ವಿಜಯ್ ದೇವರಕೊಂಡ (Vijay Deverakonda) ಸಾಲು-ಸಾಲು ಫ್ಲಾಪ್ ಸಿನಿಮಾಗಳನ್ನು ನೀಡುತ್ತಿದ್ದರೆ, ಅವರ ಸಹೋದರ ಆನಂದ್ ದೇವರಕೊಂಡ ಮಾತ್ರ ಸಣ್ಣ-ಪುಟ್ಟ ಸಿನಿಮಾಗಳನ್ನೇ ಮಾಡುತ್ತಾ ಹಿಟ್ ಮೇಲೆ ಹಿಟ್ ಸಿನಿಮಾಗಳನ್ನು ನೀಡುತ್ತಿದ್ದಾರೆ. ಆನಂದ್ ದೇವರಕೊಂಡ ಇತ್ತೀಚೆಗೆ ನಟಿಸಿರುವ ‘ಬೇಬಿ‘ (Baby) ಸಿನಿಮಾ ಸೂಪರ್ ಡೂಪರ್ ಹಿಟ್ ಎನಿಸಿಕೊಂಡಿದೆ. ಕಡಿಮೆ ಬಜೆಟ್ನಲ್ಲಿ ತಯಾರಾದ ಈ ಸಿನಿಮಾ 100 ಕೋಟಿ ಕಲೆಕ್ಷನ್ ದಾಟಿದೆ. ಪರರಾಜ್ಯಗಳಲ್ಲಿಯೂ ಉತ್ತಮ ಪ್ರದರ್ಶನ ಕಂಡಿದೆ. ಇದೀಗ ಈ ಸಿನಿಮಾ ಒಟಿಟಿಗೆ ಬರುತ್ತಿದೆ.
‘ಬೇಬಿ’ ಸಿನಿಮಾ ತೆಲುಗಿನ ಆಹಾ ಒಟಿಟಿಯಲ್ಲಿ ಬಿಡುಗಡೆ ಆಗುತ್ತಿದೆ. ಆಗಸ್ಟ್ 26ರಿಂದ ಆಹಾನಲ್ಲಿ ‘ಬೇಬಿ’ ಸಿನಿಮಾ ಸ್ಟ್ರೀಂ ಆಗಲಿದೆ. ಕೇವಲ 9 ಕೋಟಿ ಬಜೆಟ್ನಲ್ಲಿ ನಿರ್ಮಾಣವಾಗಿದ್ದ ‘ಬೇಬಿ’ ಸಿನಿಮಾ ಜುಲೈ 14ರಂದು ಬಿಡುಗಡೆ ಆಗಿತ್ತು. ಬಿಡುಗಡೆ ಆದ ಕೆಲವೇ ದಿನಗಳಲ್ಲಿ ಶೋಗಳ ಸಂಖ್ಯೆ ದುಪ್ಪಟ್ಟಾಯಿತಲ್ಲದೆ ಯುವ ಜನರು ಮುಗಿಬಿದ್ದು ಸಿನಿಮಾ ನೋಡಿದರು. ಕೆಲವೇ ದಿನಗಳಲ್ಲಿ ಸಿನಿಮಾದ ಕಲೆಕ್ಷನ್ ನೂರು ಕೋಟಿ ದಾಟಿತು.
ಇದೀಗ ‘ಬೇಬಿ’ ಸಿನಿಮಾವು ಆಹಾ ಒಟಿಟಿಯಲ್ಲಿ ಬಿಡುಗಡೆ ಆಗುತ್ತಿರುವುದು ಕೆಲವರಿಗೆ ಆಶ್ಚರ್ಯವನ್ನೂ ಉಂಟು ಮಾಡಿದೆ. ಸೂಪರ್ ಹಿಟ್ ಆಗಿರುವ ‘ಬೇಬಿ’ ಸಿನಿಮಾವನ್ನು ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಬಳಕೆದಾರರಿರುವ ಒಟಿಟಿಗಳಿಗೆ ನೀಡದೆ ತೆಲುಗು ಭಾಷೆಗಷ್ಟೆ ಸೀಮಿತವಾಗಿರುವ ಕಡಿಮೆ ಬಳಕೆದಾರರಿರುವ ‘ಆಹಾ’ ಒಟಿಟಿಗೆ ನೀಡಿರುವುದು ಜಾಣ ನಡೆಯಲ್ಲ ಎಂದು ಕೆಲವು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನೊಂದು ಮಾಹಿತಿಯ ಪ್ರಕಾರ, ‘ಆಹಾ’ ಒಟಿಟಿಯ ಜೊತೆಗೆ ಜೀ5ನಲ್ಲಿಯೂ ಈ ಸಿನಿಮಾ ಸ್ಟ್ರೀಂ ಆಗಲಿದೆ ಎನ್ನಲಾಗುತ್ತಿದೆ.
‘ಬೇಬಿ’ ಸಿನಿಮಾ ಸೂಪರ್ ಹಿಟ್ ಆಗಿರುವ ಜೊತೆಗೆ ಕೆಲವು ಟೀಕೆಗಳನ್ನೂ ಸಹ ಎದುರಿಸಿದೆ. ಈ ಸಿನಿಮಾ ಮಹಿಳಾ ವಿರೋಧಿ ಎಂಬ ಮಾತುಗಳು ಕೇಳಿ ಬಂದಿವೆ. ಯುವತಿಯರ ವ್ಯಕ್ತಿತ್ವವನ್ನು ಕೆಟ್ಟದಾಗಿ ಸಿನಿಮಾದಲ್ಲಿ ಬಿಂಬಿಸಲಾಗಿದೆ ಎಂದು ಕೆಲವರು ಆರೋಪಿಸಿದ್ದಾರೆ. ಸಿನಿಮಾವು ತ್ರಿಕೋನ ಪ್ರೇಮಕತೆಯನ್ನು ಆಧರಿಸಿದ್ದು, ಸಿನಿಮಾದಲ್ಲಿ ನಾಯಕಿಯು ಒಂದೇ ಸಮಯಕ್ಕೆ ಇಬ್ಬರನ್ನು ಪ್ರೀತಿಸುತ್ತಾಳೆ, ಕೊನೆಗೆ ಮೂರನೇ ವ್ಯಕ್ತಿಯನ್ನು ಮದುವೆಯಾಗುತ್ತಾಳೆ. ಸಿನಿಮಾದಲ್ಲಿ ವಿಜಯ್ ದೇವರಕೊಂಡ ಸಹೋದರ ಆನಂದ್ ದೇವರಕೊಂಡ ಆಟೋ ಚಾಲಕನ ಪಾತ್ರದಲ್ಲಿ ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ