‘ಮನಿ ಹೈಸ್ಟ್’ ಸೀರಿಸ್ (Money Heist) ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ. ಇದು ಪ್ರಸಾರವಾಗಿದ್ದು, ನೆಟ್ಫ್ಲಿಕ್ಸ್ನಲ್ಲಿ (Netflix). ಬ್ಯಾಂಕ್ ಲೂಟಿ ಮಾಡೋದು ಈ ವೆಬ್ ಸರಣಿಯ ಕಥೆ. ವಿಚಿತ್ರ ಎಂದರೆ ಇದೇ ವೆಬ್ ಸೀರಿಸ್ ಮಾದರಿಯಲ್ಲಿ ನೆಟ್ಫ್ಲಿಕ್ಸ್ ಸೆಟ್ಅನ್ನು ದೋಚಲಾಗಿದೆ. ಬರೋಬ್ಬರಿ 4 ಕೋಟಿ ರೂಪಾಯಿ ಬೆಲೆಬಾಳುವ ವಸ್ತುಗಳು ಕಳ್ಳತನವಾಗಿದೆ. ಈ ವಿಚಾರವನ್ನು ಸ್ವತಃ ನೆಟ್ಫ್ಲಿಕ್ಸ್ ಖಚಿತ ಪಡಿಸಿದೆ. ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಆರಂಭವಾಗಿದೆ.
ನೆಟ್ಫ್ಲಿಕ್ಸ್ ಸಿನಿಮಾಗಳನ್ನು ಖರೀದಿ ಮಾಡುವುದು ಮಾತ್ರವಲ್ಲ, ಕೆಲ ಸಿನಿಮಾ ಹಾಗೂ ವೆಬ್ ಸೀರಿಸ್ಗಳನ್ನು ತಾನೇ ನಿರ್ಮಾಣ ಮಾಡುತ್ತದೆ. ಇದಕ್ಕಾಗಿ ಸೆಟ್ನಲ್ಲಿ ಅತ್ಯಾಧುನಿಕ ಉಪಕರಣ ಬಳಕೆ ಮಾಡುತ್ತಿದೆ. ಇದರ ಮೇಲೆ ಕಳ್ಳರ ಕಣ್ಣು ಬಿದ್ದಿದೆ. ಎರಡು ಬೇರೆಬೇರೆ ಸೆಟ್ಗೆ ನುಗ್ಗಿರುವ ದರೋಡೆಕೋರರು ಸುಮಾರು 4 ಕೋಟಿ ಬೆಲೆ ಬಾಳುವ ಉಪಕರಣಗಳನ್ನು ಕದ್ದು ಹೋಗಿದ್ದಾರೆ.
‘ದಿ ಕ್ರೌನ್’ ಹಾಗೂ ‘ಲುಪಿನ್’ ಶೋನ ಸೆಟ್ನಲ್ಲಿ ಕಳ್ಳತನವಾಗಿದೆ. ಫೆಬ್ರವರಿ ಅಂತ್ಯದ ವೇಳೆಗೆ ಈ ಘಟನೆ ನಡೆದಿದ್ದು, ಇದನ್ನು ಈಗ ನೆಟ್ಫ್ಲಿಕ್ಸ್ ಖಚಿತಪಡಿಸಿದೆ. ಬ್ರಿಟಿಷ್ ರಾಯಲ್ ಕುಟುಂಬದ ಸದಸ್ಯರ ಕುರಿತು ‘ದಿ ಕ್ರೌನ್’ ಸಿದ್ಧಗೊಳ್ಳುತ್ತಿದೆ. ಕ್ವೀನ್ ಎಲಿಜಬೆತ್ II ಕಥೆಯನ್ನು ಪ್ರಮುಖವಾಗಿ ತೆಗೆದುಕೊಳ್ಳಲಾಗಿದೆ. ಈ ಸೆಟ್ಗೆ ನುಗ್ಗಿರುವ ದರೋಡೆಕೋರರು ವಾಹನಗಳನ್ನು ನಜ್ಜುಗುಜ್ಜುಮಾಡಿದ್ದಾರೆ. ಇಲ್ಲಿದ್ದ ಚಿನ್ನ ಹಾಗೂ ಬೆಳ್ಳಿಯ ಕ್ಯಾಂಡೆಲ್ಬಾರ್ಗಳನ್ನು ದೋಚಲಾಗಿದ್ದು, ಇದರ ಬೆಲೆ ಬರೋಬ್ಬರಿ 1.5 ಕೋಟಿ ರೂಪಾಯಿಯಷ್ಟಿತ್ತು. ‘ಮನಿ ಹೈಸ್ಟ್’ ವೆಬ್ ಸರಣಿಯಲ್ಲೂ ಬ್ಯಾಂಕ್ಗೆ ನುಗ್ಗುವ ತಂಡ, ಅಲ್ಲಿಟ್ಟಿದ್ದ ಚಿನ್ನದ ಗಟ್ಟಿಗಳನ್ನು ದೋಚಿಕೊಂಡು ಹೋಗುತ್ತದೆ.
ಫ್ರೆಂಚ್ ಶೋ ‘ಲುಪಿನ್’ ಸೆಟ್ ಕೂಡ ಕಳ್ಳತನವಾಗಿದೆ. ಮುಸುಕು ಹಾಕಿ ಬಂದ 20 ದರೋಡೆಕೋರರು ಸೆಟ್ ಒಳಗೆ ಪಟಾಕಿ ಸಿಡಿಸಿ ಎಲ್ಲರನ್ನೂ ಚೆಲ್ಲಾಪಿಲ್ಲಿ ಮಾಡಿದ್ದಾರೆ. ಆ ಬಳಿಕ 2.5 ಕೋಟಿ ಬೆಲೆ ಬಾಳುವ ಉಪಕರಣಗಳನ್ನು ಕದ್ದು ಪರಾರಿಯಾಗಿದ್ದಾರೆ. ‘ಇದೊಂದು ದರೋಡೆ. ನಮ್ಮ ಸಿಬ್ಬಂದಿ ಎಲ್ಲರೂ ಸುರಕ್ಷಿತವಾಗಿದ್ದಾರೆ. ಮೊದಲ ಸೆಟ್ನಲ್ಲಿ ಕಳ್ಳತನವಾದ ವಸ್ತುಗಳು ಸಿಕ್ಕಿವೆ. ಎರಡನೇ ದರೋಡೆ ಬಗ್ಗೆ ತನಿಖೆ ನಡೆಯುತ್ತಿದೆ’ ಎಂದು ನೆಟ್ಫ್ಲಿಕ್ಸ್ ವಕ್ತಾರರು ತಿಳಿಸಿದ್ದಾರೆ. ವಿಚಿತ್ರ ಎಂದರೆ ‘ಲುಪಿನ್’ ಕೂಡ ದರೋಡೆ ಕಥೆಯನ್ನೇ ಆಧರಿಸಿದೆ.
ಇದನ್ನೂ ಓದಿ: ಟೀಕೆಗಳ ಮಧ್ಯೆ ಗೆದ್ದ ಕಂಗನಾ ರಣಾವತ್; ದಾಖಲೆ ವೀಕ್ಷಣೆ ಕಂಡ ‘ಲಾಕಪ್’ ಶೋ
ನೆಟ್ಫ್ಲಿಕ್ಸ್ ಜತೆ ಕೈ ಜೋಡಿಸಲಿರುವ ರಾಮ್ ಚರಣ್? ಹೊಸ ಡೀಲ್ ಸಲುವಾಗಿ ಮುಂಬೈನಲ್ಲಿ ಮಾತುಕತೆ
Published On - 2:47 pm, Thu, 3 March 22