ಲವ್ ಜಿಹಾದ್ ಆರೋಪ ಹೊತ್ತ ‘ಅನ್ನಪೂರ್ಣಿ’ ಸಿನಿಮಾ ಮತ್ತೆ ಒಟಿಟಿಯಲ್ಲಿ ಲಭ್ಯ; ಆದರೆ ಒಂದು ಟ್ವಿಸ್ಟ್​

|

Updated on: Aug 07, 2024 | 5:46 PM

2023ರಲ್ಲಿ ವಿವಾದಕ್ಕೆ ಕಾರಣವಾಗಿದ್ದ ‘ಅನ್ನಪೂರ್ಣಿ’ ಸಿನಿಮಾವನ್ನು ಒಟಿಟಿಯಿಂದ ತೆಗೆದುಹಾಕಲಾಗಿತ್ತು. ಆದರೆ ಈಗ ಮತ್ತೆ ಒಟಿಟಿಯಲ್ಲಿ ಈ ಚಿತ್ರದ ವೀಕ್ಷಣೆಗೆ ಅವಕಾಶ ಸಿಗುತ್ತಿದೆ. ನಯನತಾರಾ, ಅಚ್ಯುತ್​ ಕುಮಾರ್​, ಸತ್ಯರಾಜ್​ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ನೆಟ್​ಫ್ಲಿಕ್ಸ್​ ಒಟಿಟಿಯಲ್ಲಿಈ ಚಿತ್ರ ಮರುಬಿಡುಗಡೆ ಆಗುತ್ತಿದೆ.

ಲವ್ ಜಿಹಾದ್ ಆರೋಪ ಹೊತ್ತ ‘ಅನ್ನಪೂರ್ಣಿ’ ಸಿನಿಮಾ ಮತ್ತೆ ಒಟಿಟಿಯಲ್ಲಿ ಲಭ್ಯ; ಆದರೆ ಒಂದು ಟ್ವಿಸ್ಟ್​
ನಯನತಾರಾ
Follow us on

ನಟಿ ನಯನತಾರಾ ಅವರು ಎಲ್ಲ ಬಗೆಯ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಅವರ ಕೆಲವು ಸಿನಿಮಾಗಳು ವಿವಾದಕ್ಕೆ ಒಳಗಾಗಿದ್ದೂ ಉಂಟು. ನಯನತಾರಾ ನಟನೆಯ ತಮಿಳಿನ ‘ಅನ್ನಪೂರ್ಣಿ’ ಸಿನಿಮಾ 2023ರ ಡಿಸೆಂಬರ್​ನಲ್ಲಿ ಬಿಡುಗಡೆಯಾಗಿ ಸದ್ದು ಮಾಡಿತು. ಆದರೆ ಆ ಚಿತ್ರದಲ್ಲಿನ ಕೆಲವು ದೃಶ್ಯಗಳು ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ಉಂಟುಮಾಡುತ್ತಿವೆ ಎಂಬ ಟೀಕೆ ಕೂಡ ಕೇಳಿಬಂದಿತ್ತು. ಆದ್ದರಿಂದ ಒಟಿಟಿ ಪ್ಲಾಟ್​ಫಾರ್ಮ್​ನಿಂದ ‘ಅನ್ನಪೂರ್ಣಿ’ ಸಿನಿಮಾವನ್ನು ತೆಗೆಯಲಾಗಿತ್ತು. ಈಗ ಮತ್ತೆ ಒಟಿಟಿಯಲ್ಲಿ ಈ ಸಿನಿಮಾ ವೀಕ್ಷಣೆಗೆ ಲಭ್ಯವಾಗಲಿದೆ. ಆದರೆ ಒಂದು ಟ್ವಿಸ್ಟ್​ ಇದೆ.

‘ಅನ್ನಪೂರ್ಣಿ’ ಸಿನಿಮಾದ ಶೀರ್ಷಿಕೆಯೇ ಸೂಚಿಸುವಂತೆ ಇದರಲ್ಲಿ ಅಡುಗೆಯ ಕುರಿತಾದ ಕಹಾನಿ ಇದೆ. ‘ದಿ ಗಾಡೆಸ್​ ಆಫ್​ ಫುಡ್​’ ಎಂಬ ಟ್ಯಾಗ್​ಲೈನ್​ ಕೂಡ ಈ ಸಿನಿಮಾಗೆ ಇದೆ. ಈ ಚಿತ್ರದಲ್ಲಿ ಲವ್​ ಜಿಹಾದ್​ನ ಅಂಶಗಳು ಇವೆ ಎಂದು ಕೆಲವರು ಆರೋಪಿಸಿದ್ದರಿಂದ ನಿರ್ಮಾಪಕರು ಕ್ಷಮೆ ಕೇಳಿದ್ದರು. ಅಲ್ಲದೇ, ಕೆಲವು ಬದಲಾವಣೆ ಮಾಡುವುದಾಗಿ ತಿಳಿಸಿದ್ದರು.

ಈಗ ನೆಟ್​ಫ್ಲಿಕ್ಸ್​ನಲ್ಲಿ ಮತ್ತೆ ‘ಅನ್ನಪೂರ್ಣಿ’ ಸಿನಿಮಾದ ಪ್ರಸಾರಕ್ಕೆ ಸಿದ್ಧತೆ ನಡೆದಿದೆ. ಆಗಸ್ಟ್​ 9ರಿಂದ ಈ ಸಿನಿಮಾ ವೀಕ್ಷಣೆಗೆ ಲಭ್ಯವಾಗುತ್ತಿದೆ. ಟ್ವಿಸ್ಟ್​ ಏನೆಂದರೆ, ಭಾರತದಲ್ಲಿ ಇದು ಪ್ರಸಾರ ಆಗುವುದಿಲ್ಲ! ಇನ್ನುಳಿದ ದೇಶಗಳಲ್ಲಿ ‘ಅನ್ನಪೂರ್ಣಿ’ ಚಿತ್ರವನ್ನು ವೀಕ್ಷಿಸಬಹುದು. ಈ ಬಾರಿ ಚಿತ್ರತಂಡದವರು ಏನಾದರೂ ಬದಲಾವಣೆ ಮಾಡಿದ್ದಾರಾ ಇಲ್ಲವಾ ಎಂಬುದು ಆಗಸ್ಟ್​ 9ರಂದು ತಿಳಿಯಲಿದೆ.

2023ರಲ್ಲಿ ‘ಅನ್ನಪೂರ್ಣಿ’ ಸಿನಿಮಾ ವಿವಾದಕ್ಕೆ ಒಳಗಾದಾಗ ನಟಿ ನಯನತಾರಾ ಅವರು ಬೇಸರ ವ್ಯಕ್ತಪಡಿಸಿದ್ದರು. ಜನರಿಗೆ ಸ್ಫೂರ್ತಿ ನೀಡುವುದು ಈ ಸಿನಿಮಾದ ಉದ್ದೇಶವೇ ಹೊರತು ಯಾರಿಗೂ ನೋವುಂಟು ಮಾಡುವುದಲ್ಲ ಎಂದು ಅವರು ಹೇಳಿದ್ದರು. ನಿಲೇಶ್​ ಕೃಷ್ಣ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಕನ್ನಡದ ಖ್ಯಾತ ನಟ ಅಚ್ಯುತ್​ ಕುಮಾರ್ ಅವರು ಕೂಡ ಈ ಸಿನಿಮಾದಲ್ಲಿ ಒಂದು ಪ್ರಮುಖ ಪಾತ್ರ ಮಾಡಿದ್ದಾರೆ. ಅವರ ಅಭಿನಯಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ಓದಿ: ಶ್ರೀರಾಮನಿಗೆ ಅಪಮಾನ ಆರೋಪ: ನಯನತಾರಾ ವಿರುದ್ಧ ಪ್ರಕರಣ ದಾಖಲು

ಚಿತ್ರರಂಗದಲ್ಲಿ ನಯನತಾರಾ ಅವರಿಗೆ ಇರುವ ಬೇಡಿಕೆ ಅಷ್ಟಿಷ್ಟಲ್ಲ. ದಕ್ಷಿಣ ಭಾರತದ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ ಅವರು ಕಳೆದ ವರ್ಷ ‘ಜವಾನ್​’ ಚಿತ್ರದ ಮೂಲಕ ಬಾಲಿವುಡ್​ಗೂ ಕಾಲಿಟ್ಟು ಭರ್ಜರಿ ಗೆಲುವು ಪಡೆದರು. ಈಗ ಹಲವಾರು ಸಿನಿಮಾಗಳು ಅವರ ಕೈಯಲ್ಲಿ ಇವೆ. ಯಶ್​ ಅಭಿನಯದ ‘ಟಾಕ್ಸಿಕ್​’ ಚಿತ್ರದಲ್ಲೂ ನಯನತಾರಾ ಅಭಿನಯಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 5:38 pm, Wed, 7 August 24