ಈ ವರ್ಷಾಂತ್ಯದಲ್ಲಿ ಹಲವಾರು ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ಕೊರೊನಾ ಕಾರಣದಿಂದ ಅನೇಕ ಸಿನಿಮಾಗಳ ರಿಲೀಸ್ ತಡವಾಯಿತು. ಅಂತಹ ಎಲ್ಲ ಚಿತ್ರಗಳು ಒಮ್ಮೆಲೇ ಥಿಯೇಟರ್ಗೆ ಲಗ್ಗೆ ಇಡುತ್ತಿವೆ. ಹಾಗಾಗಿ ಎಲ್ಲ ಸಿನಿಮಾಗಳಿಗೆ ಸರಿಯಾಗಿ ಪ್ರಮಾಣದಲ್ಲಿ ಚಿತ್ರಮಂದಿರಗಳು ಸಿಗುವುದು ಅಸಾಧ್ಯ. ಈ ನಡುವೆ ಕೆಲವು ಚಿತ್ರತಂಡಗಳು ಓಟಿಟಿ ಪ್ಲಾಟ್ಫಾರ್ಮ್ (OTT platform) ಕಡೆಗೆ ಗಮನ ಹರಿಸಿವೆ. ರವಿಚಂದ್ರನ್ (Ravichandran) ನಟನೆಯ ‘ಕನ್ನಡಿಗ’ ಸಿನಿಮಾ (Kannadiga Movie) ಕೂಡ ಓಟಿಟಿ ಮೂಲಕ ಬಿಡುಗಡೆ ಆಗಲಿದೆ. ‘ಜಟ್ಟ’, ‘ಮೈತ್ರಿ’ ಸಿನಿಮಾಗಳ ಮೂಲಕ ಖ್ಯಾತಿ ಪಡೆದ ಗಿರಿರಾಜ್ ಅವರು ನಿರ್ದೇಶನ ಮಾಡಿರುವ ಈ ಸಿನಿಮಾ ಡಿ.17ರಂದು ಜೀ5 (Zee5) ಮೂಲಕ ಬಿಡುಗಡೆ ಆಗಲಿದೆ.
ಹಲವು ಕಾರಣಗಳಿಂದಾಗಿ ‘ಕನ್ನಡಿಗ’ ಸಿನಿಮಾ ಹೈಪ್ ಸೃಷ್ಟಿ ಮಾಡಿದೆ. ಈ ಚಿತ್ರದಲ್ಲಿ ರವಿಚಂದ್ರನ್ ಅವರಿಗೆ ವಿಶೇಷ ಗೆಟಪ್ ಇದೆ. ಐತಿಹಾಸಿಕ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ಲಿಪಿಕಾರ ಗುಣಭದ್ರನ ಪಾತ್ರವನ್ನು ರವಿಚಂದ್ರನ್ ನಿಭಾಯಿಸಿದ್ದಾರೆ. ಈಗಾಗಲೇ ಹಲವು ಸದಭಿರುಚಿಯ ಸಿನಿಮಾಗಳನ್ನು ಮಾಡಿ ಗಮನ ಸೆಳೆದಿರುವ ಗಿರಿರಾಜ್ ಅವರು ‘ಕನ್ನಡಿಗ’ ಸಿನಿಮಾವನ್ನು ಯಾವ ರೀತಿ ಕಟ್ಟಿಕೊಟ್ಟಿದ್ದಾರೆ ಎಂದು ತಿಳಿದುಕೊಳ್ಳಲು ಸಿನಿಪ್ರಿಯರು ಕಾದಿದ್ದಾರೆ.
ನಟ ರಮೇಶ್ ಅರವಿಂದ್ ಅವರು ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ. ‘ನಮ್ಮ ರವಿಚಂದ್ರನ್ ಅವರು ಬಹಳ ವಿಭಿನ್ನವಾದ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡದ ಮೊದಲು ಶಬ್ದಕೋಶವನ್ನ ಬರೆಯಲು ಸಹಾಯ ಮಾಡಿದವನ ಕಥೆ ಅಂತ ನನಗೆ ಅನಿಸ್ತಾ ಇದೆ. ಇದೇ ಡಿ.17ರಂದು ಜೀ5ನಲ್ಲಿ ಈ ಚಿತ್ರ ನೀವು ನೋಡಬಹುದು’ ಎಂದು ರಮೇಶ್ ಹೇಳಿದ್ದಾರೆ.
ರಾಕ್ಲೈನ್ ವೆಂಕಟೇಶ್, ಪಾವನಾ ಗೌಡ, ಅಚ್ಯುತ್ ಕುಮಾರ್, ಬಾಲಾಜಿ ಮನೋಹರ್, ಭವಾನಿ ಪ್ರಕಾಶ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಓಂಕಾರ್ ಮೂವೀಸ್ ಲಾಂಛನದಲ್ಲಿ ಎನ್.ಎಸ್. ರಾಜ್ಕುಮಾರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಕೆಜಿಎಫ್ ಖ್ಯಾತಿಯ ರವಿ ಬಸ್ರೂರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಜಿ.ಎಸ್.ವಿ. ಸೀತಾರಾಂ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ, ಹೊಸ್ಮನೆ ಮೂರ್ತಿ ಕಲಾ ನಿರ್ದೇಶನ ಹಾಗೂ ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.
ಒಂದೇ ತಿಂಗಳಲ್ಲಿ ರವಿಚಂದ್ರನ್ ನಟನೆಯ 2 ಸಿನಿಮಾ ರಿಲೀಸ್:
ರವಿಚಂದ್ರನ್ ಅಭಿನಯದ ‘ದೃಶ್ಯ 2’ ಸಿನಿಮಾ ಇತ್ತೀಚೆಗಷ್ಟೇ ಬಿಡುಗಡೆ ಆಗಿದೆ. ಡಿ.10ರಂದು ಚಿತ್ರಮಂದಿರದಲ್ಲಿ ಈ ಸಿನಿಮಾ ತೆರೆಕಂಡು, ವಿಮರ್ಶಕರಿಂದ ಮೆಚ್ಚುಗೆ ಪಡೆದುಕೊಂಡಿದೆ. ಅದರ ಬೆನ್ನಲೇ ಓಟಿಟಿ ಮೂಲಕ ‘ಕನ್ನಡಿಗ’ ರಿಲೀಸ್ ಆಗುತ್ತಿದೆ. ‘ಕ್ರೇಜಿ ಸ್ಟಾರ್’ ನಟನೆಯ ಎರಡೆರಡು ಚಿತ್ರಗಳು ಒಂದೇ ತಿಂಗಳಲ್ಲಿ ಬಿಡುಗಡೆ ಆಗುತ್ತಿರುವುದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ.
ಇದನ್ನೂ ಓದಿ:
‘ರಾಜೇಂದ್ರ ಪೊನ್ನಪ್ಪ ಎಂಥಾ ಬುದ್ಧಿವಂತ ರೀ..’: ‘ದೃಶ್ಯ 2’ ಸಿನಿಮಾ ಬಗ್ಗೆ ರವಿಚಂದ್ರನ್ ಮಾತು
Drishya 2 Movie Review: ಕೊನೇ ದೃಶ್ಯದವರೆಗೂ ಕೊಲೆ ಕೌತುಕ; ಈ ಬಾರಿ ಕ್ಲೈಮ್ಯಾಕ್ಸ್ ಇನ್ನಷ್ಟು ರೋಚಕ
Published On - 11:50 am, Mon, 13 December 21