ನಟ ರಾಮ್ ಚರಣ್ (Ram Charan) ಅವರು ಪ್ಯಾನ್ ಇಂಡಿಯಾ ಹೀರೋ ಆಗಿ ಗುರುತಿಸಿಕೊಂಡಿದ್ದಾರೆ. ದೇಶಾದ್ಯಂತ ಅವರಿಗೆ ಅಭಿಮಾನಿಗಳಿದ್ದಾರೆ. ಅವರು ನಟಿಸಿರುವ ‘ಆರ್ಆರ್ಆರ್’ (RRR Movie) ಸಿನಿಮಾದ ಮೇಲೆ ಸಖತ್ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ಚಿತ್ರ ಇಷ್ಟು ಹೊತ್ತಿಗಾಗಲೇ ಬಿಡುಗಡೆ ಆಗಿರಬೇಕಿತ್ತು. ಆದರೆ ಕೊರೊನಾ ಕಾರಣದಿಂದ ರಿಲೀಸ್ ದಿನಾಂಕ ಮುಂದೂಡಲ್ಪಟ್ಟಿತು. ಈ ಚಿತ್ರ ರಿಲೀಸ್ ಆಗುವುದಕ್ಕೂ ಮುನ್ನವೇ ರಾಮ್ ಚರಣ್ ಅವರ ಮುಂದಿನ ಪ್ರಾಜೆಕ್ಟ್ಗಳ ಬಗ್ಗೆ ಕೌತುಕ ಮೂಡಿದೆ. ವಿಶೇಷ ಏನೆಂದರೆ ಅವರು ಒಟಿಟಿ ಪ್ಲಾಟ್ಫಾರ್ಮ್ ಕಡೆಗೆ ಗಮನ ಹರಿಸುತ್ತಿದ್ದಾರೆ. ಈ ಕುರಿತಂತೆ ಮಾತುಕತೆ ಮಾಡುವ ಸಲುವಾಗಿ ರಾಮ್ ಚರಣ್ ಮುಂಬೈಗೆ ತೆರಳಿದ್ದಾರೆ. ಒಂದು ವೇಳೆ ಡೀಲ್ ಖುದುರಿದರೆ ಅವರು ನೆಟ್ಫ್ಲಿಕ್ಸ್ (Netflix) ಮೂಲಕ ಒಟಿಟಿಗೆ ಕಾಲಿಡಲಿದ್ದಾರೆ ಎಂಬ ಗುಸುಗುಸು ಹಬ್ಬಿದೆ. ಈ ಕುರಿತು ರಾಮ್ ಚರಣ್ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದ್ರೂ ಬೆಂಕಿ ಇಲ್ಲದೆ ಹೊಗೆ ಆಡುವುದಿಲ್ಲ ಎಂದು ಗಾಸಿಪ್ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ.
ಇಂಗ್ಲಿಷ್ನ ಕೆಲವು ವೆಬ್ ಸರಣಿಗಳನ್ನು ಭಾರತದಲ್ಲಿ ರಿಮೇಕ್ ಮಾಡಲು ನಿರ್ಮಾಪಕರು ಮುಂದೆ ಬಂದಿದ್ದಾರೆ. ಅದಕ್ಕಾಗಿ ಬಾಲಿವುಡ್ ನಟನನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಅವರು ಮೊದಲಿಗೆ ಪ್ಲ್ಯಾನ್ ಮಾಡಿದ್ದರು. ಆದರೆ ಈಗ ರಾಮ್ ಚರಣ್ ಅವರಿಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅಭಿಮಾನಿಗಳು ಇರುವುದರಿಂದ ಅವರ ಜೊತೆಗೆ ಡೀಲ್ ಖುದುರಿಸಲು ನಿರ್ಮಾಪಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈ ಪ್ರಾಜೆಕ್ಟ್ಗೆ ರಾಮ್ ಚರಣ್ ಗ್ರೀನ್ ಸಿಗ್ನಲ್ ನೀಡಿದರೆ ದಕ್ಷಿಣ ಭಾರತದಲ್ಲೂ ಮಾರ್ಕೆಟ್ಗೆ ಅನುಕೂಲ ಆಗಲಿದೆ ಎಂದು ವೆಬ್ ಸಿರೀಸ್ ನಿರ್ಮಾಪಕರು ಲೆಕ್ಕಾಚಾರ ಹಾಕಿದ್ದಾರೆ ಎಂಬ ಮಾತು ಕೇಳಿಬಂದಿದೆ.
ಒಂದು ವೇಳೆ ರಾಮ್ ಚರಣ್ ಅವರು ಈ ಡೀಲ್ ಒಪ್ಪಿಕೊಂಡರೂ ಕೂಡ ವೆಬ್ ಸಿರೀಸ್ ಕೆಲಸಗಳು ಶುರುವಾಗಲು ಸಾಕಷ್ಟು ಸಮಯ ಹಿಡಿಯಲಿದೆ. ದೊಡ್ಡ ಸೆಟ್ಗಳನ್ನು ನಿರ್ಮಿಸಲು ಮತ್ತು ಸೂಕ್ತವಾದ ಲೊಕೇಷನ್ಗಳನ್ನು ಅಂತಿಮಗೊಳಿಸಲು ತುಂಬ ಕಾಲಾವಕಾಶ ಬೇಕಾಗಲಿದೆ. ಈ ಎಲ್ಲ ಅಂಕೆ-ಕಂತೆಗಳ ಕುರಿತು ರಾಮ್ ಚರಣ್ ಅವರ ಕಡೆಯಿಂದಲೇ ಅಧಿಕೃತ ಮಾಹಿತಿ ಹೊರಬರಲಿ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.
‘ಆರ್ಆರ್ಆರ್’ ಸಿನಿಮಾ ಬಿಡುಗಡೆ ಆದ ನಂತರ ರಾಮ್ ಚರಣ್ ಅವರ ಚಾರ್ಮ್ ಹೆಚ್ಚಾಗಲಿದೆ. ಈ ಚಿತ್ರಕ್ಕೆ ರಾಜಮೌಳಿ ನಿರ್ದೇಶನ ಮಾಡಿರುವುದರಿಂದ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಈಗಾಗಲೇ ಟ್ರೇಲರ್ ಮೂಲಕ ‘ಆರ್ಆರ್ಆರ್’ ಚಿತ್ರ ಹೈಪ್ ಸೃಷ್ಟಿ ಮಾಡಿದೆ. ರಾಮ್ ಚರಣ್ ಜೊತೆಗೆ ಜ್ಯೂ. ಎನ್ಟಿಆರ್, ಆಲಿಯಾ ಭಟ್, ಅಜಯ್ ದೇವಗನ್ ಸಹ ಅಭಿನಯಿಸಿದ್ದಾರೆ. ಈ ಚಿತ್ರ ರಿಲೀಸ್ ಆದ ನಂತರವೇ ವೆಬ್ ಸಿರೀಸ್ ಪ್ಲ್ಯಾನ್ಗಳ ಬಗ್ಗೆ ರಾಮ್ ಚರಣ್ ಮಾಹಿತಿ ಬಿಟ್ಟುಕೊಡುವ ಸಾಧ್ಯತೆ ಇದೆ.
ಇದನ್ನೂ ಓದಿ:
ವಿವಾದದಲ್ಲಿ ರಾಮ್ ಚರಣ್ ಪತ್ನಿ ಉಪಾಸನಾ; ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪ
ಹೇಗಿದೆ ರಾಮ್ ಚರಣ್ ಹೊಸ ಕಾರು? ಇದರ ಬೆಲೆ ಬರೋಬ್ಬರಿ 4 ಕೋಟಿ ರೂಪಾಯಿ