‘ಸಿಟಾಡೆಲ್’ ಟ್ರೈಲರ್ ಬಿಡುಗಡೆ, ಹೊಸ ಅವತಾರದಲ್ಲಿ ನಟಿ ಸಮಂತಾ
ಸಮಂತಾ ನಟಿಸಿರುವ ‘ಸಿಟಾಡೆಲ್: ಹನಿ-ಬನ್ನಿ’ ವೆಬ್ ಸರಣಿಯ ಬಿಡುಗಡೆ ದಿನಾಂಕ ಕೊನೆಗೂ ಘೋಷಣೆಯಾಗಿದೆ. ವರ್ಷಗಳಿಂದಲೂ ಈ ವೆಬ್ ಸರಣಿಯ ಚಿತ್ರೀಕರಣ ನಡೆಸಲಾಗಿತ್ತು.
ಸಮಂತಾ ನಟಿಸಿರುವ ಎರಡನೇ ವೆಬ್ ಸರಣಿ ‘ಸಿಟಾಡೆಲ್; ಹನಿ ಬನಿ’ ಕೊನೆಗೂ ಬಿಡುಗಡೆ ಆಗುತ್ತಿದೆ. ‘ಸಿಟಾಡೆಲ್: ಹನಿಬನಿ’ ಚಿತ್ರೀಕರಣ ಪ್ರಾರಂಭವಾಗಿ ವರ್ಷಗಳೇ ಆಗಿದ್ದವು. ಹಲವು ಅಡೆ-ತಡೆ, ವಿಳಂಬದ ಬಳಿಕ ಕೊನೆಗೂ ‘ಸಿಟಾಡೆಲ್’ ಬಿಡುಗಡೆ ದಿನಾಂಕವನ್ನು ಅಮೆಜಾನ್ ಪ್ರೈಂ ಘೋಷಣೆ ಮಾಡಿದೆ. ಜೊತೆಗೆ ವೆಬ್ ಸರಣಿಯ ಟ್ರೈಲರ್ ಅನ್ನು ಸಹ ಬಿಡುಗಡೆ ಮಾಡಿದೆ. ಸಮಂತಾ ಸಖತ್ ಭಿನ್ನ ಅವತಾರದಲ್ಲಿ ಈ ವೆಬ್ ಸರಣಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಇಂಗ್ಲೀಷ್ನಲ್ಲಿ ಬಿಡುಗಡೆ ಆಗಿರುವ ‘ಸಿಟಾಡೆಲ್’ನ ಭಾರತೀಯ ರೂಪವೇ ಈ ‘ಸಿಟಾಡೆಲ್: ಹನಿಬನಿ’ ಆಗಿದೆ. ಅಲ್ಲಲ್ಲಿ ಕೆಲವು ಬದಲಾವಣೆಗಳು ಸಹ ಇರಲಿದೆಯಂತೆ. ‘ಸಿಟಾಡೆಲ್: ಹನಿಬನಿ’ಯನ್ನು ಈ ಹಿಂದೆ ಫ್ಯಾಮಿಲಿ ಮ್ಯಾನ್, ‘ಫರ್ಜಿ’ ನಿರ್ದೇಶನ ಮಾಡಿದ್ದ ರಾಜ್ ಮತ್ತು ಡಿಕೆ ನಿರ್ದೇಶನ ಮಾಡಿದ್ದಾರೆ. ಆದರೆ ಕತೆ ಮಾತ್ರ ಹಾಲಿವುಡ್ನ ರೋಸ್ಸೊ ಬ್ರದರ್ಸ್ ಅವರದ್ದೆ. ರೊಸ್ಸೊ ಬ್ರದರ್ಸ್ ಮೂಲ ‘ಸಿಟಾಡೆಲ್’ ಅನ್ನು ನಿರ್ದೇಶನ ಮಾಡಿದ್ದಾರೆ. ಸಿಟಾಡೆಲ್: ಹನಿ-ಬನಿ ನವೆಂಬರ್ 7 ರಂದು ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಲಿದೆ.
ಇದನ್ನೂ ಓದಿ:ಸಮಂತಾ-ವರುಣ್ ನಟನೆಯ ‘ಸಿಟಾಡೆಲ್ ಹನಿ ಬನಿ’ ವೆಬ್ ಸಿರೀಸ್ ಬಿಡುಗಡೆ ದಿನಾಂಕ ಆ.1ಕ್ಕೆ ಪ್ರಕಟ
‘ಸಿಟಾಡೆಲ್: ಹನಿ ಬನಿ’ ಟ್ರೈಲರ್ನಲ್ಲಿ ಸಮಂತಾ ಗೂಢಚಾರಿಣಿಯಾಗಿ ಕಾಣಿಸಿಕೊಂಡಿದ್ದಾರೆ. ಸಮಂತಾ ಜೊತೆಗೆ ಬಾಲಿವುಡ್ ನಟ ವರುಣ್ ಧವನ್ ಸಹ ಇದ್ದಾರೆ. ವೆಬ್ ಸರಣಿ ಸಖತ್ ಆಕ್ಷನ್ ಭರಿತವಾಗಿದ್ದು, ಸಮಂತಾ ಸಹ ಹಲವು ಆಕ್ಷನ್ ದೃಶ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅದ್ಧೂರಿಯಾಗಿ ವೆಬ್ ಸರಣಿಯ ಚಿತ್ರೀಕರಣವನ್ನು ಮಾಡಲಾಗಿದ್ದು, ಭಾರತ ಸೇರಿದಂತೆ ವಿದೇಶಗಳಲ್ಲಿಯೂ ವೆಬ್ ಸರಣಿಯ ಚಿತ್ರೀಕರಣ ಮಾಡಲಾಗಿದೆ. ವೆಬ್ ಸರಣಿಯಲ್ಲಿ ಆಕ್ಷನ್ ಜೊತೆಗೆ ರೊಮ್ಯಾನ್ಸ್ ಹಾಗೂ ಸೆಂಟಿಮೆಂಟ್ ಸಹ ಇರುವುದಕ್ಕೆ ಟ್ರೈಲರ್ ನಲ್ಲಿ ಸುಳಿವುಗಳಿವೆ.
ಸಮಂತಾ ಈ ಹಿಂದೆ ‘ದಿ ಫ್ಯಾಮಿಲಿ ಮ್ಯಾನ್’ ಎರಡನೇ ಸೀಸನ್ನಲ್ಲಿ ಕೆಲ ಆಕ್ಷನ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಆ ವೆಬ್ ಸರಣಿಯಲ್ಲಿ ವಿಲನ್ ಆಗಿ ಸಮಂತಾ ನಟಿಸಿದ್ದರು. ಆದರೆ ‘ಸಿಟಾಡೆಲ್: ಹನಿಬನಿ’ಯಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಎರಡೂ ವೆಬ್ ಸರಣಿಯನ್ನು ರಾಜ್ ಮತ್ತು ಡಿಕೆ ಅವರುಗಳೇ ನಿರ್ದೇಶನ ಮಾಡಿದ್ದಾರೆ. ಇದೀಗ ಸಮಂತಾ ಹೊಸ ವೆಬ್ ಸರಣಿಯೊಂದನ್ನು ಒಪ್ಪಿಕೊಂಡಿದ್ದು, ವೆಬ್ ಸರಣಿಗೆ ‘ರಕ್ಷಬೀಜ್’ ಎಂದು ಹೆಸರಿಡಲಾಗಿದೆ. ಈ ವೆಬ್ ಸರಣಿಯನ್ನು ‘ತುಂಬಾಡ್’ ನಿರ್ದೇಶಕ ರಾಹಿ ಅನಿಲ್ ಬರವೆ ನಿರ್ದೇಶನ ಮಾಡುತ್ತಿದ್ದು, ರಾಜ್ ಮತ್ತು ಡಿಕೆ ನಿರ್ಮಾಣ ಮಾಡುತ್ತಿದ್ದಾರೆ. ಇನ್ನು ‘ನಾ ಇಂಟಿ ಬಂಗಾರಂ’ ಹೆಸರಿನ ಮಹಿಳಾ ಪ್ರಧಾನ ಸಿನಿಮಾದಲ್ಲಿಯೂ ಸಮಂತಾ ನಟಿಸುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:51 pm, Thu, 1 August 24