13 ವರ್ಷಗಳ ನಂತರ ಒಟಿಟಿಗೆ ಬಂತು ರಾಜ್‌ಕುಮಾರ್ ರಾವ್ ನಟನೆಯ ‘ಶಾಹಿದ್’ ಸಿನಿಮಾ
ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿ 13 ವರ್ಷಗಳು ಕಳೆದ ನಂತರ ‘ಶಾಹಿದ್’ ಸಿನಿಮಾ ಒಟಿಟಿಗೆ ಬಂದಿದೆ. ‘ಇಷ್ಟೆಲ್ಲಾ ವರ್ಷಗಳ ನಂತರ, ಶಾಹಿದ್ ಚಿತ್ರ ಒಟಿಟಿಗೆ ಬರಲು ಕಾರಣವೇನು? ಜನರ ಮನಸ್ಥಿತಿಯಲ್ಲಿ ಬದಲಾವಣೆ ಬಂದಿದೆಯೇ? ಏನೇ ಇರಲಿ, ಈ ಧೈರ್ಯದ ಸಿನಿಮಾದ ಭಾಗವಾಗಿದ್ದಕ್ಕೆ ನನಗೆ ಹೆಮ್ಮೆ ಇದೆ. ನೋಡಿಲ್ಲದಿದ್ದರೆ ಖಂಡಿತ ನೋಡಿ’ ಎಂದು ಚಿತ್ರದ ಬರಹಗಾರ, ಸಂಕಲನಕಾರ ಅಪೂರ್ವ ಅಸ್ರಾನಿ ಹೇಳಿದ್ದಾರೆ.

ಹನ್ಸಲ್ ಮೆಹ್ತಾ ನಿರ್ದೇಶನದ ರಾಷ್ಟ್ರ ಪ್ರಶಸ್ತಿ ವಿಜೇತ ಸಿನಿಮಾ ‘ಶಾಹಿದ್’ ಕೊನೆಗೂ ಒಟಿಟಿಗೆ ಎಂಟ್ರಿ ನೀಡಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ 13 ವರ್ಷಗಳು ಕಳೆದ ನಂತರ ಈ ಚಿತ್ರವು ‘ಅಮೆಜಾನ್ ಪ್ರೈಮ್ ವಿಡಿಯೋ’ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಾಗಿದೆ. 2013ರಲ್ಲಿ ತೆರೆಕಂಡಿದ್ದ ‘ಶಾಹಿದ್’ ಸಿನಿಮಾವು ವಕೀಲ ಮತ್ತು ಮಾನವ ಹಕ್ಕುಗಳ ಹೋರಾಟಗಾರ ಶಾಹಿದ್ ಅಜ್ಮಿ ಅವರ ಜೀವನ ಆಧಾರಿತ ಕಥೆಯನ್ನು ಹೊಂದಿತ್ತು.
2010ರಲ್ಲಿ ಮುಂಬೈನಲ್ಲಿ ಹತ್ಯೆಗೊಳಗಾಗಿದ್ದ ಶಾಹಿದ್ ಅಜ್ಮಿ ಅವರ ಪಾತ್ರದಲ್ಲಿ ರಾಜ್‌ಕುಮಾರ್ ರಾವ್ ನಟಿಸಿದ್ದರು. ಮೊಹಮ್ಮದ್ ಜೀಶನ್ ಅಯ್ಯೂಬ್, ಪ್ರಭ್ಲಿನ್ ಸಂಧು ಮತ್ತು ಬಲ್ಜಿಂದರ್ ಕೌರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. 61ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಈ ಚಿತ್ರವು ಭಾರಿ ಮನ್ನಣೆ ಗಳಿಸಿತ್ತು. ಹನ್ಸಲ್ ಮೆಹ್ತಾ ಅವರು ‘ಅತ್ಯುತ್ತಮ ನಿರ್ದೇಶಕ’ ಪ್ರಶಸ್ತಿ ಪಡೆದರೆ, ರಾಜ್‌ಕುಮಾರ್ ರಾವ್ ಅವರು ‘ಅತ್ಯುತ್ತಮ ನಟ’ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.
ಈ ಚಿತ್ರವು ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರಸಾರವಾಗಲು ಆರಂಭಿಸುತ್ತಿದ್ದಂತೆಯೇ, ಚಿತ್ರದ ಬರಹಗಾರ ಮತ್ತು ಸಂಕಲನಕಾರ ಅಪೂರ್ವ ಅಸ್ರಾನಿ ಅವರು ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದಾರೆ. ಇಷ್ಟೊಂದು ಪ್ರಶಸ್ತಿ, ಮೆಚ್ಚುಗೆ ಪಡೆದ ಸಿನಿಮಾಗೆ ಒಟಿಟಿ ಸಂಸ್ಥೆ ಸಿಗಲು 13 ವರ್ಷ ಏಕೆ ಬೇಕಾಯಿತು ಎಂದು ಅವರು ಪ್ರಶ್ನೆ ಮಾಡಿದ್ದಾರೆ.
‘ರಾಷ್ಟ್ರ ಪ್ರಶಸ್ತಿ ವಿಜೇತ ಶಾಹಿದ್ ಸಿನಿಮಾ ಕೊನೆಗೂ ಪ್ರೈಮ್ ವೀಡಿಯೊದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಈ ಚಿತ್ರಕ್ಕೆ ಒಟಿಟಿ ಸಿಗಲು 13 ವರ್ಷಗಳೇ ಬೇಕಾದವು. ಭಯೋತ್ಪಾದನೆ ಆರೋಪ ಹೊತ್ತಿದ್ದರೂ ಸಾಬೀತಾಗದ ಅಮಾಯಕರ ಪರವಾಗಿ ನ್ಯಾಯಾಲಯದಲ್ಲಿ ಹೋರಾಡಿದ ವಕೀಲ ಶಾಹಿದ್ ಅಜ್ಮಿ ಅವರ ಕಥೆಯನ್ನು ಈ ಸಿನಿಮಾ ಹೇಳುತ್ತದೆ. ಅವರ ಆ ಧೈರ್ಯಕ್ಕಾಗಿಯೇ ಅವರನ್ನು ಹತ್ಯೆ ಮಾಡಲಾಯಿತು’ ಎಂದು ಅಪೂರ್ವ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ರೊಮ್ಯಾಂಟಿಕ್ ಕಾಮಿಡಿ ಬೆತ್ಲಹೆಮ್ ಕುಟುಂಬ ಯುನಿಟ್; ಈಗ ಒಟಿಟಿಗೆ; ಕನ್ನಡದಲ್ಲೂ ಲಭ್ಯ
ಅಲ್ಲದೆ, ‘ಈ ಸಿನಿಮಾ 2014ರ ರಾಜಕೀಯ ಬದಲಾವಣೆಗಿಂತ ಒಂದು ವರ್ಷ ಮುಂಚಿತವಾಗಿ ಬಿಡುಗಡೆಯಾಗಿತ್ತು. ಆ ನಂತರ ವಿರೋಧ ವ್ಯಕ್ತಪಡಿಸುವವರು, ಹಕ್ಕುಗಳ ಹೋರಾಟಗಾರರು ಮತ್ತು ಸಿದ್ಧಾಂತಗಳನ್ನು ಪ್ರಶ್ನಿಸುವವರನ್ನು ಸಂಶಯದಿಂದ ನೋಡುವ ವಾತಾವರಣ ನಿರ್ಮಾಣವಾಯಿತು. ಇಂತಹ ಕಥೆಗಳನ್ನು ಹೇಳಲು ಹೊರಟ ನಿರ್ದೇಶಕರು, ಬರಹಗಾರರು ಮತ್ತು ನಟರು ಚಿತ್ರರಂಗದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಯಿತು’ ಎಂದು ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 5:41 pm, Tue, 29 September 26




