
ಖ್ಯಾತ ನಿರ್ದೇಶಕ ರಾಜ್‌ಕುಮಾರ್ ಹಿರಾನಿ (Rajkumar Hirani) ನಿರ್ಮಾಪಕನಾಗಿ ಒಟಿಟಿ ಲೋಕಕ್ಕೆ ಕಾಲಿಟ್ಟಿದ್ದಾರೆ. ಅವರ ಹೊಸ ವೆಬ್ ಸೀರೀಸ್ ‘ಪ್ರೀತಮ್ ಆ್ಯಂಡ್ ಪೆಡ್ರೊ’ ಜಿಯೋ ಹಾಟ್‌ಸ್ಟಾರ್‌ನಲ್ಲಿ ಪ್ರಸಾರ ಆರಂಭಿಸಿದೆ ಕಾಮಿಡಿ ಜೊತೆಗೆ ಒಂದಷ್ಟು ಸಸ್ಪೆನ್ಸ್ಗಳ ಮೂಲಕ ಈ ವೆಬ್ ಸರಣಿ ಗಮನ ಸೆಳೆಯುತ್ತಾ ಇದೆ. ಹಾಗಾದರೆ, ಈ ಸರಣಿ ಹೇಗಿದೆ? ಆ ಬಗ್ಗೆ ಇಲ್ಲಿದೆ ವಿವರ.
ಇದು ಗೋವಾದಲ್ಲಿ ನಡೆಯುವ ಕಥೆ. ಪ್ರೀತಮ್ (ವೀರ್ ಹಿರಾನಿ) ಎಂಬ ಯುವಕ ಕಳೆದು ಹೋದ ರೇಡಿಯೋ ಬಗ್ಗೆ ಕಂಪ್ಲೇಟ್ ಕೊಡಲು ಪೊಲೀಸ್ ಸ್ಟೇಷನ್ಗೆ ಬರುತ್ತಾನೆ. ಪೊಲೀಸ್ ಪೇದೆಗೆ ಹೆದರಿಸಿ ಜೈಲು ಸೇರುತ್ತಾನೆ. ಅದೇ ಪೊಲೀಸ್ ಸ್ಟೇಷನ್‌ನಲ್ಲಿ ಪೆಡ್ರೊ (ಅರ್ಶದ್ ವಾರ್ಸಿ) ಇನ್ಸ್‌ಪೆಕ್ಟರ್ ಆಗಿರುತ್ತಾನೆ. ಅಷ್ಟರಲ್ಲಿ ಅಲ್ಲಿ ಒಂದು ಹೈ ಪ್ರೊಫೈಲ್ ಎಟಿಎಂ ಕಳ್ಳತನದ ಕೇಸ್ ಬರುತ್ತದೆ. ಪೊಲೀಸರಿಗೆ ಅದನ್ನು ಹೇಗೆ ಪತ್ತೆ ಹಚ್ಚಬೇಕೆಂದು ತಿಳಿಯುವುದಿಲ್ಲ. ಆಗ ಪ್ರೀತಮ್ ರೇಡಿಯೋ ಹುಡುಕಿ ಕೊಟ್ಟರೆ ಕಳ್ಳರನ್ನು ಹಿಡಿದುಕೊಡುವುದಾಗಿ ಹೇಳುತ್ತಾನೆ. ಕಂಪ್ಯೂಟರ್ ಬಳಸಿ ಕೇವಲ ಹತ್ತು ನಿಮಿಷಗಳಲ್ಲಿ ಕಳ್ಳರ ಜಾಗ ಪತ್ತೆ ಹಚ್ಚುತ್ತಾನೆ. ಇದೇ ಸಮಯಕ್ಕೆ ಸರಿಯಾಗಿ ಪೆಡ್ರೊ ಸೈಬರ್ ಕ್ರೈಮ್ ವಿಭಾಗಕ್ಕೆ ವರ್ಗಾವಣೆ ಆಗುತ್ತಾನೆ. ಆಗಲೇ ಕ್ರೀಡಾ ಸಚಿವರ ಮಗ ನಾಪತ್ತೆಯಾಗುತ್ತಾನೆ. ಆ ಬಳಿಕ ಕಥೆ ಶುರು.
ಈ ಸರಣಿಯಲ್ಲಿ ಒಟ್ಟು 6 ಎಪಿಸೋಡ್‌ಗಳಿವೆ. ಪ್ರತಿ ಎಪಿಸೋಡ್ ಸರಾಸರಿ 35 ನಿಮಿಷ ಇದೆ. ಈ ಸರಣಿಯನ್ನು ‘ಪಾತಾಳ್ ಲೋಕ್’ ಖ್ಯಾತಿಯ ಅವಿನಾಶ್ ಅರುಣ್ ಧವಾರೆ ನಿರ್ದೇಶಿಸಿದ್ದಾರೆ. ಆದರೆ ಇದರಲ್ಲಿ ರಾಜ್‌ಕುಮಾರ್ ಹಿರಾನಿ ಅವರ ಹಳೇ ಶೈಲಿಯೇ ಎದ್ದು ಕಾಣುತ್ತದೆ. ಹಿರಾನಿ ಅವರ ಎಂದಿನ ಸಿನಿಮಾಗಳಂತೆ ಇಲ್ಲೂ ಒಬ್ಬ ಮುಗ್ಧ ಹೀರೊ ಇರುತ್ತಾನೆ.
ಮುನ್ನಾಭಾಯ್, ಪಿಕೆ ಅಥವಾ ರಾಂಚೋ ತರಹ ಪೆಡ್ರೊ ಕೂಡ ಒಬ್ಬ ಮುಗ್ಧ ಪೊಲೀಸ್ ಅಧಿಕಾರಿ. ಭಾವನಾತ್ಮಕ ಮಾತುಗಳ ಮೂಲಕವೇ ಅವನು ಅಪರಾಧಿಗಳ ಮನಸ್ಸು ಬದಲಾಯಿಸುತ್ತಾನೆ. ಸೂಸೈಡ್ ಮಾಡಿಕೊಳ್ಳಲು ಹೋಗುವ ವ್ಯಕ್ತಿಯನ್ನು ತನ್ನ ಮಾತಿನಿಂದಲೇ ಕಾಪಾಡುತ್ತಾನೆ. ಇದನ್ನು ನೋಡುವಾಗ ನಮಗೆ ‘ಆಲ್ ಈಸ್ ವೆಲ್’ ನೆನಪಾಗುತ್ತದೆ. ಅತ್ತ, ಕಾಲೇಜು ಕಥೆ, ಆತ್ಮಹತ್ಯೆ ಕೂಡ ಪ್ರಮುಖ ಪಾತ್ರವಹಿಸುತ್ತದೆ. ಕೆಲವು ದೃಶ್ಯಗಳು ಕರ್ನಾಟಕದಲ್ಲೂ ಸಾಗುತ್ತವೆ. ಒಂದೊಳ್ಳೆಯ ಸರಣಿ ನೋಡಬೇಕು ಎಂದರೆ ಇದನ್ನು ವೀಕ್ಷಿಸಬಹುದು.
ಇದನ್ನೂ ಓದಿ: ಸೋಲಿಗೆ ವಿಚಿತ್ರ ಕಾರಣ ಕೊಟ್ಟರಾ ರಾಜ್‌ಕುಮಾರ್ ಹಿರಾನಿ; ನೆಟ್ಟಿಗರ ಆಕ್ರೋಶ
ರಾಜ್‌ಕುಮಾರ್ ಹಿರಾನಿ ಮಗ ವೀರ್ ಹಿರಾನಿ ಅವರು ನಟನೆಯಲ್ಲಿ ತಮ್ಮನ್ನು ತಾವು ಸಾಬೀತು ಮಾಡಿಕೊಂಡಿದ್ದಾರೆ. ಅರ್ಷದ್ ವಾರ್ಸಿ, ವಿಕ್ರಾಂತ್ ಮಾಸ್ಸಿ ಅವರ ನಟನೆ ಕೂಡ ಇಷ್ಟ ಆಗುತ್ತದೆ. ಇನ್ನು ಕೆಲವು ವಿಶೇಷ ಅತಿಥಿ ಪಾತ್ರಗಳು ಚಿತ್ರದಲ್ಲಿ ಗಮನ ಸೆಳೆದಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.