Sardar Udham: ಬ್ರಿಟಿಷರ ಮೇಲೆ ದ್ವೇಷ ತೋರಿಸಲಾಗಿದೆ ಎಂದು ಆಸ್ಕರ್​ಗೆ ಆಯ್ಕೆಯಾಗದ ‘ಸರ್ದಾರ್ ಉಧಮ್’; ನಿರ್ದೇಶಕರ ಪ್ರತಿಕ್ರಿಯೆ ಏನು?

| Updated By: shivaprasad.hs

Updated on: Oct 27, 2021 | 4:04 PM

Shoojit Sircar: ಪ್ರಸ್ತುತ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿರುವ ಸರ್ದಾರ್ ಉಧಮ್ ಅವರ ಜೀವನವನ್ನು ಆಧರಿಸಿದ ಅದೇ ಹೆಸರಿನ ಚಿತ್ರ ಆಸ್ಕರ್ ಸ್ಪರ್ಧೆಗೆ ಆಯ್ಕೆಯಾಗಿಲ್ಲ. ಇದಕ್ಕೆ ಬ್ರಿಟಿಷರ ವಿರುದ್ಧ ದ್ವೇಷವನ್ನು ತೋರಿಸಿರುವುದು ಕಾರಣ ಎಂದು ಆಯ್ಕೆ ಸಮಿತಿ ತಿಳಿಸಿತ್ತು. ಈ ಕುರಿತಂತೆ ನಿರ್ದೇಶಕ ಶೂಜಿತ್ ಸರ್ಕಾರ್ ಪ್ರತಿಕ್ರಿಯೆ ನೀಡಿದ್ದಾರೆ.

Sardar Udham: ಬ್ರಿಟಿಷರ ಮೇಲೆ ದ್ವೇಷ ತೋರಿಸಲಾಗಿದೆ ಎಂದು ಆಸ್ಕರ್​ಗೆ ಆಯ್ಕೆಯಾಗದ ‘ಸರ್ದಾರ್ ಉಧಮ್’; ನಿರ್ದೇಶಕರ ಪ್ರತಿಕ್ರಿಯೆ ಏನು?
ಶೂಜಿತ್ ಸರ್ಕಾರ್ ಹಾಗೂ ವಿಕ್ಕಿ ಕೌಶಲ್ (ಎಡ ಚಿತ್ರ), ಸರ್ದಾರ್ ಉಧಾಮ್ ಸಿಂಗ್ ಚಿತ್ರದ ಪೋಸ್ಟರ್
Follow us on

ಇತ್ತೀಚೆಗೆ ನೇರವಾಗಿ ಒಟಿಟಿಯಲ್ಲಿ ಬಿಡುಗಡೆಯಾದ ‘ಸರ್ದಾರ್ ಉಧಮ್’ ಚಲನಚಿತ್ರ ಅಪಾರ ಮೆಚ್ಚುಗೆ ಪಡೆಯುತ್ತಿದೆ. ಭಾರತದಿಂದ ಆಸ್ಕರ್ ಸ್ಪರ್ಧೆಗೆ ಈ ಚಿತ್ರ ಪ್ರವೇಶ ಪಡೆಯಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಪ್ರವೇಶ ಪಡೆದಿಲ್ಲ. ಇದರ ಬದಲಾಗಿ ತಮಿಳಿನ ‘ಕೂಳಂಗಳ್’ ಚಿತ್ರವು ಆಸ್ಕರ್​ಗೆ ಪ್ರವೇಶ ಪಡೆದಿತ್ತು. ಸರ್ದಾರ್ ಉಧಮ್ ಆಯ್ಕೆಯಾಗದಿರಲು ಚಿತ್ರದಲ್ಲಿ ಬ್ರಿಟಿಷರ ವಿರುದ್ಧ ದ್ವೇಷ ತೋರಿಸಿದ್ದು ಪ್ರಮುಖ ಕಾರಣ ಎಂದು ಆಯ್ಕೆ ಸಮಿತಿ ಸದಸ್ಯರು ತಿಳಿಸಿದ್ದರು. ಇದೀಗ ನಿರ್ದೇಶಕ ಶೂಜಿತ್ ಸರ್ಕಾರ್ ಈ ಕುರಿತಂತೆ ಪ್ರತಿಕ್ರಿಯೆ ನೀಡಿದ್ದಾರೆ. ಆಯ್ಕೆ ಸಮಿತಿಯ ನಿರ್ಧಾರವನ್ನು ತಾವು ಗೌರವಿಸುವುದಾಗಿ ಅವರು ತಿಳಿಸಿದ್ದಾರೆ. 

ಮಾಧ್ಯಮವೊಂದು ವರದಿ ಮಾಡಿರುವಂತೆ, ಶೂಜಿತ್ ಸಂದರ್ಶನವೊಂದರಲ್ಲಿ ಆಸ್ಕರ್​ಗೆ ಆಯ್ಕಯಾಗದಿರುವ ಕುರಿತು ಮಾತನಾಡಿದ್ದಾರೆ. ‘ಇದು ವೈಯಕ್ತಿಕ ಅಭಿಪ್ರಾಯ. ಆಯ್ಕೆ ಸಮಿತಿಯ ನಿರ್ಧಾರವನ್ನು ತಾನು ಗೌರವಿಸುತ್ತೇನೆ’ ಎಂದು ಅವರು ನುಡಿದಿದ್ದಾರೆ. ಆಯ್ಕೆ ಸಮಿತಿಯ ಸದಸ್ಯರು ‘ಸರ್ದಾರ್ ಉಧಮ್’ ಚಿತ್ರ ಏಕೆ ಆಯ್ಕೆಯಾಗಲಿಲ್ಲ ಎಂದು ಇತ್ತೀಚೆಗೆ ತಿಳಿಸಿದ್ದರು. ಇಂದ್ರದೀಪ್ ದಾಸ್​ಗುಪ್ತಾ ಮಾತನಾಡುತ್ತಾ, ‘‘ಸರ್ದಾರ್ ಉಧಮ್ ಚಿತ್ರದಲ್ಲಿ ತುಸು ದೀರ್ಘವಾಗಿ ಜಲಿಯನ್ ವಾಲಾಬಾಗ್ ದೃಶ್ಯಗಳನ್ನು ತೋರಿಸಲಾಗಿದೆ. ಭಾರತದ ಸ್ವಾತಂತ್ರ್ಯ ಚಳವಳಿಯ ತೆರೆಮರೆಯ ನಾಯಕರನ್ನು ಚಿತ್ರದಲ್ಲಿ ತೋರಿಸಿರುವುದು ಬಹಳ ಒಳ್ಳೆಯ ಪ್ರಯತ್ನ’’ ಎಂದಿದ್ದರು.

ಆದರೆ ಚಿತ್ರ ಆಯ್ಕೆಯಾಗದಿದ್ದ ಕಾರಣವನ್ನು ತಿಳಿಸಿದ್ದ ಇಂದ್ರದೀಪ್, ‘‘ಚಿತ್ರದಲ್ಲಿ ಬ್ರಿಟೀಷರ ಕುರಿತು ನಮಗಿರುವ ದ್ವೇಷವನ್ನು ತೋರಿಸಲಾಗಿತ್ತು. ಆದರೆ ಜಾಗತೀಕರಣದ ಈ ಸಂದರ್ಭದಲ್ಲಿ ದ್ವೇಷವನ್ನು ಬಿಂಬಿಸುವುದು ಸರಿಯಾದ ನಿಲುವಲ್ಲ’’ ಎಂದಿದ್ದರು. ಮತ್ತೊಬ್ಬ ಆಯ್ಕೆ ಸಮಿತಿಯ ಸದಸ್ಯರಾದ ಸುಮಿತ್ ಬಸು ಮಾತನಾಡಿ, ‘‘ಚಿತ್ರ ತಾಂತ್ರಿಕವಾಗಿ ಸೇರಿದಂತೆ ಎಲ್ಲಾ ವಿಭಾಗದಲ್ಲಿ ಬಲಿಷ್ಠವಾಗಿದೆ. ಆದರೆ ಚಿತ್ರದ ಅವಧಿ ಬಹಳ ದೀರ್ಘವಾಗಿದೆ. ಹಾಗೂ ಕ್ಲೈಮ್ಯಾಕ್ಸ್ ಬಹಳ ನಿಧಾನಗತಿಯನ್ನು ಹೊಂದಿದೆ. ನೋಡುಗರಿಗೆ ಜಲಿಯನ್ ವಾಲಾಭಾಗ್​ನ ನೈಜ ನೋವನ್ನು ಅನುಭವಿಸಲು ಬಹಳ ಸಮಯ ಬೇಕಾಗುತ್ತದೆ’’ ಎಂದಿದ್ದರು. ಆಯ್ಕೆ ಮಂಡಳಿಯ ನಿರ್ಧಾರಕ್ಕೆ ಭಾರತೀಯರಿಂದ ಟೀಕೆ ವ್ಯಕ್ತವಾಗಿತ್ತು.

ಈ ಹಿಂದೆ ಚಿತ್ರದ ಕುರಿತು ಮಾತನಾಡುತ್ತಾ ನಿರ್ದೇಶಕ ಶೂಜಿತ್ ಸರ್ಕಾರ್, ‘‘ಇತಿಹಾಸದಲ್ಲಿ ಸರ್ದಾರ್ ಉಧಮ್ ಸಿಂಗ್ ಕುರಿತು ಹೆಚ್ಚಿನ ಮಾಹಿತಿ ಇಲ್ಲ. ಆತನಿಗೆ ಪಂಜಾಬ್ ಹೊರತಾದ ಬಹುದೊಡ್ಡ ಉದ್ದೇಶವಿತ್ತು. ಕಲ್ಪನೆಯಿತ್ತು. ಆದರೆ ಬಹಳಷ್ಟು ಜನರಿಗೆ ಆತನ ಪರಿಚಯವಿಲ್ಲ. ಇದು ಸಂಪೂರ್ಣವಾಗಿ ಕ್ರಾಂತಿಯನ್ನು ನೋಡುವ ನನ್ನ ದೃಷ್ಟಿಕೋನ. ಕ್ರಾಂತಿಯನ್ನು ಇನ್ನೂ ಹಲವಾರು ವಿಧಾನದಲ್ಲಿ ನೋಡಬಹುದು. ಆದರೆ ಇದು ನನ್ನ ಆಯಾಮ’’ ಎಂದಿದ್ದರು.

ಅಕ್ಟೋಬರ್ 16ರಂದು ಸರ್ದಾರ್ ಉಧಮ್ ಚಿತ್ರ ಆಮೆಜಾನ್ ಪ್ರೈಮ್​ನಲ್ಲಿ ಬಿಡುಗಡೆಯಾಗಿತ್ತು. ನಟ ವಿಕ್ಕಿ ಕೌಶಲ್ ಇದರಲ್ಲಿ ಸರ್ದಾರ್ ಉಧಮ್ ಸಿಂಗ್ ಪಾತ್ರ ಮಾಡಿದ್ದಾರೆ. ರಿತೇಶ್ ಶಾ ಹಾಗೂ ಶುಭೇಂದು ಭಟ್ಟಾಚಾರ್ಯ ಬರೆದಿರುವ ಈ ಚಿತ್ರಕ್ಕೆ ಶೂಜಿತ್ ಸರ್ಕಾರ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ:

‘ಓವರ್​ ಆ್ಯಕ್ಟಿಂಗ್​ ಬೇಡ’; ವೇದಿಕೆ ಮೇಲೆಯೇ ಶಿವರಾಜ್​ಕುಮಾರ್​ ವಾರ್ನಿಂಗ್

‘ತ್ರಿಶೂಲಂ’ ಶೂಟಿಂಗ್​ಗೆ ಅಡ್ಡಿ; ‘ಕರ್ನಾಟಕದಲ್ಲಿ ಹೇಗೆ ತೆಲುಗು ಚಿತ್ರ ರಿಲೀಸ್ ಮಾಡುತ್ತಾರೆ ನೋಡುತ್ತೇವೆ’- ನಿರ್ಮಾಪಕ ಶ್ರೀನಿವಾಸ್ ಸವಾಲ್

Published On - 4:01 pm, Wed, 27 October 21