Jio Cinema: ವಿಕ್ರಮ್​ ರವಿಚಂದ್ರನ್​-ಅದಿತಿ ಪ್ರಭುದೇವ ಹೊಸ ವೆಬ್​ ಸಿರೀಸ್​ ‘ಲವ್​ ಯೂ ಅಭಿ’ ಮೇ 19ಕ್ಕೆ ಬಿಡುಗಡೆ

|

Updated on: May 17, 2023 | 4:11 PM

Love You Abhi: ಇದೇ ಮೊದಲ ಬಾರಿಗೆ ಅದಿತಿ ಪ್ರಭುದೇವ ಹಾಗೂ ವಿಕ್ರಮ್​ ರವಿಚಂದ್ರನ್​ ಅವರು ವೆಬ್​ ಸಿರೀಸ್​ನಲ್ಲಿ ನಟಿಸಿದ್ದಾರೆ. ‘ಜಿಯೋ ಸಿನಿಮಾ’ ಒಟಿಟಿಯಲ್ಲಿ ಇದು ಉಚಿತವಾಗಿ ಪ್ರಸಾರ ಆಗಲಿದೆ.

Jio Cinema: ವಿಕ್ರಮ್​ ರವಿಚಂದ್ರನ್​-ಅದಿತಿ ಪ್ರಭುದೇವ ಹೊಸ ವೆಬ್​ ಸಿರೀಸ್​ ‘ಲವ್​ ಯೂ ಅಭಿ’ ಮೇ 19ಕ್ಕೆ ಬಿಡುಗಡೆ
ಅದಿತಿ ಪ್ರಭುದೇವ, ವಿಕ್ರಮ್ ರವಿಚಂದ್ರನ್
Follow us on

ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ವಿಕ್ರಮ್​ ರವಿಚಂದ್ರನ್​ (Vikram Ravichandran) ಮತ್ತು ಅದಿತಿ ಪ್ರಭುದೇವ (Aditi Prabhudeva) ಅವರು ಇದೇ ಮೊದಲ ಬಾರಿಗೆ ವೆಬ್​ ಸಿರೀಸ್​ ಲೋಕಕ್ಕೆ ಎಂಟ್ರಿ ನೀಡಿದ್ದಾರೆ. ಇವರಿಬ್ಬರು ಜೊತೆಯಾಗಿ ಒಂದು ವೆಬ್​ ಸರಣಿಯಲ್ಲಿ ನಟಿಸಿದ್ದಾರೆ. ‘ಲವ್​ ಯೂ ಅಭಿ’ ಎಂಬುದು ಇದರ ಶೀರ್ಷಿಕೆ. ‘ಜಿಯೋ ಸಿನಿಮಾ’ ಮೂಲಕ ಇದು ಪ್ರಸಾರ ಆಗಲಿದೆ. ಕನ್ನಡದಲ್ಲಿ ವೆಬ್ ಸಿರೀಸ್​ಗಳ ಸಂಖ್ಯೆ ಕಡಿಮೆ. ಆ ಕೊರತೆಯನ್ನು ನೀಗಿಸುವ ರೀತಿಯಲ್ಲಿ ‘ಲವ್​ ಯೂ ಅಭಿ’ ಸೇರ್ಪಡೆ ಆಗಿದೆ. ಅಂದಹಾಗೆ, ಇದನ್ನು ಜಿಯೋ ಸಿನಿಮಾ’ (Jio Cinema) ಒಟಿಟಿಯಲ್ಲಿ ಉಚಿತವಾಗಿ ವೀಕ್ಷಿಸಬಹುದು. ಮೇ 19ರಂದು ಈ ವೆಬ್​ ಸಿರೀಸ್​ ಬಿಡುಗಡೆ ಆಗಲಿದೆ. ಕಾಳಿ ವೇಲಾಯುಧಂ ನಿರ್ಮಾಣ ಮಾಡಿ, ನಿರ್ದೇಶಿಸಿದ್ದಾರೆ.

ರವಿಚಂದ್ರನ್‌ ಅವರ ಪುತ್ರ ವಿಕ್ರಮ್‌ ರವಿಚಂದ್ರನ್ ಅವರಿಗೆ ಇದು ಮೊದಲ ವೆಬ್‌ ಸಿರೀಸ್‌. ಶಿವ ಎಂಬ ತಮ್ಮ ಪಾತ್ರದ ಕುರಿತು ಅವರು ಮಾತನಾಡಿದ್ದಾರೆ. ‘ಶಿವ ನಿಮ್ಮನ್ನು ಕಾಡುತ್ತಾನೆ, ನಿಮ್ಮ ಮನಸ್ಸನ್ನು ಚುಚ್ಚುತ್ತಾನೆ. ಯಾಕೆಂದರೆ ಈ ಶಿವ ಎಲ್ಲರೊಳಗೂ ಇದ್ದಾನೆ. ಹಲವು ನಿಗೂಢಗಳನ್ನು ಮನಸ್ಸಿನಲ್ಲಿಟ್ಟುಕೊಂಡು, ಅದನ್ನು ಯಾರೊಂದಿಗೂ ಹಂಚಿಕೊಳ್ಳದ ವ್ಯಕ್ತಿ ಆತ. ಒಂದೊಮ್ಮೆ ಅವನು ಹಂಚಿಕೊಳ್ಳಲು ಯತ್ನಿಸಿದರೂ ಪರಿಸ್ಥಿತಿ ಅದಕ್ಕೆ ವಿರುದ್ಧವಾದ ಸನ್ನಿವೇಶವನ್ನು ಸೃಷ್ಟಿಸಿಬಿಡುತ್ತದೆ’ ಎಂದಿದ್ದಾರೆ ವಿಕ್ರಮ್​ ರವಿಚಂದ್ರನ್​.

ಇದನ್ನೂ ಓದಿ: Jio Cinema: ಜಿಯೋ ಸಿನಿಮಾದಲ್ಲಿ ‘ಇನ್‌ಸ್ಟೆಕ್ಟರ್​​ ಅವಿನಾಶ್​’ ಚಿತ್ರ; ಇದರಲ್ಲಿದೆ ರಿಯಲ್​ ಕಹಾನಿ

‘ಪ್ರೇಮ ಮತ್ತು ಯುದ್ಧದಲ್ಲಿ ಎಲ್ಲವೂ ಸರಿ ಎಂಬ ಮಾತಿದೆ. ಆದರೆ ಶಿವ ಮತ್ತು ಅವನ ಬದುಕಿನ ವಿಷಯಕ್ಕೆ ಬಂದಾಗ ಅವನ ಪ್ರೇಮದಲ್ಲಿ ಹಾಗೂ ಬದುಕಿನ ಹೋರಾಟದಲ್ಲಿ ಸರಿ ಎನಿಸುವಂಥದ್ದು ನಡೆಯುವುದೇ ಇಲ್ಲ’ ಎಂದು ತಮ್ಮ ಪಾತ್ರದ ಬಗ್ಗೆ ವಿಕ್ರಮ್ ರವಿಚಂದ್ರನ್ ವಿವರಿಸಿದ್ದಾರೆ. ‘ನನ್ನ ಇಡೀ ವ್ಯಕ್ತಿತ್ವಕ್ಕೇ ಚಾಲೆಂಜ್ ಮಾಡಿದಂಥ ಪಾತ್ರ ಇದರಲ್ಲಿ ಇದೆ. ಅಭಿ ಎಂಬ ಆ ಪಾತ್ರದಲ್ಲಿ ನಟಿಸುತ್ತ ನನ್ನ ವ್ಯಕ್ತಿತ್ವದಲ್ಲೂ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡಿದ್ದೇನೆ. ಬಹುಶಃ ತುಂಬ ಜನರಿಗೆ ಅಭಿ ಇಷ್ಟ ಆಗ್ತಾಳೆ’ ಎಂದಿದ್ದಾರೆ ನಟಿ ಅದಿತಿ ಪ್ರಭುದೇವ.

ಅರುಣ್ ಬ್ರಹ್ಮ ಅವರ ಛಾಯಾಗ್ರಹಣ, ಪ್ರದಿಪ್‌ ರಾಘವ್ ಸಂಕಲನ, ನಿಜಿಲ್‌ ದಿನಕರ್‍ ಸಂಗೀತ ನಿರ್ದೇಶನದಲ್ಲಿ ಈ ವೆಬ್​ ಸಿರೀಸ್​ ಮೂಡಿಬಂದಿದೆ. ರವಿಶಂಕರ್​, ವಿನಯಾ ಪ್ರಸಾದ್, ರಚಿತಾ ಮಹಾಲಕ್ಷ್ಮಿ, ಅಶೋಕ್ ಶರ್ಮ, ಶ್ರೀನಾಥ್, ಅಂಬಿಕಾ, ಶ್ರೀನಿವಾಸ ಮೂರ್ತಿ, ಸುಂದರ್​ರಾಜ್‌ ಸೇರಿದಂತೆ ಅನೇಕ ಅನುಭವಿ ಕಲಾವಿದರು ‘ಲವ್​ ಯೂ ಅಭಿ’ ವೆಬ್​ ಸಿರೀಸ್​ನಲ್ಲಿ ನಟಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.