2024ರಲ್ಲಿ ಗೆಲುವು ಕಂಡಿರುವ ಕೆಲವೇ ಸಿನಿಮಾಗಳ ಪಟ್ಟಿಯಲ್ಲಿ ‘ಹನುಮಾನ್’ ಸಿನಿಮಾ (Hanu Man Movie) ಕೂಡ ಇದೆ. ಈ ಸಿನಿಮಾಗೆ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದಾರೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ ಹಲವು ಭಾಷೆಯಲ್ಲಿ ತೆರೆಕಂಡ ‘ಹನುಮಾನ್’ ಸಿನಿಮಾದಲ್ಲಿ ಸೂಪರ್ ಹೀರೋ ಕಹಾನಿ ಇದೆ. ಕೆಲವರು ಈ ಸಿನಿಮಾವನ್ನು ಚಿತ್ರಮಂದಿರದಲ್ಲಿ ಮಿಸ್ ಮಾಡಿಕೊಂಡಿದ್ದಾರೆ. ಅನೇಕರು ಮತ್ತೊಮ್ಮೆ ಒಟಿಟಿಯಲ್ಲಿ (OTT) ನೋಡಲು ಬಯಸಿದ್ದಾರೆ. ಆದರೆ ಒಟಿಟಿಯಲ್ಲಿ ‘ಹನುಮಾನ್’ ಸಿನಿಮಾವನ್ನು ನೋಡಬೇಕು ಎಂದು ಕಾದಿದ್ದ ಅಭಿಮಾನಿಗಳಿಗೆ ನಿರಾಸೆ ಆಗಿದೆ. ಈ ಸಿನಿಮಾದ ಒಟಿಟಿ ರಿಲೀಸ್ (Hanu Man OTT Release) ತಡವಾಗಿದೆ.
ತೇಜ ಸಜ್ಜಾ ಅವರು ‘ಹನುಮಾನ್’ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದು, ಪ್ರಶಾಂತ್ ವರ್ಮಾ ಅವರು ನಿರ್ದೇಶನ ಮಾಡಿದ್ದಾರೆ. ಚಿತ್ರಮಂದಿರದಲ್ಲಿ ಈ ಸಿನಿಮಾ 50 ಡೇಸ್ ಪೂರೈಸಿದೆ. ಈ ಕಾಲದಲ್ಲಿ ಯಾವುದೇ ಸಿನಿಮಾ 50 ದಿನ ಪ್ರದರ್ಶನ ಕಾಣುತ್ತದೆ ಎಂದರೆ ಅದು ನಿಜಕ್ಕೂ ಸಾಧನೆ. ಜನರಿಂದ ಇಷ್ಟೊಂದು ಮೆಚ್ಚುಗೆ ಪಡೆದ ಈ ಸಿನಿಮಾವನ್ನು ಒಟಿಟಿಯಲ್ಲಿ ಪ್ರಸಾರ ಮಾಡಲು ವಿಘ್ನ ಎದುರಾದಂತಿದೆ.
ಇದನ್ನೂ ಓದಿ: 25 ದಿನಗಳಲ್ಲಿ 300 ಕೋಟಿ ರೂಪಾಯಿ ಗಳಿಸಿದ ‘ಹನುಮಾನ್’ ಸಿನಿಮಾ
‘ಹನುಮಾನ್’ ಸಿನಿಮಾದ ಒಟಿಟಿ ರಿಲೀಸ್ ಬಗ್ಗೆ ಕೆಲವೇ ದಿನಗಳ ಹಿಂದೆ ಒಂದು ಸುದ್ದಿ ಹರಿದಾಡಿತ್ತು. ಮಾರ್ಚ್ 8ರಂದು ಈ ಸಿನಿಮಾದ ಸ್ಟ್ರೀಮಿಂಗ್ ಆರಂಭ ಆಗಲಿದೆ ಎಂದು ಹೇಳಲಾಗಿತ್ತು. ವರದಿಗಳ ಪ್ರಕಾರ, ‘ಜೀ5’ ಬಳಿ ‘ಹನುಮಾನ್’ ಸಿನಿಮಾದ ಒಟಿಟಿ ಪ್ರಸಾರ ಹಕ್ಕುಗಳು ಇವೆ. ಆದರೆ ಅಂದುಕೊಂಡ ದಿನಾಂಕ ಸಮೀಪಿಸಿದರೂ ಕೂಡ ಒಟಿಟಿ ರಿಲೀಸ್ ಬಗ್ಗೆ ಯಾವುದೇ ಮಾಹಿತಿ ಹೊರಬಿದ್ದಿಲ್ಲ.
Hanuman when they r going to release please confirm..
— ąɓɱ™ (@meanandbabu) March 7, 2024
ಸೋಶಿಯಲ್ ಮೀಡಿಯಾ ಬಳಕೆದಾರರೊಬ್ಬರು ‘ಹನುಮಾನ್’ ಸಿನಿಮಾದ ಒಟಿಟಿ ರಿಲೀಸ್ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ‘ಹನುಮಾನ್ ಚಿತ್ರ ಒಟಿಟಿಯಲ್ಲಿ ಯಾವಾಗ ರಿಲೀಸ್ ಆಗಲಿದೆ? ದಯವಿಟ್ಟು ಕನ್ಫರ್ಮ್ ಮಾಡಿ’ ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡಲಾಗಿದೆ. ಅದಕ್ಕೆ ಉತ್ತರಿಸಿದ ‘ಜೀ5’ ಸಂಸ್ಥೆಯು ‘ಈ ಬಗ್ಗೆ ನಮಗೆ ಯಾವುದೇ ಅಪ್ಡೇಟ್ ಬಂದಿಲ್ಲ. ಹೆಚ್ಚಿನ ಮಾಹಿತಿಗಾಗಿ ನಮ್ಮ ಸೋಶಿಯಲ್ ಮೀಡಿಯಾ ಖಾತೆ ಮತ್ತು ವೆಬ್ಸೈಟ್ ನೋಡುತ್ತಿರಿ’ ಎಂದು ಪೋಸ್ಟ್ ಮಾಡಿದೆ.
ಇದನ್ನೂ ಓದಿ: ಹಿಂದಿಯಲ್ಲಿ ‘ಕೆಜಿಎಫ್’ ಮಾಡಿದ್ದ ದಾಖಲೆ ಮುರಿದ ‘ಹನುಮಾನ್’ ಸಿನಿಮಾ
‘ಹನುಮಾನ್’ ಸಿನಿಮಾ ವಿಶ್ವಾದ್ಯಂತ 300 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಕನ್ನಡದ ನಟಿ ಅಮೃತಾ ಅಯ್ಯರ್, ರಾಜ್ ದೀಪಕ್ ಶೆಟ್ಟಿ, ವಿನಯ್ ರೈ, ವರಲಕ್ಷ್ಮೀ ಶರತ್ಕುಮಾರ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಸೀಕ್ವೆಲ್ ಕೂಡ ಸಿದ್ಧವಾಗುತ್ತಿದೆ. ಸೀಕ್ವೆಲ್ಗೆ ‘ಜೈ ಹನುಮಾನ್’ ಎಂದು ಶೀರ್ಷಿಕೆ ಇಡಲಾಗಿದೆ. ಬಹುಕೋಟಿ ರೂಪಾಯಿ ಬಜೆಟ್ನಲ್ಲಿ ಸೀಕ್ವೆಲ್ ಮೂಡಿಬರಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.