‘ಒನ್​ ರೈಟ್​ ಕಿಕ್​’ ಕಿರುಚಿತ್ರಕ್ಕೆ 12 ಅಂತಾರಾಷ್ಟ್ರೀಯ ಪ್ರಶಸ್ತಿ; ನಟಿ ಸಿಂಹಿಕಾ ಬಿಚ್ಚಿಟ್ಟ ರಹಸ್ಯ

| Updated By: Digi Tech Desk

Updated on: Dec 11, 2021 | 3:51 PM

ಮಂಗಳೂರು ಮೂಲದ ಬಾಲಚಂದಿರ್​ ಅವರು ಈ ಕಿರುಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಇದು ಸಾಕಷ್ಟು ಅಂತಾರಾಷ್ಟ್ರೀಯ ಸಿನಿಮಾ ಉತ್ಸವಗಳಲ್ಲಿ ಪ್ರದರ್ಶನ ಕಂಡಿದೆ.

‘ಒನ್​ ರೈಟ್​ ಕಿಕ್​’ ಕಿರುಚಿತ್ರಕ್ಕೆ 12 ಅಂತಾರಾಷ್ಟ್ರೀಯ ಪ್ರಶಸ್ತಿ; ನಟಿ ಸಿಂಹಿಕಾ ಬಿಚ್ಚಿಟ್ಟ ರಹಸ್ಯ
ಸಿಂಹಿಕಾ
Follow us on

ಹೇಳುತ್ತಿರುವ ವಿಚಾರ ಅದೆಷ್ಟೇ ಚಿಕ್ಕದಾಗಿದ್ದರೂ ಅದನ್ನು ಸರಿಯಾದ ರೀತಿಯಲ್ಲಿ ಜನರ ಮುಂದೆ ಇಟ್ಟರೆ ಅದನ್ನು ಒಪ್ಪಿಕೊಳ್ಳುತ್ತಾರೆ. ಇದಕ್ಕೆ ಹೊಸ ಉದಾಹರಣೆ ‘ಒನ್​ ರೈಟ್​ ಕಿಕ್​’ ಹೆಸರಿನ ಶಾರ್ಟ್​ ಸಿನಿಮಾ. ಮಂಗಳೂರು ಮೂಲದ ಬಾಲಚಂದಿರ್​ ಮುತ್ತಪ್ಪ ನಿರ್ದೇಶನದ, ಸಿಂಹಿಕಾ ನಟನೆಯ ಈ ಕಿರುಚಿತ್ರ ಬರೋಬ್ಬರಿ 12 ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಈ ವಿಚಾರ ಇಡೀ ತಂಡಕ್ಕೆ ಖುಷಿ ತಂದಿದೆ. ಈ ಬಗ್ಗೆ ಸಿಂಹಿಕಾ ಟಿವಿ9 ಕನ್ನಡದ ಜತೆಗೆ ಮಾತನಾಡಿದ್ದಾರೆ.

ಸಾಕಷ್ಟು ಹೆಣ್ಣುಮಕ್ಕಳು ಸಮಾಜಕ್ಕೆ ಹೆದರಿ ಬದುಕುತ್ತಿರುತ್ತಾರೆ. ಆದರೆ, ಭಯವನ್ನು ಮೀರಿ ಬದುಕಬೇಕು ಎಂಬ ಸಂದೇಶದೊಂದಿಗೆ ಈ ಕಿರುಚಿತ್ರವಿದೆ. ‘ಕಿರುಚಿತ್ರದಲ್ಲಿ ಬರುವ ಹೆಣ್ಣುಮಗಳು ಸೌಮ್ಯ ಸ್ವಭಾವದವಳು. ಅವಳು ಹೆದರುತ್ತಲೇ ಬದುಕುತ್ತಾಳೆ. ಆದರೆ, ಒಂದು ದಿನ ಅವಳು ಸಿಡಿದೇಳುತ್ತಾಳೆ. ನಂತರ ಎಲ್ಲವೂ ಬದಲಾಗುತ್ತದೆ. ಧೈರ್ಯಂ ಸರ್ವತ್ರ ಸಾಧನಂ ಎನ್ನುವ ಥೀಮ್​ನಲ್ಲಿ ಈ ಕಿರುಚಿತ್ರ ಮೂಡಿ ಬಂದಿದೆ. ಈ ಕಾರಣಕ್ಕೆ ಇಷ್ಟೊಂದು ಪ್ರಶಸ್ತಿ ಬಂದಿದೆ’ ಎನ್ನುತ್ತಾರೆ ಸಿಂಹಿಕಾ.

‘ನಾನು ಚಿಕ್ಕವಳಿದ್ದಾಗ ಸಾಕಷ್ಟು ಭಯಪಡುತ್ತಿದ್ದೆ. ಕಿರುಚಿತ್ರದಲ್ಲಿ ಬರುವ ಪಾತ್ರವೂ ಹಾಗೆಯೇ ಇದೆ. ಈ ಕಾರಣಕ್ಕೆ ನಾನು ಹೆಚ್ಚು ಕನೆಕ್ಟ್​ ಆದೆ. ಈ ಶಾರ್ಟ್​ ಸಿನಿಮಾ ಮಾಡಿದ್ದು ತುಂಬಾನೇ ಖುಷಿ ನೀಡಿದೆ. ಹೆಣ್ಣುಮಕ್ಕಳು ತಮ್ಮ ವಿರುದ್ಧ ಆಗುತ್ತಿರುವ ಕಿರುಕುಳದ ವಿರುದ್ಧ ಹೇಗೆ ತಿರುಗಿ ಬೀಳಬೇಕು ಎನ್ನುವುದನ್ನು ಈ ಕಿರುಚಿತ್ರದಲ್ಲಿ ಹೇಳಲಾಗಿದೆ’ ಎನ್ನುತ್ತಾರೆ ಸಿಂಹಿಕಾ.

ಮಂಗಳೂರು ಮೂಲದ ಬಾಲಚಂದಿರ್​ ಅವರು ಈ ಕಿರುಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಇದು ಸಾಕಷ್ಟು ಅಂತಾರಾಷ್ಟ್ರೀಯ ಸಿನಿಮಾ ಉತ್ಸವಗಳಲ್ಲಿ ಪ್ರದರ್ಶನ ಕಂಡಿದೆ. ಸಿಂಗಾಪುರ್​ ಅಂತಾರಾಷ್ಟ್ರೀಯ ಸಿನಿಮೋತ್ಸವ, ಇಂಡೋ-ಫ್ರೆಂಚ್​ ಅಂತಾರಾಷ್ಟ್ರೀಯ ಸಿನಿಮೋತ್ಸವ ಸೇರಿ 12 ಪ್ರಶಸ್ತಿಗಳನ್ನು ಬಾಚಿಕೊಂಡಿದೆ.

ಸಿಂಹಿಕಾ ನಟನೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಕೆಲ ವರ್ಷಗಳ ಹಿಂದೆ ಅನುಪಮ್ ಖೇರ್ ಅವರ ನಟನಾ ಶಾಲೆಯಲ್ಲಿ ತರಬೇತಿ ಪಡೆದುಬಂದಿದ್ದಾರೆ. ಈ ಮೊದಲು ಒಂದು ಮ್ಯೂಸಿಕ್​ ವಿಡಿಯೋದಲ್ಲಿ ಅವರು ಕಾಣಿಸಿಕೊಂಡಿದ್ದರು. ಇದು ಅವರ ಮೊದಲ ಕಿರುಚಿತ್ರ. ಈಗ ಹೆಚ್ಚಿನ ನಟನಾ ತರಬೇತಿಗೆ ಅಮೆರಿಕಕ್ಕೆ ತೆರಳುತ್ತಿದ್ದಾರೆ. ಅದಾದ ನಂತರದಲ್ಲಿ ಮುಂದಿನ ಆಲೋಚನೆಗಳನ್ನು ಮಾಡುವ ಉದ್ದೇಶವನ್ನು ಅವರು ಇಟ್ಟುಕೊಂಡಿದ್ದಾರೆ. ಈ ಕಿರುಚಿತ್ರ ಯೂಟ್ಯೂಬ್​ನಲ್ಲಿ ರಿಲೀಸ್ ಆಗಿಲ್ಲ. ಶೀಘ್ರವೇ ಇದು ಒಟಿಟಿಯಲ್ಲಿ ರಿಲೀಸ್​ ಆಗಲಿದೆ. ಈ ಕಿರುಚಿತ್ರದಲ್ಲಿ ಸಿಂಹಿಕಾ ಮಾತ್ರವಲ್ಲದೆ, ರಮೇಶ್​ ಪಾಟೀಲ್​ ಹಾಗೂ ಮೋಹನ್​ ಕುಮಾರ್​ ಕೂಡ ನಟಿಸಿದ್ದಾರೆ.

ಇದನ್ನೂ ಓದಿ: National Film Awards 2019: ರಾಷ್ಟ್ರ ಪ್ರಶಸ್ತಿ ಪಡೆದ ಕನ್ನಡದ ‘ಅಕ್ಷಿ’ ಚಿತ್ರಕ್ಕೂ ಡಾ. ರಾಜ್​ಕುಮಾರ್​​ಗೂ ಇದೆ ಸಂಬಂಧ!

ಖ್ಯಾತ ನಟ ಅನುಪಮ್​ ಖೇರ್​​ಗೆ ಅಮೆರಿಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್​ ಪ್ರದಾನ

Published On - 6:44 pm, Fri, 10 December 21