ್ಯ, ವಿಶಾಲ ಮನೋಭಾವದ ವ್ಯಕ್ತಿ ಆಗಿದ್ದ. ಆತ ಹೊಸ ಧರ್ಮ ಸ್ಥಾಪಿಸಲು ಬಯಸಿದ್ದ ಎಂಬುದೊಂದೆ ಆತನ ಮೇಲಿರುವ ಕಪ್ಪು ಚುಕ್ಕಿ. ಆದರೆ ಇತಿಹಾಸದ ಪುಸ್ತಕದಲ್ಲಿ ನಾವು ಓದಿದ ಈ ಮಾಹಿತಿ ಶುದ್ಧ ನಾನ್ ಸೆನ್ಸ್’ ಎಂದು ನಸೀರುದ್ದೀನ್ ಷಾ ಹೇಳಿದ್ದಾರೆ.
ಇದನ್ನೂ ಓದಿ:ತಾಲಿಬಾನ್ ಪರ ಇರುವ ಭಾರತದ ಮುಸ್ಲಿಮರಿಗೆ ನಟ ನಸೀರುದ್ದೀನ್ ಷಾ ಛೀಮಾರಿ; ವಿಡಿಯೋ ವೈರಲ್
ಅಕ್ಬರ್ ಬಳಿಕ ಆತನ ಮೂವರು ಮಕ್ಕಳ ಪೈಕಿ ಸಿಂಹಾಸನದ ಜವಾಬ್ದಾರಿ ಹೊರುವವರು ಯಾರು ಎಂಬುದನ್ನು ತೀರ್ಮಾನಿಸುವ ಸಮಯ ಬರುತ್ತದೆ. ವಯಸ್ಸಿನಲ್ಲಿ ಯಾರು ಹಿರಿಯರು ಎಂಬುದರ ಬದಲಿಗೆ ಸಾಮರ್ಥ್ಯದ ಆಧಾರದಲ್ಲಿ ಉತ್ತಾಧಿಕಾರಿಯನ್ನು ಆಯ್ಕೆ ಮಾಡಲು ಅಕ್ಬರ್ ಮುಂದಾಗುತ್ತಾನೆ. ಆ ಕಥೆ ‘ತಾಜ್: ಡಿವೈಡೆಡ್ ಬೈ ಬ್ಲಡ್’ ವೆಬ್ ಸೀರಿಸ್ನಲ್ಲಿದೆ. ನಸೀರುದ್ದೀನ್ ಷಾ ಜೊತೆ ಹಲವು ಕಲಾವಿದರು ಅಭಿನಯಿಸಿದ್ದಾರೆ. ಸಲೀಂ ಪಾತ್ರದಲ್ಲಿ ಆಶಿಮ್ ಗುಲಾಟಿ, ಮುರಾದ್ ಪಾತ್ರದಲ್ಲಿ ತಹಾ ಷಾ, ಅನಾರ್ಕಲಿ ಪಾತ್ರದಲ್ಲಿ ಅದಿತಿ ರಾವ್ ಹೈದರಿ, ಜೋಧಾ ಬಾಯ್ ಆಗಿ ಸಂಧ್ಯಾ ಮೃದುಲ್ ಅವರು ನಟಿಸಿದ್ದಾರೆ.
ಇದನ್ನೂ ಓದಿ: ನಾಸಿರುದ್ದೀನ್ ಶಾ ಜನ್ಮದಿನ: ಕನ್ನಡದಲ್ಲೂ ನಟಿಸಿದ ಈ ಕಲಾವಿದ ಮಾಡಿಕೊಂಡ ವಿವಾದಗಳು ಒಂದೆರೆಡಲ್ಲ
‘ನಾದಿರ್ ಷಾ, ತೈಮೂರ್ ಮುಂತಾದವರು ಭಾರತವನ್ನು ಲೂಟಿ ಮಾಡಲು ಬಂದರು. ಆದರೆ ಮೊಘಲರು ಲೂಟಿ ಮಾಡಲು ಬರಲಿಲ್ಲ. ಈ ನೆಲವನ್ನು ತಮ್ಮ ಮನೆಯಾಗಿಸಿಕೊಳ್ಳಲು ಮೊಘಲರು ಬಂದರು. ಅದನ್ನೇ ಅವರು ಮಾಡಿದ್ದು. ಅವರ ಕೊಡುಗೆಯನ್ನು ಯಾರು ತೆಗೆದುಹಾಕಲು ಸಾಧ್ಯ?’ ಎಂದು ಮತ್ತೊಂದು ಸಂದರ್ಶನದಲ್ಲಿ ನಸೀರುದ್ದೀನ್ ಷಾ ಪ್ರಶ್ನಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.