‘ದಿ ಕೇರಳ ಸ್ಟೋರಿ’ ಒಟಿಟಿಗೆ ಬರುತ್ತಿಲ್ಲವೇಕೆ? ಯಾರೂ ಖರೀದಿಸುತ್ತಿಲ್ಲವೇ?
The Kerala Story: 'ದಿ ಕೇರಳ ಸ್ಟೋರಿ' ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆಗಿಲ್ಲ ಏಕೆ? ಬಿಡುಗಡೆ ವಿಳಂಬವಾಗಲು ಕಾರಣವೇನು?
ಚಿತ್ರಮಂದಿರದಲ್ಲಿ ಬಿಡುಗಡೆ ಆಗುವ ಮುನ್ನ ಹಾಗೂ ಬಿಡುಗಡೆ ಆದ ಬಳಿಕವೂ ಸಾಕಷ್ಟು ಚರ್ಚೆ ಎಬ್ಬಿಸಿದ್ದ ‘ದಿ ಕೇರಳ ಸ್ಟೋರಿ‘ (The Kerala Story) ಸಿನಿಮಾ ಇನ್ನೂ ಯಾವುದೇ ಒಟಿಟಿಗೆ ಬಿಡುಗಡೆ ಆಗಿಲ್ಲ. ತಿಂಗಳ ಹಿಂದೆ ಮಾಧ್ಯಮದವರೊಟ್ಟಿಗೆ ಮಾತನಾಡಿದ್ದ ಸಿನಿಮಾದ ನಿರ್ಮಾಪಕರು (Producer) ನಮ್ಮ ಸಿನಿಮಾವನ್ನು ಯಾವುದೇ ಒಟಿಟಿಗಳು ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದ್ದರು. ಆದರೆ ಸತ್ಯ ಬೇರೆಯೇ ಇದೆ ಎಂಬ ಮಾಹಿತಿ ಇತ್ತೀಚೆಗೆ ಬಹಿರಂಗವಾಗಿದೆ.
‘ದಿ ಕೇರಳ ಸ್ಟೋರಿ’ ಸಿನಿಮಾ ಮೇ 5ರಂದು ಭಾರತ ಸೇರಿದಂತೆ ಕೆಲವು ದೇಶಗಳಲ್ಲಿ ಬಿಡುಗಡೆ ಆಗಿತ್ತು. ಸಿನಿಮಾ ಬಿಡುಗಡೆಗೆ ತಡೆ ನೀಡುವಂತೆ ಕೇರಳ ರಾಜ್ಯಸರ್ಕಾರ ನ್ಯಾಯಾಲಯದ ಮೂಲಕ ಯತ್ನಿಸಿತಾದರೂ ನ್ಯಾಯಾಲಯವು ಅದಕ್ಕೆ ಅನುಮತಿ ನೀಡಲಿಲ್ಲ. ಸಿನಿಮಾ ಬಿಡುಗಡೆ ಆದ ಬಳಿಕ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿತು. ಪ್ರಧಾನಿ ಮೋದಿ ಸೇರಿದಂತೆ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಇನ್ನಿತರ ಬಿಜೆಪಿ ಪ್ರಮುಖರು ಸಿನಿಮಾವನ್ನು ಹೊಗಳಿ ಪ್ರಚಾರ ನೀಡಿದರು. ಮಧ್ಯ ಪ್ರದೇಶ, ಉತ್ತರ ಪ್ರದೇಶಗಳಲ್ಲಿ ಸಿನಿಮಾಕ್ಕೆ ತೆರಿಗೆ ವಿನಾಯಿತಿಯೂ ನೀಡಲಾಯ್ತು. ಆದರೆ ಪಶ್ಚಿಮ ಬಂಗಾಳ ಹಾಗೂ ತಮಿಳುನಾಡುಗಳಲ್ಲಿ ಪ್ರದರ್ಶಕರು, ಸಿನಿಮಾವನ್ನು ಬಿಡುಗಡೆ ಮಾಡಲಿಲ್ಲ.
ಇದನ್ನೂ ಓದಿ:Bastar: ‘ದಿ ಕೇರಳ ಸ್ಟೋರಿ’ ತಂಡದಿಂದ ಹೊಸ ಸಿನಿಮಾ ಅನೌನ್ಸ್; ತೆರೆಗೆ ಬರಲಿದೆ ಮತ್ತೊಂದು ರಿಯಲ್ ಘಟನೆ
ಎಲ್ಲ ವಿವಾದಗಳ ನಡುವೆ ‘ದಿ ಕೇರಳ ಸ್ಟೋರಿ’ ಸಿನಿಮಾ ಉತ್ತಮ ಬಾಕ್ಸ್ ಆಫೀಸ್ ಕಲೆಕ್ಷನ್ ಅನ್ನೇ ಮಾಡಿತು. ಚಿತ್ರಮಂದಿರದಲ್ಲಿ ಸಿನಿಮಾ ನೋಡಲು ಸಾಧ್ಯವಾಗದವರು ಒಟಿಟಿಯಲ್ಲಿ ಸಿನಿಮಾವನ್ನು ನೋಡಲು ಕಾತರರಾಗಿದ್ದರು ಆದರೆ ಸಿನಿಮಾ ಬಿಡುಗಡೆ ಆಗಿ ಎರಡು ತಿಂಗಳಿಗೂ ಹೆಚ್ಚು ಸಮಯವಾದರೂ ಇನ್ನೂ ಸಹ ಒಟಿಟಿಗೆ ‘ದಿ ಕೇರಳ ಸ್ಟೋರಿ’ ಬಿಡುಗಡೆ ಆಗಿಲ್ಲ. ಈ ಮೊದಲು ಮಾತನಾಡಿದ್ದ ಸಿನಿಮಾದ ನಿರ್ಮಾಪಕ ವಿಪುಲ್ ಶಾ, ತಮ್ಮ ಸಿನಿಮಾವನ್ನು ಯಾವ ಒಟಿಟಿಯವರೂ ತೆಗೆದುಕೊಳ್ಳುತ್ತಿಲ್ಲ, ಸ್ಯಾಟಲೈಟ್ ಹಕ್ಕುಗಳನ್ನು ಟಿವಿಯವರೂ ಖರೀದಿಸುತ್ತಿಲ್ಲ, ಉದ್ದೇಶಪೂರ್ವಕವಾಗಿ ಹೀಗೆ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದರು.
ಆದರೆ ಇತ್ತೀಚಿನ ಕೆಲವು ವರದಿಗಳ ಪ್ರಕಾರ, ‘ದಿ ಕೇರಳ ಸ್ಟೋರಿ’ ಸಿನಿಮಾದ ಡಿಜಿಟಲ್ ಹಾಗೂ ಸ್ಯಾಟಲೈಟ್ ಹಕ್ಕು ಮಾರಾಟಕ್ಕೆ ನಿರ್ಮಾಪಕರು ಭಾರಿ ಮೊತ್ತವನ್ನು ಡಿಮ್ಯಾಂಡ್ ಮಾಡಿದ್ದರಂತೆ. ಇದೇ ಕಾರಣಕ್ಕೆ ಒಟಿಟಿ ವೇದಿಕೆಗಳು ಹಾಗೂ ಟಿವಿ ಸಂಸ್ಥೆಗಳು ಹಕ್ಕು ಖರೀದಿಯಿಂದ ಹಿಂದೆ ಸರಿದಿದ್ದವು ಎನ್ನಲಾಗುತ್ತಿದೆ. ನಿರ್ಮಾಪಕ ವಿಫುಲ್ ಶಾ, ತಮ್ಮ ‘ದಿ ಕೇರಳ ಸ್ಟೋರಿ’ ಸಿನಿಮಾ ಮಾರಾಟ ಮಾಡಲು 75 ರಿಂದ 100 ಕೋಟಿ ರೂಪಾಯಿಗಳ ಬೇಡಿಕೆ ಇಟ್ಟಿದ್ದರಂತೆ. ಇದು ಬಹಳ ದೊಡ್ಡ ಮೊತ್ತವಾದ್ದರಿಂದ ಯಾವುದೇ ಟಿವಿ ಹಾಗೂ ಒಟಿಟಿ ವೇದಿಕೆಗಳು ಸಿನಿಮಾವನ್ನು ಖರೀದಿಸಿರಲಿಲ್ಲ.
ಆದರೆ ಅದೇ ಸಿನಿಮಾದ ನಟಿ ಅದಾ ಶರ್ಮಾ ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿರುವ ಪ್ರಕಾರ, ಇತ್ತೀಚೆಗಷ್ಟೆ ಸಿನಿಮಾವನ್ನು ಒಟಿಟಿಯೊಂದು ಖರೀದಿ ಮಾಡಿದ್ದು ಆದಷ್ಟು ಶೀಘ್ರವಾಗಿ ಸಿನಿಮಾ ಬಿಡುಗಡೆ ಆಗಲಿದೆ. ಯಾವ ಒಟಿಟಿ ಎಂದು ನಾನು ಈಗಲೇ ಹೇಳಲಾರೆ ಆದರೆ ಕೆಲವೇ ದಿನಗಳಲ್ಲಿ ನಮ್ಮ ಸಿನಿಮಾ ಒಟಿಟಿಗೆ ಬರುತ್ತದೆ ಎಂದಿದ್ದಾರೆ.
‘ದಿ ಕೇರಳ ಸ್ಟೋರಿ’ ಸಿನಿಮಾವು ಮತಾಂತರದ ವಿರುದ್ಧ ಜಾಗೃತಿ ಮೂಡಿಸಲು ನಿರ್ಮಿಸಲಾದ ಸಿನಿಮಾ ಎಂದು ಚಿತ್ರತಂಡ ಹೇಳಿತ್ತು. ಕೇರಳದಲ್ಲಿ ನಡೆದಿದೆ ಎನ್ನಲಾದ ಮತಾಂತರದ ಸತ್ಯ ಘಟನೆಯನ್ನು ಆಧರಿಸಿ ಸಿನಿಮಾ ಮಾಡಿರುವುದಾಗಿ ನಿರ್ದೇಶಕ ಸುದಿಪ್ತೊ ಸೇನ್ ಹೇಳಿದ್ದರು. ಈ ಸಿನಿಮಾವು ವಿಶ್ವದಾದ್ಯಂತ ಸುಮಾರು 240 ಕೋಟಿ ರೂಪಾಯಿ ಹಣಗಳಿಕೆ ಮಾಡಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ