ನಾಸಿರುದ್ದೀನ್ ಶಾ ಜನ್ಮದಿನ: ಕನ್ನಡದಲ್ಲೂ ನಟಿಸಿದ ಈ ಕಲಾವಿದ ಮಾಡಿಕೊಂಡ ವಿವಾದಗಳು ಒಂದೆರೆಡಲ್ಲ
Naseeruddin Shah Birthday: ಬಾಲಿವುಡ್ ನಟರ ಬಗ್ಗೆ ಮತ್ತು ಸಮಾಜದ ಆಗುಹೋಗುಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುವಲ್ಲಿ ನಾಸಿರುದ್ದೀನ್ ಶಾ ಎಂದಿಗೂ ಹಿಂಜರಿಕೆ ಮಾಡಿಕೊಂಡಿಲ್ಲ. ಅನೇಕರನ್ನು ಅವರು ಕಟು ಮಾತುಗಳಿಂದ ಟೀಕಿಸಿದ್ದುಂಟು.
ಭಾರತೀಯ ಚಿತ್ರರಂಗದ ಪ್ರತಿಭಾನ್ವಿತ ಕಲಾವಿದರಲ್ಲಿ ನಾಸಿರುದ್ದೀನ್ ಶಾ (Naseeruddin Shah) ಕೂಡ ಪ್ರಮುಖರು. ನಟನೆಯಲ್ಲಿ ಎಷ್ಟೋ ಮಂದಿಗೆ ಅವರೇ ಸ್ಫೂರ್ತಿ. ರಂಗಭೂಮಿ ಹಿನ್ನೆಲೆಯಿಂದ ಬಂದ ಅವರು ಅನೇಕ ಬಗೆಯ ಪಾತ್ರಗಳಿಗೆ ಬಣ್ಣ ಹಚ್ಚಿ ಸೈ ಎನಿಸಿಕೊಂಡಿದ್ದಾರೆ. ನೂರಾರು ಸಿನಿಮಾಗಳಲ್ಲಿ ಅಭಿನಯಿಸಿರುವ ಅವರ ನಟನೆ ಅನೇಕರಿಗೆ ಮಾದರಿ ಆಗಿದೆ. ನಾಸಿರುದ್ದೀನ್ ಶಾ ಅವರಿಗೆ ಇಂದು (ಜುಲೈ 20) ಜನ್ಮದಿನದ ಸಂಭ್ರಮ. ಅವರ 72ನೇ ವರ್ಷದ ಹುಟ್ಟುಹಬ್ಬದ (Naseeruddin Shah Birthday) ಪ್ರಯುಕ್ತ ಅಭಿಮಾನಿಗಳು, ಸೆಲೆಬ್ರಿಟಿಗಳು, ಸ್ನೇಹಿತರು ಶುಭಾಶಯ ಕೋರುತ್ತಿದ್ದಾರೆ. ಸಿನಿಮಾ ಮಾತ್ರವಲ್ಲದೇ ಹಲವು ವಿವಾದದ (Controversy) ಮೂಲಕವೂ ನಾಸಿರುದ್ದೀನ್ ಶಾ ಸುದ್ದಿ ಆಗಿದ್ದುಂಟು. ತಮ್ಮ ಮನದ ಮಾತನ್ನು ಅಭಿವ್ಯಕ್ತಿಸುವಾಗ ಅವರು ಯಾವುದೇ ಮುಚ್ಚುಮರೆ ಮಾಡಿಲ್ಲ. ನೇರ ನಡೆ-ನುಡಿಯ ಕಾರಣಕ್ಕೆ ಅವರು ಗಮನ ಸೆಳೆಯುತ್ತಾರೆ.
ಚಿತ್ರರಂಗದಲ್ಲಿ ನಾಸಿರುದ್ದೀನ್ ಶಾ ಅವರ ಸಾಧನೆ ಅಪಾರ. ಕಲಾ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ ಭಾರತ ಸರ್ಕಾರ ‘ಪದ್ಮ ಭೂಷಣ’ ಮತ್ತು ‘ಪದ್ಮಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ. ಮೂರು ಬಾರಿ ರಾಷ್ಟ್ರ ಪ್ರಶಸ್ತಿ, ಮೂರು ಫಿಲ್ಮ್ ಫೇರ್ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಅವರಿಗೆ ಸಂದಿವೆ. ಕನ್ನಡದಲ್ಲೂ ಅವರು ನಟಿಸಿದ್ದಾರೆ. ಗಿರೀಶ್ ಕಾಸರವಳ್ಳಿ ನಿರ್ದೇಶನದ ‘ಮನೆ’ ಹಾಗೂ ಗಿರೀಶ್ ಕಾರ್ನಾಡ್-ಬಿವಿ ಕಾರಂತ್ ನಿರ್ದೇಶನದ ‘ತಬ್ಬಲಿಯು ನೀನಾದೆ ಮಗನೆ’ ಚಿತ್ರದಲ್ಲಿ ಅವರು ಅಭಿನಯಿಸಿದ್ದಾರೆ.
ಬಾಲಿವುಡ್ ನಟರ ಬಗ್ಗೆ ಮತ್ತು ಸಮಾಜದ ಆಗುಹೋಗುಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುವಲ್ಲಿ ನಾಸಿರುದ್ದೀನ್ ಶಾ ಎಂದಿಗೂ ಹಿಂಜರಿಕೆ ಮಾಡಿಕೊಂಡಿಲ್ಲ. ಅನೇಕರನ್ನು ಅವರು ಕಟು ಮಾತುಗಳಿಂದ ಟೀಕಿಸಿದ್ದಾರೆ. ‘ಅನುಪಮ್ ಖೇರ್ ಒಬ್ಬ ಜೋಕರ್. ಅವರದ್ದು ಸೈಕೋಪಾತ್ ವರ್ತನೆ’ ಎಂದು ನಾಸಿರುದ್ದೀನ್ ಶಾ ಆರೋಪಿಸಿದ್ದರು.
‘ನಟನೆಯ ಹೊರತಾಗಿ ದಿಲೀಪ್ ಕುಮಾರ್ ಅವರು ಹೆಚ್ಚೇನೂ ಮಾಡಿಲ್ಲ. ಬೇರೆ ವಿಚಾರದಲ್ಲಿ ಬಾಲಿವುಡ್ಗೆ ಅವರಿಂದ ಕೊಡುಗೆ ಸಿಕ್ಕಿಲ್ಲ’ ಎಂದು ನಾಸಿರುದ್ದೀನ್ ಶಾ ಅಭಿಪ್ರಾಯಪಟ್ಟಿದ್ದರು. ಕ್ರಿಕೆಟಿಗ ವಿರಾಟ್ ಕೊಯ್ಲಿ ಬಗ್ಗೆಯೂ ಅವರು ಕಟುವಾದ ಹೇಳಿಕೆ ನೀಡಿದ್ದರು. ‘ಕೊಯ್ಲಿ ಅವರು ಪ್ರಪಂಚದ ಬೆಸ್ಟ್ ಆಟಗಾರ ಮಾತ್ರವಲ್ಲ, ಪ್ರಪಂಚದಲ್ಲಿ ಅತಿ ಕೆಟ್ಟದಾಗಿ ವರ್ತಿಸುವ ಆಟಗಾರ ಕೂಡ ಹೌದು’ ಎಂದು ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಇಂಥ ಹಲವು ಕಾರಣಗಳಿಂದಾಗಿ ನಾಸಿರುದ್ದೀನ್ ಶಾ ಅವರು ವಿವಾದ ಮಾಡಿಕೊಂಡಿದ್ದುಂಟು.
Published On - 8:14 am, Wed, 20 July 22